ಹಿಂಗಾರಿ ಹಂಗಾಮಿನ ಕಡಲೆ ಬೀಜಕ್ಕೆ ಭಾರೀ ಬೇಡಿಕೆ

| Published : Oct 07 2025, 01:03 AM IST

ಸಾರಾಂಶ

ಹಿಂಗಾರು ಬಿತ್ತನೆಗೆ ಕಡಲೆ ಬೀಜಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿತರಣೆಗೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಧಾರವಾಡ ಜಿಲ್ಲೆಯಲ್ಲಿ 14 ರೈತ ಸಂಪರ್ಕ ಕೇಂದ್ರಗಳಿದ್ದು, ಅವುಗಳ ಮೂಲಕ ಸಣ್ಣ, ಅತಿ ಸಣ್ಣ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.

ಶಿವಾನಂದ ಅಂಗಡಿಹುಬ್ಬಳ್ಳಿ:ಹಿಂಗಾರಿ ಬಿತ್ತನೆಗೆ ದಿನಗಣನೆ ಆರಂಭವಾಗಿದ್ದು, ಧಾರವಾಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕಡಲೆ ಬೀಜಕ್ಕೆ ಭಾರೀ ಬೇಡಿಕೆ ಬರುತ್ತಿದೆ. ಹೀಗಾಗಿ ಬೆಳೆ ವೈವಿಧ್ಯತೆ ಕಾಯ್ದುಕೊಳ್ಳುವುದು ಕೃಷಿ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಕಡಲೆ ಬೀಜಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿತರಣೆಗೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಧಾರವಾಡ ಜಿಲ್ಲೆಯಲ್ಲಿ 14 ರೈತ ಸಂಪರ್ಕ ಕೇಂದ್ರಗಳಿದ್ದು, ಅವುಗಳ ಮೂಲಕ ಸಣ್ಣ, ಅತಿ ಸಣ್ಣ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ನವಲಗುಂದ, ಅಣ್ಣಿಗೇರಿ, ಅಳ್ನಾವರ ತಲಾ ಒಂದು, ಕುಂದಗೋಳ 2, ಧಾರವಾಡ ಹಾಗೂ ಕಲಘಟಗಿ ಹಾಗೂ ಹುಬ್ಬಳ್ಳಿ ನಗರ, ಗ್ರಾಮೀಣದಲ್ಲಿ ತಲಾ 3 ರೈತ ಸಂಪರ್ಕ ಕೇಂದ್ರಗಳಿದ್ದು, ಇಲ್ಲಿಂದ ರೈತರು ಆಧಾರ್‌, ಜಾತಿ ಪ್ರಮಾಣಪತ್ರ ನೀಡಿ ಹಿಂಗಾರಿ ಬೀಜಗಳನ್ನು ಸಬ್ಸಿಡಿ ದರದಲ್ಲಿ ಪಡೆಯಲಿದ್ದಾರೆ.

ಸಬ್ಸಿಡಿ ಎಷ್ಟು?

ಕಡಲೆ 20 ಕಿಲೋ ಚೀಲಕ್ಕೆ ₹ 1660 ದರವಿದ್ದು, ಸಾಮಾನ್ಯ ವರ್ಗದವರಿಗೆ ಕಿಲೋಗೆ ₹ 25ನಂತೆ ₹ 500 ಹಾಗೂ ಎಸ್ಸಿ, ಎಸ್ಟಿಗೆ ಕಿಲೋಗೆ ₹ 37.50ನಂತೆ ₹750 ಸಬ್ಸಿಡಿ ದೊರೆಯಲಿದೆ. ಜೋಳ 3 ಕಿಲೋ ಚೀಲಕ್ಕೆ ₹ 180 ದರವಿದ್ದು, ಸಾಮಾನ್ಯ ವರ್ಗದವರಿಗೆ ಕಿಲೋಗೆ ₹ 20 ನಂತೆ ₹ 60, ಎಸ್ಸಿ,ಎಸ್ಟಿ ರೈತರಿಗೆ ಕಿಲೋಗೆ ₹ 30ರಂತೆ ₹ 90 ಸಬ್ಸಿಡಿ ದೊರೆಯಲಿದೆ. ಗೋದಿ 30 ಕಿಲೋ ಚೀಲಕ್ಕೆ ₹ 2280 ದರವಿದೆ. ಸಾಮಾನ್ಯ ವರ್ಗದವರಿಗೆ ಕಿಲೋಗೆ ₹ 15ರಂತೆ ₹ 450, ಎಸ್ಸಿ, ಎಸ್ಟಿ ರೈತರಿಗೆ ಕಿಲೋಗೆ ₹ 22.50 ದಂತೆ ₹ 675 ವರೆಗೆ ಸಬ್ಸಿಡಿ ಸಿಗಲಿದೆ.

