ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿರಾಜ್ಯದ ಮೊದಲ ಯುವ ಭವನ ಕಟ್ಟಡ ಎಂದು ಹೆಸರುಗಳಿಸಿದ್ದ, ಜಿಲ್ಲಾ ಯುವ ಭವನ ಕಟ್ಟಡ ಸುಮಾರು 12 ವರ್ಷಗಳ ಬಳಿಕ ಜಿಲ್ಲಾ ಯುವ ಒಕ್ಕೂಟಕ್ಕೆ ಹಸ್ತಾಂತರಗೊಂಡಿದೆ. ಇದರಿಂದ ಜಿಲ್ಲೆಯ ಯುವ ಒಕ್ಕೂಟ ಹಾಗೂ ಯುವಕ, ಯುವತಿ ಮಂಡಳಿಗಳಲ್ಲಿ ಸಂಭ್ರಮ ಮೂಡಿಸಿದೆ. ಇದೀಗ ಕಟ್ಟಡವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದ್ದಾರೆ.
2014-15ನೇ ಸಾಲಿನಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭ ಜಿಲ್ಲೆಯ ಮೊದಲ ಮಹಿಳಾ ಪ್ರಥಮ ದರ್ಜೆ ಕಾಲೇಜುಗೆ ಸೂಕ್ತ ಕಟ್ಟಡ ಇಲ್ಲದ ಕಾರಣ ಸುದರ್ಶನ ವೃತ್ತದಲ್ಲಿ ನಿರ್ಮಾಣಗೊಂಡಿದ್ದ ಜಿಲ್ಲಾ ಯುವ ಒಕ್ಕೂಟದ ಜಿಲ್ಲಾ ಯುವ ಭವನದಲ್ಲಿ 6 ತಿಂಗಳ ಮಟ್ಟಿಗೆ ಪ್ರಾರಂಭ ಮಾಡಲಾಯಿತು. ಬಳಿಕ ಸ್ಥಳೀಯ ಜೂನಿಯರ್ ಕಾಲೇಜು ಆವರಣದಲ್ಲಿ ಅಂದಿನ ಸರ್ಕಾರ ದಿಂದ ಮಂಜೂರುಗೊಂಡಿದ್ದ ಮಹಿಳಾ ಕಾಲೇಜು ಕಟ್ಟಡ ಕಾಮಗಾರಿ ಪ್ರಾರಂಭಗೊಂಡಿತ್ತು . ಇದೀಗ 12 ವರ್ಷ ಬಳಿಕ ಜಿಲ್ಲಾ ಯುವ ಒಕ್ಕೂಟಕ್ಕೆ ಯುವ ಭವನ ದೊರಕಿದೆ. ಮಹಿಳಾ ಕಾಲೇಜಿನ ನೂತನ ಕಟ್ಟಡ ಕಾಮಗಾರಿ ಪೂರ್ಣ ಗೊಳಿಸಿ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ.ಯುವಕ-ಯುವತಿ ಸಂಘಗಳ ಕಾರ್ಯ ಚಟುವಟಿಕೆ, ಸಭೆಗಳು, ಕಾರ್ಯಾಗಾರ, ತರಬೇತಿ ಶಿಬಿರಗಳು, ಯುವ ಸಮ್ಮೇಳನ ಮತ್ತಿತರ ಕಾರ್ಯಕ್ರಮಗಳನ್ನು ಈ ಯುವ ಭವನದಲ್ಲಿ ನಡೆಸಲು ಚಿಂತಿಸಲಾಗಿದೆ. ಮಡಿಕೇರಿಯ ಜೂನಿಯರ್ ಕಾಲೇಜು ಆವರಣದಲ್ಲಿ ನೂತನ ಮಹಿಳಾ ಕಾಲೇಜು ಕಟ್ಟಡ ಕಾರ್ಯಾರಂಭ ಮಾಡಿದ್ದು, ಕಾಲೇಜಿನ ಪ್ರಾಂಶುಪಾಲೆ ನಿರ್ಮಲ ಅವರು ಯುವ ಭವನದ ಕೀ ಅನ್ನು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ. ಸುಕುಮಾರ್ ಅವರಿಗೆ ಹಸ್ತಾಂತರಿಸಿದ್ದಾರೆ.
