ಸಾರಾಂಶ
ನರೇಗಲ್ಲ: ಆಧುನಿಕತೆಯ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಯುವ ಜನಾಂಗ ನಿರ್ದಿಷ್ಟ ಗೊತ್ತು ಗುರಿಗಳಿಲ್ಲದೆ ಕವಲು ದಾರಿಯಲ್ಲಿ ಸಾಗುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಧಾರ್ಮಿಕ ಮೌಲ್ಯಗಳ ಸಂವರ್ಧನೆಗೆ ಮತ್ತು ಸಾಮರಸ್ಯ ಬದುಕಿಗೆ ಅಬ್ಬಿಗೇರಿಯಲ್ಲಿ ದಸರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅವರು ಸಮೀಪದ ಅಬ್ಬಿಗೆರೆ ಹಿರೇಮಠದ ಸಭಾಂಗಣದಲ್ಲಿ ನಡೆದ ದಸರಾ ಮಹೋತ್ಸವದ ಪೂರ್ವಭಾವಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಭಾರತೀಯ ಸಂಸ್ಕೃತಿ ಉತ್ಕೃಷ್ಟವಾದದ್ದು, ಪೂರ್ವದ ಆಚಾರ್ಯರು ಋಷಿಮುನಿಗಳು ಮತ್ತು ಸತ್ಪುರುಷರು ಕೊಟ್ಟು ಹೋದ ಸಂದೇಶ ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪ. ಧರ್ಮ ಹಲವಾದರೂ ಆಚರಣೆಗಳು ಬೇರೆ ಬೇರೆಯಾದರೂ ಎಲ್ಲ ಧರ್ಮಗಳ ಗುರಿ ಜನತೆ ಕಲ್ಯಾಣವೇ ಆಗಿದೆ. ಧರ್ಮ, ಜಾತಿ, ಭಾಷೆ, ಪ್ರಾಂತೀಯ ಹೆಸರಿನಲ್ಲಿ ಹಲವಾರು ಸಂಘರ್ಷಗಳು ಆಗಾಗ ನಡೆಯುತ್ತಲೇ ಇವೆ. ಸ್ವಾರ್ಥ ಮತ್ತು ಸಂಕುಚಿತ ಮನೋಭಾವನೆ ಇದಕ್ಕೆಲ್ಲ ಕಾರಣ. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ, ಶಾತಿ ಸಾಹಿತ್ಯ ಸಂಸ್ಕೃತಿ-ಸಂವರ್ಧಿಸಲಿ ಶಾಂತಿ-ಸಮೃದ್ಧಿ ಸರ್ವರಿಗಾಗಲಿ ಎನ್ನುವ ಸದಾಶಯದಂತೆ ಬಾಳೆಹೊನ್ನೂರಿನ ಶ್ರೀಜಗದ್ಗುರು ರಂಭಾಪುರಿ ಧರ್ಮಪೀಠ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ಶಾಂತಿ ನೆಮ್ಮದಿ ಪ್ರಾಪ್ತವಾಗಲು ಇಂತ ಧಾರ್ಮಿಕ ಸಮಾರಂಭಗಳ ಅವಶ್ಯಕತೆ ಇದೆ. ಆದ್ದರಿಂದ ಅ. 3 ರಿಂದ 12ರವರೆಗೆ ಅಬ್ಬಿಗೇರಿ ಗ್ರಾಮದ ಶ್ರೀಅನ್ನದಾನೀಶ್ವರ ಪ್ರೌಢಶಾಲಾ ಆವರಣದಲ್ಲಿ ಹಾಕಿರುವ ಮಾನವ ಧರ್ಮ ಮಂಟಪದಲ್ಲಿ ದಸರಾ ಧರ್ಮ ಸಮ್ಮೇಳನ ಜರುಗಲಿದೆ ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಜಿ.ಎಸ್. ಪಾಟೀಲ, ದಾಸೋಹ ಸಮಿತಿಯ ಅಧ್ಯಕ್ಷರಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಹಾಗೂ ಸಕಲ ಭಕ್ತರು ಶ್ರಮಿಸುತ್ತಿದ್ದಾರೆ. ಈ ಹಿಂದಿನ ಎಲ್ಲ ದಸರಾ ಮಹೋತ್ಸವ ದಾಖಲೆ ಮೀರಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದರು.ಶಾಸಕ ಜಿ.ಎಸ್. ಪಾಟೀಲ್ ಮಾತನಾಡಿ, ಸುಖ ಶಾಂತಿ ಬದುಕಿಗೆ ಧರ್ಮದ ಅವಶ್ಯಕತೆ ಇದೆ. ಧರ್ಮ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯುವ ಸತ್ಯ ಸಂಕಲ್ಪ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಅಬ್ಬಿಗೇರೆಯಲ್ಲಿ ಜರುಗಲಿರುವ ಶ್ರೀರಂಭಾಪುರಿ ಜ.ದಸರಾ ಮಹೋತ್ಸವ ಈ ಭಾಗದ ಭಕ್ತರಿಗೆ ಬೆಳಕು ತೋರುವುದೆಂಬ ಆತ್ಮವಿಶ್ವಾಸ ನಮ್ಮೆಲ್ಲರಿಗೂ ಇದೆ. ನಾವು ನೀವೆಲ್ಲರೂ ಸೇರಿ ದಸರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ಜರುಗಿಸೋಣ ಎಂದರು.
ಈ ವೇಳೆ ಶ್ರೀ ಅನ್ನದಾನೇಶ್ವರ ಪ್ರೌಢಶಾಲಾ ಆವರಣದಲ್ಲಿ ಶಾಸಕ ಜಿ.ಎಸ್. ಪಾಟೀಲ ಭವ್ಯ ಮಂಟಪಕ್ಕೆ ಭೂಮಿ ಪೂಜೆ ನೆರವೇರಿಸಿದರು.ಅಬ್ಬಿಗೇರಿ ಹಿರೇಮಠದ ಮತ್ತು ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಐ.ಎಸ್. ಪಾಟೀಲ್, ಡಾ. ಗಚ್ಚಿನ ಮಠ, ಚಂದ್ರು ಬಾಳೆಹಳ್ಳಿಮಠ, ವೀರೇಶ ಕೂಗು, ಕುರುಡಗಿ ಅಯ್ಯನಗೌಡ್ರು, ಡಾ. ಬಸವರೆಡ್ಡಿ, ಫಾಲಾಕ್ಷಯ್ಯ ಅರಳೇರಿಮಠ, ಸಂಗಯ್ಯ ರಾಟಿಮನಿ, ಬೆನ್ನೂರು ಮಾಸ್ಟರ್ ಮೊದಲಾದವರು ಇದ್ದರು. ಮಲ್ಲಿಕಾರ್ಜುನ ಗುಗ್ಗರಿ ಸ್ವಾಗತಿಸಿದರು. ಅಂದಪ್ಪ ವೀರಾಪುರ್ ನಿರೂಪಿಸಿದರು. ಆ ನಂತರ ಅನ್ನದಾಸೋಹ ಜರುಗಿತು.