5 ಎಕರೆವರೆಗಿನ ಸಣ್ಣ, ಅತಿ ಸಣ್ಣ ರೈತರು ಮಾತ್ರ ಸಬ್ಸಿಡಿ ದರದ ಬೀಜಗಳು ಸಿಗಲಿದ್ದು, ಹೆಚ್ಚು ಜಮೀನುಗಳನ್ನು ಹೊಂದಿದ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೀಜಗಳನ್ನೇ ಖಾಸಗಿ ಕಂಪನಿ ಹಾಗೂ ಬೀಜ ಸಂರಕ್ಷಿಸಿದ ರೈತರಿಂದ ಖರೀದಿಸುತ್ತಿದ್ದು, ಗದಗ ತಾಲೂಕಿನ ಹೊಂಬಳ ಸೇರಿ ವಿವಿಧೆಡೆ ಕಡಲೆ ಬೀಜ ಕ್ವಿಂಟಲ್‌ಗೆ ₹ 6500ರಿಂದ ಅದಕ್ಕೂ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಬಹುತೇಕ ಹಿಂಗಾರಿ ಹಂಗಾಮಿನಲ್ಲಿ ಗದಗ, ಧಾರವಾಡ ಜಿಲ್ಲೆ ಸೇರಿ ಎರಡು ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬೀಜಗಳ ಬಿತ್ತನೆ ಆಗುವ ಸಾಧ್ಯತೆ ಇದೆ.

ಮುಂಗಾರಿ ಹಂಗಾಮಿನಲ್ಲೂ ಈ ಎರಡು ಜಿಲ್ಲೆಗಳಲ್ಲೂ ಎರಡು ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆಯಾಗಿರುವುದು ಗಮನಾರ್ಹವಾಗಿದೆ.