2013ರಲ್ಲಿ ಕಟ್ಟಡ ನಿರ್ಮಾಣ : 2004ರಲ್ಲಿ ಜಿಲ್ಲಾ ಯುವ ಭವನ ಕಟ್ಟಡ ನಿರ್ಮಾಣಕ್ಕಾಗಿ ಅಂದಿನ ಜಿಲ್ಲಾಧಿಕಾರಿಗಳು ಜಾಗ ಗುರುತು ಮಾಡಿದ್ದರು. 2005ರಲ್ಲಿ ಅಂದಿನ ಸಂಸದರಾಗಿದ್ದ ಸದಾನಂದ ಗೌಡ ಅವರು 1 ಲಕ್ಷ ರು. ಅನುದಾನ ನೀಡಿ ಭೂಮಿ ಪೂಜೆ ನೆರವೇರಿಸಿದ್ದರು. 2013ರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ಯುವ ಭವನವನ್ನು ಆರಂಭಿಸಲು ತಯಾರಿ ಮಾಡುವ ಸಂದರ್ಭದಲ್ಲಿ 2014-15ನೇ ಸಾಲಿನಲ್ಲಿ ಮಡಿಕೇರಿ ನಗರದಲ್ಲಿ ನೂತನವಾಗಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಡೆಸಲು ಶಿಕ್ಷಣ ಇಲಾಖೆ ಅನುಮತಿ ನೀಡಿತ್ತು. ಅಂದು ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲದ ಪರಿಣಾಮ ಯುವ ಭವನ ಕಟ್ಟಡವನ್ನು ತಾತ್ಕಾಲಿಕವಾಗಿ ಕಾಲೇಜಿಗೆ ನೀಡಲಾಯಿತು. ಅಂದಿನಿಂದ ಇಂದಿನವರೆಗೂ ಮಹಿಳಾ ಕಾಲೇಜು ಯುವ ಭವನದಲ್ಲೇ ನಡೆಯುತ್ತಿತ್ತು.ಹಲವರ ಪರಿಶ್ರಮ : ಕೊಡಗು ಯುವ ಭವನ ಕಟ್ಟಡ ಸ್ಥಾಪನೆಗೆ ಹಲವಾರು ಮಂದಿ ದುಡಿದಿದ್ದಾರೆ. ಜಿಲ್ಲಾ ಯುವಕ, ಯುವತಿ ಮಂಡಳಿಯಿಂದ ದಾನಿಗಳಿಂದ 5.20 ಲಕ್ಷ ರು. ಹಣ, ಅಂದಿನ ಸಂಸದರಾಗಿದ್ದ ಸದಾನಂದ ಗೌಡ ಅವರ ರು.1 ಲಕ್ಷ, ಸ್ಥಳೀಯ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರ ಪ್ರಯತ್ನದ ಫಲವಾಗಿ ಅಂದಿನ ಕ್ರೀಡಾ ಮಂತ್ರಿಯಾಗಿದ್ದ ಗೂಳಿಹಟ್ಟಿ ಶೇಖರ್ ಅವರು ಕಗ್ಗೋಡ್ಲುವಿನಲ್ಲಿ ನಡೆದ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು 32 ಲಕ್ಷ ರು. ಸರ್ಕಾರದ ಹಣ ಮಂಜೂರು ಮಾಡಿದ್ದರು. ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ನಡೆದಿತ್ತು. ಇದೀಗ ನವೀಕರಣದ ಕೆಲಸಗಳನ್ನು ಹಾಲಿ ಶಾಸಕ ಡಾ. ಮಂತರ್ ಗೌಡ ಅವರು ಸರ್ಕಾರದ ಅನುದಾನದಿಂದ ನೆರವೇರಿಸುವುದಾಗಿ ಭರವಸೆ ನೀಡಿದ್ದಾರೆ. ಯುವ ಭವನ ಕಟ್ಟಡ ನಿರ್ಮಾಣಕ್ಕಾಗಿ ಸಾಕಷ್ಟು ಮಂದಿ ದುಡಿದಿದ್ದಾರೆ. ಅದರಲ್ಲೂ ಹಿರಿಯರ ಶ್ರಮ ಅಪಾರ. ಜಿಲ್ಲೆಯ ಹಲವು ಯುವಕ, ಯುವತಿ ಮಂಡಳಿ ಕೂಡ ಇದಕ್ಕೆ ಕೆಲಸ ಮಾಡಿದೆ. ಯುವಕ-ಯುವತಿ ಸಂಘಗಳು, ದಾನಿಗಳು ಹಾಗೂ ಸರ್ಕಾರದ ಅನುದಾನದಿಂದ ಕಟ್ಟಡ ಕಾಮಗಾರಿ ನಡೆದಿದೆ. ಇದೀಗ 12 ವರ್ಷಗಳ ಬಳಿಕ ನಮಗೆ ಯುವ ಭವನ ಕಟ್ಟಡ ದೊರಕಿರುವುದು ಯುವ ಜನರ ಕನಸು ಸಕಾರಗೊಂಡಿದೆ. ಇದಕ್ಕೆ ದುಡಿದವರನ್ನು ಸೇರಿಸಿ ಸಭೆ ನಡೆಸಿ ಕಟ್ಟಡದಲ್ಲಿ ಯುವ ಜನರ ಕಾರ್ಯಚಟುವಟಿಕೆಗೆ ಬಳಕೆ ಮಾಡಲಾಗುವುದು.
-ಪಿ. ಪಿ. ಸುಕುಮಾರ್, ಅಧ್ಯಕ್ಷ ಕೊಡಗು ಜಿಲ್ಲಾ ಯುವ ಒಕ್ಕೂಟಮಡಿಕೇರಿಯಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ಪೂರ್ಣಗೊಂಡಿದ್ದು, ಯುವ ಭವನ ಕಟ್ಟಡವನ್ನು ಯುವ ಒಕ್ಕೂಟಕ್ಕೆ ಹಸ್ತಾಂತರ ಮಾಡಲಾಗಿದೆ. ಇದೀಗ ಯುವ ಭವನದಲ್ಲಿನ ಕಟ್ಟಡದ ನವೀಕರಣಕ್ಕೆ ಸಂಬಂಧಿಸಿದಂತೆ ಯುವ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸರ್ಕಾರದಿಂದ ಅನುದಾನ ಕೊಡಿಸುವಲ್ಲಿ ಕೆಲಸ ಮಾಡಲಾಗುವುದು.-ಡಾ. ಮಂತರ್ ಗೌಡ, ಶಾಸಕರು ಮಡಿಕೇರಿ ಕ್ಷೇತ್ರ