ಸಾರಾಂಶ
ಸುರೇಶ ಯಳಕಪ್ಪನವರ
ಹಗರಿಬೊಮ್ಮನಹಳ್ಳಿ: ಯಾವುದೇ ಕಾರಣಕ್ಕೂ ತಮ್ಮ ಗ್ರಾಮದಲ್ಲಿ ಎಂಎಸ್‌ಐಎಲ್ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆ ಪ್ರಾರಂಭಿಸುವುದು ಬೇಡ ಎಂದು ತಾಲೂಕಿನ ಮಾಲವಿ ಗ್ರಾಮಸ್ಥರು, ಗ್ರಾಕೂಸ್ ಸಂಘಟನೆಯವರು ಒತ್ತಾಯಿಸಿದರೆ, ಇತ್ತ ಜೆಡಿಎಸ್ ಶಾಸಕ ನೇಮರಾಜನಾಯ್ಕ ಮಾಲವಿ ಗ್ರಾಮದಲ್ಲಿಯೇ ಮದ್ಯಮಾರಾಟ ಮಳಿಗೆ ಆರಂಭಿಸಿ ಎಂದು ಅಬಕಾರಿ ಇಲಾಖೆಗೆ ಪತ್ರ ಬರೆದಿರುವುದು ಮಾಲವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರನ್ನು ಕೆರಳಿಸಿದೆ.ಕಳೆದ ೨ವರ್ಷಗಳ ಕಾಲ ಗ್ರಾಕೂಸ್ ಸಂಘಟನೆಯವರು, ಮಾಲವಿ ಗ್ರಾಮಸ್ಥರು ಹೋರಾಟ ಮಾಡಿದ ಫಲವಾಗಿ ಮಾಲವಿ ಗ್ರಾಮದಲ್ಲಿ ಆರಂಭವಾಗಬೇಕಿದ್ದ ಮದ್ಯಮಾರಾಟ ಮಳಿಗೆ ಇತ್ತೀಚೆಗೆ ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮಕ್ಕೆ ಅಬಕಾರಿ ಇಲಾಖೆಯವರು ವರ್ಗಾಯಿಸಿದ್ದರು. ಆದರೆ, ಶಾಸಕರು ಇದನ್ನು ವರ್ಗಾಯಿಸುವುದಕ್ಕೆ ಕೊಕ್ಕೆ ಹಾಕಿ, ಮಾಲವಿ ಗ್ರಾಮದಲ್ಲಿಯೇ ಮದ್ಯಮಾರಾಟ ಮಳಿಗೆ ಆರಂಭಿಸಿ ಎಂದು ವಿಜಯನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಗೆ ಪತ್ರ ಬರೆದಿರುವುದು ಗ್ರಾಮದ ಮಹಿಳೆಯರನ್ನು ರೊಚ್ಚಿಗೆಬ್ಬಿಸಿದೆ. ಮಾಲವಿ ಗ್ರಾಮದಲ್ಲಿ ಕುಡಿತದಿಂದಾಗಿ ಅಪರಾಧ ಪ್ರಕರಣ, ಸಮಾಜಘಾತುಕ ಘಟನೆಗಳು ನಡೆದರೆ ಶಾಸಕರೇ ನೇರ ಹೊಣೆಯಾಗುತ್ತಾರೆ ಎಂದು ಗ್ರಾಕೂಸ್‌ನ ತ್ರೀವೇಣಿ, ನೀಲಮ್ಮ ಎಚ್ಚರಿಸಿದ್ದಾರೆ.
ಪ್ರವಾಸಿ ತಾಣ: ಮಾಲವಿ ಗ್ರಾಮದಲ್ಲಿ ರೈತರ ಜೀವನಾಡಿ ಜಲಾಶಯ ಇರುವುದರಿಂದ ಪ್ರವಾಸಿ ತಾಣವಾಗಿದೆ. ಇಲ್ಲಿ ತೋಟಗಾರಿಕಾ ತರಬೇತಿ ಕೇಂದ್ರ, ರಾಜ್ಯದಲ್ಲಿಯೇ ಪ್ರಸಿದ್ಧಿಯಾದ ಚಾಲಕ ತರಬೇತಿ ಕೇಂದ್ರ ಇರುವ ಇಂತಹ ಸ್ಥಳದಲ್ಲಿ ಮದ್ಯಮಾರಾಟ ಮಳಿಗೆ ಸ್ಥಾಪಿಸುವುದು ಬೇಡ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಕಳೆದ ಎರಡು ವರ್ಷಗಳಿಂದ ಮಾಲವಿ ಗ್ರಾಮಸ್ಥರು, ಗ್ರಾಕೂಸ್ ಸಂಘಟನೆಯವರು ಮದ್ಯಮಾರಾಟ ವಿರೋಧಿಸಿ ಹೋರಾಟ ಮಾಡಿದ್ದಾರೆ. ಆರಂಭದ ಸೂಚನೆಯ ಪ್ರತಿ ಬಾರಿಯೂ ಗ್ರಾಮದ ಮಹಿಳೆಯರು ಅತ್ಯಂತ ಒಗ್ಗಟ್ಟಿನಿಂದ ಹೋರಾಟ ಮಾಡಿ ಮದ್ಯ ಮಾರಾಟವನ್ನು ತಡೆದಿದ್ದಾರೆ.ಪ್ರತಿಭಟನೆ: ಈಗ ಮಾಲವಿ ಗ್ರಾಮದಲ್ಲಿಯೇ ಮದ್ಯಮಾರಾಟ ಮಳಿಗೆ ಆರಂಭವಾಗುತ್ತದೆ ಎಂಬ ಸುದ್ದಿ ಕೇಳಿ ಗ್ರಾಮದ ಮಹಿಳೆಯರು ಗರ ಬಡಿದವರಂತಾಗಿ, ವಿಜಯನಗರ ಜಿಲ್ಲಾಧಿಕಾರಿ ಕಚೇರಿಗೆ ದೌಡಾಯಿಸಿ ಯಾವುದೇ ಕಾರಣಕ್ಕೂ ನಮ್ಮ ಗ್ರಾಮದಲ್ಲಿ ಮದ್ಯಮಾರಾಟ ಮಳಿಗೆ ಸ್ಥಾಪಿಸಬಾರದು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಾಲವಿ ಗ್ರಾಮಸ್ಥರು, ಗ್ರಾಕೂಸ್ ಸಂಘಟನೆಯವರು ಸೇರಿ ೨೦೦ಕ್ಕೂ ಹೆಚ್ಚು ಜನರು ಇದ್ದರು. ೧೫೦ಕ್ಕೂ ಹೆಚ್ಚು ಮಹಿಳೆಯರೇ ಪಾಲ್ಗೊಂಡು ಗಮನ ಸೆಳೆದರು.
