2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 124ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ 2000 ಬೋಧಕ ಹುದ್ದೆ ಭರ್ತಿ ಮಾಡಲು ಕ್ರಮವಹಿಸುವುದಾಗಿ ಘೋಷಿಸಲಾಗಿದ್ದು, ಅದರನ್ವಯ ಶೀಘ್ರ ಖಾಲಿ ಹುದ್ದೆ ಭರ್ತಿಗೆ ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 826 ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, 2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 124ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ 2000 ಬೋಧಕ ಹುದ್ದೆ ಭರ್ತಿ ಮಾಡಲು ಕ್ರಮವಹಿಸುವುದಾಗಿ ಘೋಷಿಸಲಾಗಿದ್ದು, ಅದರನ್ವಯ ಶೀಘ್ರ ಖಾಲಿ ಹುದ್ದೆ ಭರ್ತಿಗೆ ನಿರ್ಧರಿಸಲಾಗಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಸಂಬಂಧ ವಿಭಾಗೀಯ ಪೀಠವು Chief Justice Bench) ನೀಡಿರುವ ತೀರ್ಪಿನ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್‌ಎಲ್‌ಪಿ. ಅನ್ನು ದಾಖಲಿಸಲು ಸರ್ಕಾರದಿಂದ ಕಾರ್ಯಕಾರಿ ಆದೇಶ ಹೊರಡಿಸಲಾಗಿದೆ. 2025ರ ಅಕ್ಟೋಬರ್ 8ರಂದು ವಿಭಾಗೀಯ ಪೀಠವು (Chief Justice Bench) ನೀಡಿರುವ ತೀರ್ಪಿನ ಕುರಿತು ಕಾನೂನು ಅಭಿಪ್ರಾಯ ಪಡೆದು ಕಾರ್ಯಕಾರಿ ಆದೇಶ ಹೊರಡಿಸಲಾಗಿದೆ ಎಂದು ಉತ್ತರಿಸಿದ್ದಾರೆ.

ಶಾಸಕ ಮಧು ಜಿ.ಮಾದೇಗೌಡ, ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡಿಮೆ ಗೌರವಧನ ಪಡೆದು ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಯುಜಿಸಿ ಮಾನದಂಡಗಳ ಅರ್ಹತೆ ಪಡೆಯದ ಅತಿಥಿ ಉಪನ್ಯಾಸಕರನ್ನು ಮಾನವೀಯ ನೆಲೆಗಟ್ಟಿನಲ್ಲಿ ಮುಂದುವರೆಸುವ ಹಾಗೂ ಹೈಕೋರ್ಟ್ ತೀರ್ಪಿನ ಅನ್ವಯ ಕಾನೂನು ತೊಡಕು ಎದುರಾಗದಂತೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಕ್ರಮ ಕುರಿತು ಪ್ರಶ್ನೆ ಕೇಳಿದ್ದರು.

ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅಫೀಲು ಅರ್ಜಿ ಕುರಿತು ತೀರ್ಪು ನೀಡಿ ಅತಿಥಿ ಉಪನ್ಯಾಸಕರ ಆಯ್ಕೆಗೆ ಯುಜಿಸಿ ವಿದ್ಯಾರ್ಹತೆ (ಎನ್.ಇ.ಟಿ/ಎಸ್.ಎಲ್.ಇ.ಟಿ/ಪಿ.ಎಚ್.ಡಿ) ಮಾನದಂಡವನ್ನು ಅನುಸರಿಸುವಂತೆ ಆದೇಶಿಸಿತ್ತು. ಈ ತೀರ್ಪನ್ನು ವಿಭಾಗೀಯ ಪೀಠವು (Chief Justice Bench) ಎತ್ತಿ ಹಿಡಿದು, 2025-26ನೇ ಸಾಲಿನಿಂದ ಯುಜಿಸಿ ನಿಯಮಗಳನ್ವಯ ನೇಮಕ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿತ್ತು.