ಸಾರಾಂಶ
ಬೆಂಗಳೂರು : ಶೀಘ್ರವೇ ನಮ್ಮ ಮೆಟ್ರೋ ಟಿಕೆಟ್ ಪರಿಷ್ಕೃತ ದರ ಶೀಘ್ರ ಘೋಷಣೆಯಾಗುವ ಸಾಧ್ಯತೆಯಿದೆ. ಬರೋಬ್ಬರಿ ಶೇಕಡ 40-45ರಷ್ಟು (ಕನಿಷ್ಠ ದರ ₹15, ಗರಿಷ್ಠ ದರ ₹85- ₹90) ಹೆಚ್ಚಳವಾಗುವ ಹಾಗೂ ಪ್ರಯಾಣಿಕರನ್ನು ಸೆಳೆಯಲು ನಾನ್‌ಪೀಕ್ ಅವರ್‌ನಲ್ಲಿ ರಿಯಾಯಿತಿಯನ್ನೂ ಬಿಎಂಆರ್‌ಸಿಎಲ್ ಘೋಷಿಸುವ ಸಾಧ್ಯತೆಯಿದೆ.
2015ರಲ್ಲಿ ಕೊನೆಯ ಬಾರಿಗೆ ಮೆಟ್ರೋ ದರ ಹೆಚ್ಚಳವಾಗಿತ್ತು. ಅಂದರೆ 8 ವರ್ಷಗಳಿಂದ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಆಗಿರಲಿಲ್ಲ. ಈ ವರ್ಷ ಟಿಕೆಟ್ ದರ ಏರಿಕೆ ಮಾಡಲೇಬೇಕು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಚಿಂತನೆ ನಡೆಸಿತ್ತು. ಇದಕ್ಕಾಗಿ ಸಮಿತಿ ರಚನೆ ಮಾಡಿ ಸಾಧ್ಯತೆಗಳು, ತಜ್ಞರ ಅಭಿಪ್ರಾಯ ಸಂಗ್ರಹ ಮಾಡಿತ್ತು. ಸಮಿತಿಯ ಜತೆ ಬಿಎಂಆರ್‌ಸಿಎಲ್ ಶುಕ್ರವಾರ ಸಭೆ ನಡೆಸಿದ್ದು, ದರ ಏರಿಕೆಗೆ ಒಪ್ಪಿಗೆ ಸೂಚಿಸಿದ್ದು, ಸರ್ಕಾರದ ಒಪ್ಪಿಗೆ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.
ಎರಡು ರೀತಿ ಪರಿಷ್ಕೃತ ದರ:
ಎರಡು ಸಮಯ ಅಂದರೆ ಪ್ರಯಾಣಿಕ ದಟ್ಟಣೆ ಸಮಯ ಹಾಗೂ ಪ್ರಯಾಣಿಕ ದಟ್ಟಣೆಯಲ್ಲದ ಸಮಯ (ಪೀಕ್, ನಾನ್ ಪೀಕ್ ಅವರ್) ