ಸಿದ್ಧಾರೂಢರ ಮಠಕ್ಕೆ ನಟ ವಿನಯ್‌ ರಾಜಕುಮಾರ ಭೇಟಿ

| Published : Sep 15 2024, 01:57 AM IST

ಸಾರಾಂಶ

ಕನ್ನಡಪ್ರಭ ಮತ್ತು ಏಷಿಯಾನೆಟ್‌ ಸುವರ್ಣ ನ್ಯೂಸ್‌ ಆಯೋಜಿಸಿದ್ದ ಸುವರ್ಣ ಸಾಧಕರು ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡಿದ್ದ ವಿನಯ್‌ ರಾಜಕುಮಾರ, ಬೆಳಗ್ಗೆ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಹುಬ್ಬಳ್ಳಿ:

ನಟ ಡಾ. ರಾಜ್‌ಕುಮಾರ ಮೊಮ್ಮಗ ವಿನಯ್‌ ರಾಜಕುಮಾರ ಶನಿವಾರ ಬೆಳಗ್ಗೆ ಇಲ್ಲಿನ ಶ್ರೀಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ದರ್ಶನಾಶೀರ್ವಾದ ಪಡೆದರು.

ಕನ್ನಡಪ್ರಭ ಮತ್ತು ಏಷಿಯಾನೆಟ್‌ ಸುವರ್ಣ ನ್ಯೂಸ್‌ ಆಯೋಜಿಸಿದ್ದ ಸುವರ್ಣ ಸಾಧಕರು ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡಿದ್ದ ವಿನಯ್‌ ರಾಜಕುಮಾರ, ಬೆಳಗ್ಗೆ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಠದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಏಷಿಯಾನೆಟ್‌ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ, ಪುರವಣಿ ಸಂಪಾದಕ ಜೋಗಿ, ಮಠದ ಭಕ್ತ ರಂಗಾಬದ್ದಿ ಸೇರಿದಂತೆ ಹಲವರು ಇದ್ದರು.

ಸೆಲ್ಫಿಗೆ ಮುಗಿಬಿದ್ದರು:

ಈ ವೇಳೆ ವಿನಯ್‌ ರಾಜಕುಮಾರ ನೋಡುತ್ತಿದ್ದಂತೆ ಮಠಕ್ಕೆ ಬಂದಿದ್ದ ಸಾರ್ವಜನಿಕರು ವಿನಯ್‌ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಡಾ. ರಾಜ್‌ ಕುಟುಂಬ ಮೊದಲಿನಿಂದಲೂ ಆರೂಢರ ಮಠದೊಂದಿಗೆ ಅವಿನಾನುಭವ ಸಂಬಂಧ ಹೊಂದಿದೆ. ಕುಟುಂಬದ ಯಾರೇ ಆದರೂ ಹುಬ್ಬಳ್ಳಿಗೆ ಬಂದರೆ ಮಠಕ್ಕೆ ಭೇಟಿ ನೀಡದೇ ಹೋಗಿಲ್ಲ. ಆ ಸಂಪ್ರದಾಯವನ್ನು ವಿನಯ್‌ ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂಬ ಮಾತು ಮಠದ ಭಕ್ತರಿಂದ ಕೇಳಿ ಬಂದಿತು.