ಕವಿತೆಗಳು ಜನರ ಕಣ್ಣು ತೆರೆಸುವಂತಿರಬೇಕು: ಡಾ.ಲಲಿತಾ ಹೊಸಪ್ಯಾಟಿ

| Published : Feb 25 2025, 12:50 AM IST

ಸಾರಾಂಶ

ಕವಿತೆಗಳು ಜನರ ಕಣ್ಣು ತೆರೆಸುವಂತಿರಬೇಕು. ಕವಿ ಮರೆಯಾದರೂ ಕವಿತೆ ಮರೆಯಾಗಬಾರದು. ಕವಿತೆ ಸಾರ್ವಕಾಲಿಕ ಸತ್ಯವಾದದು. ಕವಿತೆ ದಾರಿದೀಪಗಳಾಗಬೇಕು. ಕವಿತೆ ಅಕ್ಷರಗಳ ಜೋಡಣೆ ಆಗಬಾರದು. ಕವಿತೆ ಸಮಾಜಕ್ಕೆ ಸಂದೇಶ ನೀಡುವಂತಿರಬೇಕು. ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲು ಬಂದಿರುವ ಕವಿಗಳು ತಾವು ಬರೆದಿರುವ ಕವನಗಳ ಆಯ್ಕೆ ಪ್ರಮುಖವಾಗಿರುತ್ತದೆ ಎಂದು ಹುನಗುಂದದ ಕವಿಯತ್ರಿ ಡಾ.ಲಲಿತಾ ಹೊಸಪ್ಯಾಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಕವಿತೆಗಳು ಜನರ ಕಣ್ಣು ತೆರೆಸುವಂತಿರಬೇಕು. ಕವಿ ಮರೆಯಾದರೂ ಕವಿತೆ ಮರೆಯಾಗಬಾರದು. ಕವಿತೆ ಸಾರ್ವಕಾಲಿಕ ಸತ್ಯವಾದದು. ಕವಿತೆ ದಾರಿದೀಪಗಳಾಗಬೇಕು. ಕವಿತೆ ಅಕ್ಷರಗಳ ಜೋಡಣೆ ಆಗಬಾರದು. ಕವಿತೆ ಸಮಾಜಕ್ಕೆ ಸಂದೇಶ ನೀಡುವಂತಿರಬೇಕು. ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲು ಬಂದಿರುವ ಕವಿಗಳು ತಾವು ಬರೆದಿರುವ ಕವನಗಳ ಆಯ್ಕೆ ಪ್ರಮುಖವಾಗಿರುತ್ತದೆ ಎಂದು ಹುನಗುಂದದ ಕವಿಯತ್ರಿ ಡಾ.ಲಲಿತಾ ಹೊಸಪ್ಯಾಟಿ ಹೇಳಿದರು.

ರನ್ನ ವೈಭವ-2025ರ ನಿಮಿತ್ತ ಮುಧೋಳ ರನ್ನ ಭವನದ ಅಜೀತಸೇನಾಚಾರ್ಯರ ವೇದಿಕೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದರು. ಮರೇಗುದ್ದಿ ಅಡವಿ ಸಿದ್ದೇಶ್ವರ ಮಠದ ನಿರುಪಾಧೀಶ್ವರ ಸ್ವಾಮೀಜಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಗದಾಯುದ್ಧದಲ್ಲಿ ರನ್ನ ತನ್ನ ಆಶ್ರಯದಾತ ಅರಸ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿ ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದೆಂದು ಹೇಳಿದ ಅವರು, ಭೀಮನ ಪರಾಕ್ರಮವನ್ನಷ್ಟೇ ಅಲ್ಲ, ಕರ್ಣ-ದುರ್ಯೋಧನರ ಸ್ನೇಹದ ಆಳ, ವಿಸ್ತಾರವನ್ನು ಕಾಣುತ್ತೇವೆ. ಕರ್ಣನ ಸಾವಿಗಾಗಿ ಮರಗುವ ದುರ್ಯೋಧನನನ್ನು ಕಂಡು ನಮಗೂ ಅಷ್ಟೇ ವ್ಯಥೆಯಾಗದೇ ಇರದು, ಎಲ್ಲೋ ಒಮ್ಮೆ ದುರ್ಯೋಧನನೂ ತುಂಬ ಇಷ್ಟವಾಗಿಬಿಡುತ್ತಾನೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಬಿ.ಆರ್. ಪೊಲೀಸ್ ಪಾಟೀಲ ಮಾತನಾಡಿ, ಕನ್ನಡದ ಆದಿಕವಿ, ಅಗ್ರಕವಿ, ನಾಡೋಜನೆಂದು ಪ್ರಸಿದ್ಧಿಗೆ ಬಂದ ಪಂಪನ ಮಾರ್ಗಾನುಗಾಮಿಯಾದ ಕವಿ ರನ್ನ ಗ್ರಂಥಾರಂಭದಲ್ಲಿ ಶ್ರೀಮನ್ನಾರಾಯಣನನ್ನು ಪ್ರಾರ್ಥಿಸುವ ಪದ್ಯದಲ್ಲಿ ಅಭೇದ ಪ್ರತಿಪತ್ತಿಯಿಂದ ತನ್ನ ಆಶ್ರಯದಾತನಾದ ಚಾಲುಕ್ಯ ಚಕ್ರವರ್ತಿ ಸತ್ಯಾಶ್ರಯ ದೇವನನ್ನೂ ಸ್ತುತಿಸಿದ್ದಾನೆ. ಈ ಪದ್ಯದಲ್ಲಿ ಪಂಪ ಭಾರತದ ಛಾಯೆ ಸುಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಅರಬಿ, ರವೀಂದ್ರ ಕತ್ತಿ, ನಾಗರಾಜ ನಾಯ್ಕ್, ಸದಾಶಿವ ಮಾಳಿ, ಶ್ರೀದೇವಿ ಕೆರೇಮನೆ, ಭೀಮಪ್ಪ ಹುಣಶೀಕಟ್ಟಿ, ನಾಗೇಶ ಗೋಲಶೆಟ್ಟಿ, ಗುರುನಾಥ ಬೇವಿನಗಿಡದ, ರಾಘವೇಂದ್ರ ನೀಲಣ್ಣವರ, ದಾಕ್ಷಿಯಣಿ ಮಂಡಿ ಸೇರಿದಂತೆ ಮುಧೋಳ, ಬೆಳಗಾವಿ, ಕಾರವಾರ, ಕೊಪ್ಪಳ, ಹುಬ್ಬಳ್ಳಿ, ಕುಷ್ಟಗಿ, ವಿಜಯಪುರ, ಬಾಗಲಕೋಟೆ, ಗೋಕಾಕ, ಗದಗ, ಇಳಕಲ್ಲ, ಜಮಖಂಡಿ, ಹುನಗುಂದ, ಬಾದಾಮಿ, ಬಾಗಲಕೋಟೆ, ಬೀಳಗಿ ಮುಂತಾದೆಡೆಗಳಿಂದ ಆಗಮಿಸಿದ್ದ 50ಕ್ಕೂ ಅಧಿಕ ಕವಿಗಳು ಸ್ವರಚಿತ ಕವನ ವಾಚನ ಮಾಡಿದರು. ಕಸಾಪ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು, ರನ್ನ ಪ್ರತಿಷ್ಠಾನ ಸದಸ್ಯರು, ಕವಿಗಳು ವೇದಿಕೆ ಮೇಲೆ ಇದ್ದರು.