ಸಾರಾಂಶ
ನಗರದ ಸರ್ಕಾರಿ ಉನ್ನತ ತರಬೇತಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮಾನವನ ಅಸ್ಥಿಪಂಜರದ ಮಾದರಿಯನ್ನು ಪ್ರದರ್ಶಿಸಿದರು.
ಮಕ್ಕಳ ಕಲಿಕೆ ಪರಿಶೀಲನೆಯಲ್ಲಿ ಪರಿವೀಕ್ಷಕ ಕೆ.ಜಿ.ಪ್ರಶಾಂತ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶಿಕ್ಷಕರು ತರಗತಿ ನಿರ್ವಹಣೆಯಲ್ಲಿ ಕ್ರಿಯಾಶೀಲತೆಯಿಂದ ಬೋಧಿಸಬೇಕು. ಇದರಿಂದ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಕೆ.ಜಿ.ಪ್ರಶಾಂತ್ ಹೇಳಿದರು.ನಗರದ ಸರ್ಕಾರಿ ಉನ್ನತ ತರಬೇತಿ ಪ್ರಾಥಮಿಕ ಶಾಲೆಗೆ ಸೋಮವಾರ ಭೇಟಿ ನೀಡಿ ಮಕ್ಕಳ ಕಲಿಕೆ ಪರಿಶೀಲಿಸಿ ಮಾತನಾಡಿದ ಅವರು, ಪಠ್ಯ ವಿಷಯವನ್ನು ಹೊಸ ಚಿಂತನೆ, ಆಲೋಚನೆಯೊಂದಿಗೆ ನಾವಿನ್ಯಯುತವಾಗಿ ಬೋಧಿಸಬೇಕು. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದಲ್ಲಿ ಸಾಮರ್ಥ್ಯ ಬೆಳೆಸಿದಾಗ ಉನ್ನತ ಹಂತದ ಶಿಕ್ಷಣ ಕಲಿಯಲು ಸುಲಭವಾಗುತ್ತದೆ ಎಂದು ತಿಳಿಸಿದರು.
ಡಯಟ್ ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಒಳನೋಟ ಅಗತ್ಯವಾಗಿದ್ದು ಮಕ್ಕಳ ಮನಸ್ಥಿತಿ, ಬುದ್ಧಿಮಟ್ಟ ಅರಿತು ಬೋಧಿಸಬೇಕು. ಪ್ರಯೋಗಾತ್ಮಕ ಚಟುವಟಿಕೆ ಮೂಲಕ ಕಲಿಯುವುದರಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ. ವಿಜ್ಞಾನ ವಿಷಯದ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು ಕಲಿಕಾ ಸಾಮಗ್ರಿಗಳ ಬಳಕೆ ಮತ್ತು ಪ್ರಯೋಗಾಧಾರಿತ ಬೋಧನೆ ಅವಶ್ಯವಾಗಿದೆ. ಪ್ರಯೋಗ ಮತ್ತು ಕಲಿಕಾ ಸಾಮಗ್ರಿಗಳ ಬಳಕೆಯು ಮಕ್ಕಳಲ್ಲಿ ಕುತೂಹಲ, ಆಸಕ್ತಿ ಮೂಡಿಸುತ್ತದೆ. ಕಲಿಕಾರ್ಥಿಯನ್ನು ಕಲಿಕೆಯೆಡೆಗೆ ಪ್ರೇರೇಪಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ ಇದರಿಂದ ವಿದ್ಯಾರ್ಥಿಗಳು ಯಾಂತ್ರಿಕವಾಗಿ ಕಲಿಯದೆ ಪರಿಕಲ್ಪನೆಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಈ ವಿಧಾನ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಶಿಕ್ಷಕ ಸಂತೋಷ್ ಕುಮಾರ್ ಗಣಿತ, ವಿಜ್ಞಾನ ವಿಷಯ ಬೋಧನೆಯಲ್ಲಿ ಪ್ರಯೋಗಾಧಾರಿತ ಚಟುವಟಿಕೆ ಮೂಲಕ ಬೋಧಿಸುತ್ತಿರುವುದು ಶ್ಲಾಘನೀಯ. ಸ್ವಂತ ಹಣದಿಂದ ಕಲಿಕಾ ಸಾಮಗ್ರಿಗಳನ್ನು ಒದಗಿಸಿ ವಿದ್ಯಾರ್ಥಿಗಳಿಂದಲೇ ಕಡಿಮೆ ವೆಚ್ಚದಲ್ಲಿ ವಿಜ್ಞಾನ ಕಲಿಕಾ ಉಪಕರಣಗಳ ಮಾದರಿ ತಯಾರಿಸಿರುವುದು ಸಂತಸದ ಸಂಗತಿಯಾಗಿದೆ ಎಂದರು. ಈ ವೇಳೆ ಮುಖ್ಯ ಶಿಕ್ಷಕ ಎಸ್. ರಾಜಪ್ಪ, ಶಿಕ್ಷಕರಾದ ಸಂತೋóಷ್ ಕುಮಾರ್, ಭಾರತಮ್ಮ, ವಿಜಯಲಕ್ಷ್ಮಿ ಇದ್ದರು.