ಜಿಲ್ಲಾಧಿಕಾರಿ ದಿವಾಕರ ಪ್ರತಿಕ್ರಿಯಿಸಿ, ಮಾಲವಿ ಗ್ರಾಮದಲ್ಲಿ ಮದ್ಯಮಾರಾಟ ಮಳಿಗೆ ಆರಂಭಿಸುವ ವಿಷಯ ಕುರಿತು, ಅಬಕಾರಿ ಕಮಿಷನರ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ಪ್ರತಿಭಟನೆಯಲ್ಲಿ ಶೈನಾಜ್, ಸುಧಾ, ಸುಮ, ಸುರೇಶ್, ಮಂಜುನಾಥ, ಈಶಪ್ಪ, ತಳವಾರ ನಾಗಮ್ಮ, ಕೊಟಿಗಿ ನಾಗರಾಜ, ಶಿಲ್ಪಾ, ಅಂಜಿನಮ್ಮ, ರೇಣುಕಮ್ಮ, ಪ್ರಕಾಶ್, ದುರುಗಪ್ಪ, ನೇತ್ರಾವತಿ ಇತರರಿದ್ದರು.ಬೇಸರ ತರಿಸಿದೆ: ಕಳೆದ ಅವಧಿಯಲ್ಲಿ ಮಾಲವಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿರುವ ವಿಷಯ ಖುಷಿ ನೀಡಿದರೆ, ಇದೇ ಗ್ರಾಮದಲ್ಲಿ ಮದ್ಯಮಾರಾಟ ಮಳಿಗೆ ಪ್ರಾರಂಭ ಮಾಡಲು ಹೊರಟಿರುವ ಹಾಲಿ ಶಾಸಕರ ನಡೆ ನಿಜಕ್ಕೂ ಬೇಸರ ತರಿಸದೆ ಎಂದು ಗ್ರಾಕೂಸ್ ರಾಜ್ಯ ಕಾರ್ಯಕರ್ತ ಮಲ್ಲೇಶ್ ಕೋಗಳಿ ತಿಳಿಸಿದರು.
ಜನತೆಗೆ ಪ್ರದರ್ಶನ: ಮಾಲವಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿ ಎಂದು ಶಾಸಕರಿಗೆ ಮನವಿ ಕೊಟ್ಟರೆ, ಇವರು ಗ್ರಾಮದಲ್ಲಿ ಮದ್ಯಮಾರಾಟ ಮಳಿಗೆ ಪ್ರಾರಂಭಿಸಲು ಶಿಫಾರಸು ಮಾಡಿರುವ ಇವರ ನಡೆ ಎಂಥದ್ದು ಎಂಬುದು ಕ್ಷೇತ್ರದ ಜನತೆಗೆ ಪ್ರದರ್ಶನವಾಗುತ್ತಿದೆ ಎಂದು ಮಾಲವಿ ಗ್ರಾಮದ ಮುಖಂಡ ಹ್ಯಾಳ್ಯಾದ ಚನ್ನಬಸಪ್ಪ ಹೇಳಿದರು.ಮಹಿಳೆಯರ ಶಾಪ: ಜನಪ್ರತಿನಿಧಿಗಳು ಉತ್ತಮ ಕೆಲಸಗಳನ್ನು ಮಾಡಬೇಕು. ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಕೆಲಸ ಮಾಡಬಾರದು. ಮಾಲವಿ ಗ್ರಾಮದಲ್ಲಿಯೇ ಮದ್ಯ ಮಾರಾಟ ಮಳಿಗೆ ಆರಂಭಿಸಿ ಎಂದು ಶಾಸಕರು ಅಬಕಾರಿ ಇಲಾಖೆಗೆ ನೀಡಿರುವ ಶಿಫಾರಸು ಪತ್ರದಿಂದಾಗಿ ಗ್ರಾಮದ ಮಹಿಳೆಯರ ಮನಸ್ಸು ನೊಂದಿದೆ. ಗ್ರಾಮದ ನೊಂದ ಮಹಿಳೆಯರ ಶಾಪ ಶಾಸಕರಿಗೆ ತಟ್ಟುತ್ತದೆ ಎಂದು ಗ್ರಾಕೂಸ್ ಸಂಚಾಲಕಿ ಎಂ.ಬಿ. ಕೊಟ್ರಮ್ಮ ತಿಳಿಸಿದರು.