ಸಾರಾಂಶ
ನವರಾತ್ರಿ ಉತ್ಸವದ ನಿಮಿತ್ತ ಹಮ್ಮಿಕೊಂಡ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣಾ ಸಮಾರಂಭ
ಕನ್ನಡಪ್ರಭ ವಾರ್ತೆ ಶಿರಸಿಮಕ್ಕಳ ಭವಿಷ್ಯ ರೂಪಿಸಲು ಪಾಲಕರು ಕಾಳಜಿ ವಹಿಸಬೇಕು ಎಂದು ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಮಾಯಣ್ಣ ಬಿ.ಎಲ್. ಹೇಳಿದರು.
ಭಾನುವಾರ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದಲ್ಲಿ ನಿಮಿತ್ತ ಹಮ್ಮಿಕೊಂಡ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳ ಸಾಧನೆಗೆ ಪಾಲಕರ ಮುಖ್ಯವಾಗಿರುತ್ತಾರೆ. ಒಳ್ಳೆಯ ವ್ಯಕ್ತಿಗಳನ್ನಾಗಿ ಮಾಡಲು ಕನಸು ಕಾಣುತ್ತಾರೆ. ಮಕ್ಕಳು ವಿದ್ಯಾಭ್ಯಾಸದ ಹೊರತಾಗಿ ಬೇರೆಯದಕ್ಕೆ ಮೊಬೈಲ್ ಬಳಕೆ ಮಾಡಬಾರದು. ಇತಿಮಿತಿಯಲ್ಲಿ ಸಾಮಾಜಿಕ ಜಾಲತಾಣ ಬಳಸಿ, ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ ಮಾತನಾಡಿದರು.ಕಾರವಾರ ಪ್ರಿನ್ಸಿಪಲ್ ನ್ಯಾಯಾಲಯದ ನ್ಯಾಯಾಧೀಶೆ ಕವಿತಾ ಶಿವರಾಯ ಉಂಡೋಡಿ, ಶಿರಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಸಿ.ಹಟ್ಟಿ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ರುತಿ ವಿ., ದೇವಸ್ಥಾನದ ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಶಿವಾನಂದ ಶೆಟ್ಟಿ, ಸಿಪಿಐ ಶಶಿಕಾಂತ ವರ್ಮಾ, ಬಾಬುದಾರರಾದ ಜಗದೀಶ ಗೌಡ, ಜಗದೀಶ ಕುರುಬರ, ಮದನ ಆರೇರ ಮತ್ತಿತರರಿದ್ದರು. ಬಾಬುದಾರ ಮುಖ್ಯಸ್ಥ ಬಸವರಾಜ ಚಕ್ರಸಾಲಿ ಸ್ವಾಗತಿಸಿದರು. ದೇವಸ್ಥಾನದ ವ್ಯವಸ್ಥಾಪಕ ಚಂದ್ರಕಾಂತ ನಿರೂಪಿಸಿದರು. ಸಿಬ್ಬಂದಿ ಲೀಲಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ಶರನ್ನವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ 246 ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.