2025-26ನೇ ಸಾಲಿಗೆ ಗ್ರಾಪಂಗಳಿಗೆ ಬಿಡುಗಡೆಯಾಗಬೇಕಾದ 15ನೇ ಹಣಕಾಸು ಆಯೋಗದ ಅನುದಾನ ಇದುವರೆವಿಗೂ ಬಿಡುಗಡೆಯಾಗಿಲ್ಲ. ಕೂಡಲೇ ಕೇಂದ್ರ ಸರ್ಕಾರದಿಂದ ಸದರಿ ಅನುದಾನವನ್ನು ತರಿಸಿಕೊಂಡು ಗ್ರಾಪಂಗಳಿಗೆ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಗ್ರಾಪಂ ಸದಸ್ಯರು (ಡಿ.9)ರಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಬೇವಿನಹಳ್ಳಿ ಮಹೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025-26ನೇ ಸಾಲಿಗೆ ಗ್ರಾಪಂಗಳಿಗೆ ಬಿಡುಗಡೆಯಾಗಬೇಕಾದ 15ನೇ ಹಣಕಾಸು ಆಯೋಗದ ಅನುದಾನ ಇದುವರೆವಿಗೂ ಬಿಡುಗಡೆಯಾಗಿಲ್ಲ. ಕೂಡಲೇ ಕೇಂದ್ರ ಸರ್ಕಾರದಿಂದ ಸದರಿ ಅನುದಾನವನ್ನು ತರಿಸಿಕೊಂಡು ಗ್ರಾಪಂಗಳಿಗೆ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುಷ್ಠಾನ ಮಾಡಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಸಾಮಗ್ರಿ ವೆಚ್ಚ, 2025 ಜನವರಿಯಿಂದ ಇದುವರೆವಿಗೂ ಬಿಡುಗಡೆಯಾಗಿಲ್ಲ. ಗ್ರಾಪಂ ಹಂತದ ಗ್ರಂಥಾಲಯಗಳ (ಅರಿವು ಕೇಂದ್ರ) ಮೇಲ್ವಿಚಾರಕರಿಗೆ ರಾಜ್ಯ ಸರ್ಕಾರದಿಂದ 12 ಸಾವಿರ ರು., ಗ್ರಾಪಂಗಳು ಸಂಗ್ರಹಿಸುವ ಗ್ರಂಥಾಲಯ ಕರ ಹಾಗೂ ಗ್ರಾಪಂಗಳ ಸ್ವಂತ ಸಂಪನ್ಮೂಲ ಹೀಗೆ ಮೂರು ಮೂಲಗಳಿಂದ ಹಣ ಸಂಗ್ರಹಿಸಿ ಮಾಸಿಕ ಕನಿಷ್ಠ ವೇತನ ನೀಡಲಾಗುತ್ತಿದೆ. ಇದರಿಂದಾಗಿ ಗ್ರಾಪಂಗಳ ಮೇಲೆ ಆರ್ಥಿಕ ಹೊರೆಯಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವೇ ಗ್ರಂಥಾಲಯ ಮೇಲ್ವಿಚಾರಕರ ಮಾಸಿಕ ಕನಿಷ್ಠ ವೇತನವನ್ನು ಸಂಪೂರ್ಣವಾಗಿ ಭರಿಸಬೇಕು ಎಂದು ಆಗ್ರಹಿಸಿದರು.

ಗ್ರಾಪಂಗಳ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಜೀವಿನಿ ಸಂಘಗಳ ಮಹಿಳೆಯರು, ತ್ಯಾಜ್ಯ ಸಂಗ್ರಹಣೆ ಮತ್ತು ಮಾರಾಟದ ಮೂಲಕ ಮಾಸಿಕ ಗೌರವ ಧನ ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಪಂಗಳನ್ನು ಅವರ ಮಾಸಿಕ ಗೌರವ ಧನಕ್ಕಾಗಿ ಒತ್ತಾಯಿಸುತ್ತಿದ್ದು, ಗಾಪಂಗಳಿಗೆ ಅದು ಕಷ್ಟಸಾಧ್ಯವಾಗಿರುತ್ತದೆ. ಆದ್ದರಂದ ರಾಜ್ಯ ಸರ್ಕಾರವೇ ಅವರ ಮಾಸಿಕ ಗೌರವ ಧನ ಭರಿಸಬೇಕು ಎಂದು ಒತ್ತಾಯಿಸಿದರು.

ಕೂಸಿನ ಮನೆ ಕಾರ್ಯಕರ್ತೆಯರಿಗೆ ಉದ್ಯೋಗ ಖಾತ್ರಿ ಯೋಜನೆಯಿಂದ ಗೌರವ ಧನ ನೀಡಲು ಸಾಧ್ಯವಿಲ್ಲವೆಂದು ಇತ್ತೀಚೆಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದ್ದರಿಂದ ಅವರಿಗೂ ಸಹ ರಾಜ್ಯ ಸರ್ಕಾರವೇ ಮಾಸಿಕ ಗೌರವ ಧನ ನೀಡಬೇಕು ಎಂದರು.

ಈ ಹಿಂದೆ ನಮ್ಮ ಮಹಾ ಒಕ್ಕೂಟವು 28 ಬೇಡಿಕೆಗಳನ್ನು ಸರ್ಕಾದ ಮುಂದಿಟ್ಟು ಹೋರಾಟ ಮಾಡಿತ್ತು. ಅವುಗಳಲ್ಲಿ ಅನೇಕ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಈಡೇರಿಸಿದ್ದು, ಉಳಿಕೆ ಬೇಡಿಕೆ ಶೀಘ್ರವೇ ಈಡೇರಿಸುವಂತೆ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಕೆಂಪೇಗೌಡ, ಅಧ್ಯಕ್ಷ ಪ್ರದೀಪ್, ಗ್ರಾಪಂ ಮಾಜಿ ಅಧ್ಯಕ್ಷ ಎಂ. ಚಾಮರಾಜು, ಕೆಂಪಾಚಾರಿ, ಅರ್ಪಿತಾ ಇದ್ದರು.