ಕಡಲೆ ಬೀಜವೇ ಹೆಚ್ಚುರಾಜ್ಯ ಕೃಷಿ ಇಲಾಖೆ ಬೀಜ ನಿಗಮ ಸೇರಿ ಖಾಸಗಿ ಬೀಜ ಕಂಪನಿಗಳಿಂದ ಬೀಜ ಖರೀದಿಸಿ ಮುಂಗಾರಿ, ಹಿಂಗಾರಿ ಹಂಗಾಮಿನಲ್ಲಿ ರೈತರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿ ದರದಲ್ಲಿ ಬೀಜಗಳನ್ನು ವಿತರಿಸುತ್ತದೆ.ಆಯಾ ಜಿಲ್ಲೆಗಳಲ್ಲಿ ಬೇಡಿಕೆಗೆ ತಕ್ಕಂತೆ ಇಲಾಖೆಯಿಂದ ಬೀಜಗಳ ಹಂಚಿಕೆಯಾಗುತ್ತಿದ್ದು, ಪ್ರಸಕ್ತ ಹಿಂಗಾರಿ ಹಂಗಾಮಿನಲ್ಲಿ ಧಾರವಾಡ ಜಿಲ್ಲೆಗೆ ಕಡಲೆ-28,799 ಕ್ವಿಂ, ಜೋಳ,-300 ಕ್ವಿಂ, ಗೋದಿ-385 ಕ್ವಿಂ, ಶೇಂಗಾ-277 ಕ್ವಿಂ, ಮೆಕ್ಕೆಜೋಳ-82 ಕ್ವಿಂ ಇತರೆ ಬೀಜಗಳು ಸೇರಿ ಒಟ್ಟು 29,906 ಕ್ವಿಂಟಲ್‌ ಹಂಚಿಕೆಯಾಗಿದೆ. ಇತರೆ ಬೀಜಗಳನ್ನು ಸೇರಿ ಸ್ಥಳೀಯ ಬೇಡಿಕೆಗೆ ತಕ್ಕಂತೆ ಬೀಜಗಳನ್ನು ವಿತರಿಸುತ್ತಿದ್ದು, ಅವಶ್ಯಕತೆ ಬಿದ್ದರೆ ಮತ್ತೆ ಬೀಜಗಳನ್ನು ತರಿಸಿಕೊಂಡ ವಿತರಿಸುತ್ತೇವೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.ಸಬ್ಸಿಡಿ ಪಡೆಯಲು ಸಣ್ಣ, ಅತಿ ಸಣ್ಣ ರೈತರು ಎಫ್‌ಐಡಿ ಮಾಡಿಸಿರಬೇಕು, ಆಗಲೇ ಆಧಾರ್‌, ಉತಾರ, ಬ್ಯಾಂಕ್‌ ಪಾಸ್‌ ಬುಕ್‌ ನಂಬರ್‌ ಪಡೆದಿರುತ್ತೇವೆ. ಆನ್‌ಲೈನ್‌ ಮೂಲಕ ಬೀಜಗಳ ಚೀಲ ಸ್ಕ್ಯಾನ್‌ ಮಾಡಿ ರೈತರಿಗೆ ವಿತರಿಸಲಾಗುತ್ತದೆ. ಆಧಾರ್‌ ನಂಬರ್‌ ಇದ್ದರೆ ಎಫ್‌ಐಡಿ ಬರುತ್ತದೆ. ಎಸ್‌ಸಿ, ಎಸ್‌ಟಿ ರೈತರಿದ್ದರೆ ಜಾತಿ ಪ್ರಮಾಣ ಪಡೆಯುತ್ತೇವೆ ಎನ್ನುತ್ತಾರೆ ಕೇಂದ್ರದ ಅಧಿಕಾರಿಗಳು.ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೀಜಗಳೇ ವಿತರಣೆಯಾಗುತ್ತಿದೆ. ಬೀಜಗಳು ಖಾಲಿ ಆದಂತೆ ಮತ್ತೆ ತರಿಸಿ ವಿತರಿಸುತ್ತೇವೆ. ಜೋಳ, ಕಡಲೆ ಬೀಜ ಬಂದಿದೆ. ಕುಸುಬೆ, ಗೋದಿ, ಮೆಕ್ಕೆಜೋಳ ಬಿತ್ತನೆಗೆ ಇನ್ನು ಸಾಕಷ್ಟು ವೇಳೆ ಇದ್ದು, ಶೀಘ್ರದಲ್ಲಿ ಅವು ಕೇಂದ್ರಕ್ಕೆ ಬರುತ್ತವೆ.

ಮಂಜುನಾಥ ಅಂತರವಳ್ಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಧಾರವಾಡ

ಕಡಲೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದರೂ ಬೆಳೆ ವೈವಿಧ್ಯತೆ ಕಾಯ್ದುಕೊಳ್ಳಲು 20 ಕಿಲೋದ 3 ಕಡಲೆ ಬೀಜಗಳ ಚೀಲ, ಎರಡು ಚೀಲ ಕುಸುಬೆ ಇಲ್ಲವೇ ಗೋದಿ ಬೀಜಗಳನ್ನು ವಿತರಿಸುತ್ತೇವೆ. ಇದು ಇಳುವರಿ ಹೆಚ್ಚಳಕ್ಕೂ ಸಹಕಾರಿಯಾಗುತ್ತದೆ.

ವಿ.ವಿ. ಗಡಾದ, ಅಣ್ಣಿಗೇರಿ, ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