ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯಲ್ಲಿ ಅಂದಾಜು 1.60 ಕೋಟಿ ರು. ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ 11 ಕೆವಿಎ, ಹೆಚ್ ಟಿ ವಿದ್ಯುತ್ ಮಾರ್ಗದ ಸ್ಥಾಪನೆಗೆ ಮಂಗಳವಾರ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭೂಮಿ ಪೂಜೆ ಸಲ್ಲಿಸಿದರು. ಟಿ. ಶೆಟ್ಟಿಗೇರಿಯಿಂದ ನೆಮ್ಮಲೆವರೆಗೆ 4 ಕಿ. ಮೀ. ಮತ್ತು ಟಿ. ಶೆಟ್ಟಿಗೇರಿಯಿಂದ ತಾವಳಗೇರಿ ಮಂದ್ ವರೆಗೆ 1 ಕಿ.ಮೀ. ಸೇರಿ ಒಟ್ಟು 5 ಕಿ. ಮೀ. ಅಂತರದಲ್ಲಿ 11 ಕೆವಿಎ ಸಾಮರ್ಥ್ಯದ ಕೇಬಲ್ ಮಾರ್ಗ ಈ ಯೋಜನೆಯಲ್ಲಿ ಒಳಗೊಂಡಿದೆ.ವಿರಾಜಪೇಟೆ ಕ್ಷೇತ್ರಾದ್ಯಂತ ವಿದ್ಯುತ್ ಸಮಸ್ಯೆ ನೀಗಿಸಲು ಕ್ಷೇತ್ರದ ಜನತೆಗೆ ಹಾಗೂ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸಿದ್ದು, ಈ ಭಾಗವಾಗಿ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜಿಗೆ 11 ಕೆವಿಎ ಮಾರ್ಗವನ್ನು ಸ್ಥಾಪಿಸುವ ಕುರಿತಾಗಿ ಅನುಮೋದನೆ ದೊರಕಿದ ಕಾರಣ, ಈ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಪೊನ್ನಣ್ಣ ತಿಳಿಸಿದರು.
ಈ ಮೊದಲು ಈ ವಿದ್ಯುತ್ ಮಾರ್ಗವು ಖಾಸಗಿ ತೋಟದ ಮಧ್ಯಭಾಗದಲ್ಲಿ ಹಾದು ಹೋಗಿದ್ದರಿಂದ ಸಮಸ್ಯೆ ಉಂಟಾದಾಗ, ದುರಸ್ತಿ ಕಂಡುಕೊಳ್ಳಲು ಇಲಾಖೆಗೆ ಅನಾನುಕೂಲ ಆಗುತ್ತಿತ್ತು. ಈಗ ಸದರಿ ನೂತನ ಮಾರ್ಗವನ್ನು ರಸ್ತೆ ಬದಿಯಲ್ಲೇ ಅಳವಡಿಸುವುದರಿಂದಾಗಿ ಎಲ್ಲಾ ಸಮಸ್ಯೆ ಉಂಟಾದರೂ ತಕ್ಷಣ ದುರಸ್ತಿ ಮಾಡಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.ಶಾಸಕರ ಈ ಪ್ರಯತ್ನಕ್ಕೆ ಸಾರ್ವಜನಿಕರು ಈ ಸಂದರ್ಭ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಬಗರ್ ಹುಕುಂ ತಾಲೂಕು ಅಧ್ಯಕ್ಷರು ಅಣ್ಣಳಮಾಡ ಲಾಲಾ ಅಪ್ಪಣ್ಣ, ಟಿ ಶೆಟ್ಟಿಗೇರಿ ವಲಯ ಅಧ್ಯಕ್ಷರು ತೀತಿರ ಪ್ರಭು, ಹಿರಿಯ ನಾಗರಿಕ ವೇದಿಕೆ ಸದಸ್ಯರಾದ ಚೊಟ್ಟೆಯಾಂಡಮಾಡ ವಿಶ್ವನಾಥ್, ಅಪ್ಪಚ್ಚಂಗಡ ಮೋಟಯ್ಯ, ಚೊಟ್ಟೆಯಾಂಡಮಾಡ ಉದಯ, ತಾ. ಪಂ. ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಹುದಿಕೇರಿ ವಲಯ ಅಧ್ಯಕ್ಷ ಚಂಗುಲಂಡ ಸೂರಜ್, ಡಿಸಿಸಿ ಸದಸ್ಯ ಮುಕ್ಕಾಟೀರ ಸಂದೀಪ್, ಪೆಮ್ಮಂಡ ರಾಜ, ಚೆಕ್ಕೇರ ಸುಧೀರ್, ಚೆಟ್ಟಂಗಡ ಸುರೇಂದ್ರ, ಸೆಸ್ಕ್ ಗೋಣಿಕೊಪ್ಪ ಎ. ಇ. ಇ. ಸತೀಶ್, ಶ್ರೀಮಂಗಲ ಸೆಸ್ಕ್ ಜೆ ಇ ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದರು.