ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕ ವಲಯದಲ್ಲಿರುವ ಪತ್ರಿಕಾ ವಿತರಕರಿಗೆ ಇ-ಶ್ರಮ ಯೋಜನೆ ಕಲ್ಪಿಸಿದ್ದು, ಇದರ ಅನುಕೂಲವನ್ನು ಅರ್ಹರು ಪಡೆದುಕೊಳ್ಳಿ ಎಂದು ಹಿರಿಯ ಕಾರ್ಮಿಕ ನಿರೀಕ್ಷಕಿ ಬಿ. ಮಂಗಳಗೌರಿ ಹೇಳಿದರು.ಪಟ್ಟಣದ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಗುರುವಾರ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ದಿನ ಪತ್ರಿಕೆ ವಿತರಕರಿಗೆ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯಡಿ ಇ-ಶ್ರಮ್ ಕಾರ್ಡ್ ನೋಂದಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಸಂಘಟಿತ ವಲಯದ ವ್ಯಾಪ್ತಿಗೆ ಬರುವ ಪತ್ರಿಕಾ ವಿತರಕರು ಪತ್ರಿಕೆ ವಿತರಿಸಲು ಬೈಸಿಕಲ್ ಮತ್ತು ದ್ವಿಚಕ್ರ ವಾಹನಗಳಲ್ಲಿ ನಿತ್ಯ ಮುಂಜಾನೆ ಮತ್ತು ಸಂಜೆ ಸಂಚರಿಸುವ ಸಂದರ್ಭದಲ್ಲಿ ಅಪಘಾತಗಳಾಗುವ ಸಾಧ್ಯತೆಗಳಿರುವುದರಿಂದ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.16 ರಿಂದ 59 ವರ್ಷದೊಳಗಿನವರು ಇಎಸ್ ಐ, ಇಪಿಎಫ್ ಸೌಲಭ್ಯ ಹೊಂದಿರದ ಮತ್ತು ಆದಾಯ ತೆರಿಗೆ ಪಾವತಿದಾರರಾಗಿರದ ಎಲ್ಲರೂ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಅವರು ಅಪಘಾತದಲ್ಲಿ ಮೃತಪಟ್ಟರೆ ವಾರಸುದಾರರಿಗೆ 2 ಲಕ್ಷ ರು. ಪರಿಹಾರ ಮತ್ತು ಶಾಶ್ವತ ಅಂಗವಿಕಲತೆ ಹೊಂದಿದರೆ 2 ಲಕ್ಷ ರು. ಹಾಗೂ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚದ ಮರು ಪಾವತಿಯಾಗಿ 1 ಲಕ್ಷ ರು.ಗಳವರೆಗೆ ನೀಡಲು ಅವಕಾಶವಿದೆ ಎಂದು ಮಾಹಿತಿ ನೀಡಿದ ಅವರು, ಇ-ಶ್ರಮ ಪೋರ್ಟಲ್ ಮೂಲಕವೂ ಸ್ವಯಂ ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.
ಪತ್ರಿಕಾ ವಿತರಕರಿಗೆ ಇ-ಶ್ರಮ್ ಕಾರ್ಡ್ ನೋದಾಯಿಸಿಕೊಂಡ ಪತ್ರಿಕಾ ವಿತರಿಕರಿಗೆ ಕಾರ್ಡ್ಗಳನ್ನು ವಿತರಿಸಲಾಯಿತು.ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ರಾಮಕೃಷ್ಣೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರವಿಕುಮಾರ್, ನಿರ್ದೇಶಕರಾದ ಕೆ.ಆರ್. ಶ್ರೀನಿವಾಸ್, ಮಹಮದ್ ಶಬೀರ್, ಎಸ್.ಯೋಗಾನಂದ, ಸದಸ್ಯರಾದ ಶಂಕರ್, ಜಿ.ಕೆ. ನಾಗಣ್ಣ, ತಾಲೂಕು ವರದಿಗಾರರ ಕೂಟದ ಅಧ್ಯಕ್ಷ ಕುಪ್ಪೆ ಮಹದೇವಸ್ವಾಮಿ, ಪತ್ರಕರ್ತ ಕೆ.ಎಸ್. ವಿನೋದರಾಜ್, ಕಾರ್ಮಿಕ ಇಲಾಖೆ ಡಿಇಒ ಚಂದ್ರಕಾಂತ್, ಶ್ರೀವೀರಭದ್ರೇಶ್ವರ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ನಟರಾಜ್, ಕಚೇರಿ ಸಿಬ್ಬಂದಿ ದನುಶ, ಮಧುರ ಇದ್ದರು.