ಮಳಲೂರು ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಲು ರೈತ ಸಂಘ ಆಗ್ರಹ

| Published : Jan 12 2024, 01:45 AM IST

ಮಳಲೂರು ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಲು ರೈತ ಸಂಘ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

1600 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದೆ ಹೋದರೆ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಗೂ ಮೂಡಿಗೆರೆ ಶಾಸಕರ ನಿವಾಸದ ಎದುರು ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹೇಳಿದರು.

- ಲೋಕಸಭಾ ಚುನಾವಣೆ ಬಹಿಷ್ಕಾರ, ಅನಿರ್ಧಿಷ್ಟಾವಧಿ ಧರಣಿ ಎಚ್ಚರಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸುಮಾರು 1600 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದೆ ಹೋದರೆ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಗೂ ಮೂಡಿಗೆರೆ ಶಾಸಕರ ನಿವಾಸದ ಎದುರು ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾ ಬರಗಾಲಕ್ಕೆ ತುತ್ತಾಗುವ ಮಳಲೂರು ಕಲ್ಲಹಳ್ಳಿ, ಕಂಬಿಹಳ್ಳಿ, ಸಿರಗಾಪುರ, ಬಿಗ್ಗನಹಳ್ಳಿ, ತಗಡೂರು, ಕದ್ರಿಮಿದ್ರಿ ಗ್ರಾಮಗಳ ನೀರಿನ ಬವಣೆ ತಪ್ಪಿಸುವ ಸಲುವಾಗಿ 1998 ರಲ್ಲಿ ಮಳಲೂರು ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು ಎಂದರು.

2000ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರ ಯೋಜನಾ ವೆಚ್ಚ 2.52 ಕೋಟಿ ರು. ಈಗಾಗಲೇ ಜಾಕವೆಲ್‌, ಇಂಟರ್‌ವೆಲ್‌, ರೈಸಿಂಗ್‌ಮೆಸ್‌, ಪಂಪ್‌ ಹೌಸ್‌ ಸೇರಿದಂತೆ ಮೊದಲ ಹಂತದ ಕಾಮಗಾರಿ 15 ವರ್ಷಗಳ ಹಿಂದೆ ಮುಕ್ತಾಯ ಗೊಂಡಿತ್ತು. ಆದರೆ, ಎರಡನೇ ಹಂತದ ಕಾಮಗಾರಿ ತಟಸ್ಥಗೊಂಡಿದೆ ಎಂದು ಹೇಳಿದರು.

ರೈತರ ಜಮೀನಿಗೆ ನೇರ ಖರೀದಿ ಯೋಜನೆಯಡಿ ಪರಿಹಾರ ಒದಗಿಸಲಾಗಿದೆ. ಇನ್ನು 13.08 ಎಕರೆ ಪ್ರದೇಶದ ರೈತರು ನೇರ ಖರೀದಿ ಯೋಜನೆಗೆ ಒಪ್ಪದ ಕಾರಣದಿಂದ ಪರಿಹಾರ ವಿಳಂಬವಾಗಿದೆ ಎಂದು ಇಲಾಖೆ ಹೇಳುತ್ತಿದೆ.

ಈ ಯೋಜನೆ ಈಗಿನ ವೆಚ್ಚ 25 ಕೋಟಿ ರು.ಗಳಿಗೆ ತಲುಪಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ಮುತುವರ್ಜಿ ವಹಿಸಿ ಬಾಕಿ ಉಳಿದಿರುವ ಕಾಮಗಾರಿಯನ್ನು ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಂ.ಸಿ. ಬಸವರಾಜು, ರಾಜ್ಯ ಸಮಿತಿ ಸದಸ್ಯ ಕೆ.ಕೆ. ಕೃಷ್ಣೇಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ್‌, ಕಾರ್ಯದರ್ಶಿ ಲೋಕೇಶ್‌ ಹಿರೇಮಗಳೂರು ಉಪಸ್ಥಿತರಿದ್ದರು. 11 ಕೆಸಿಕೆಎಂ 3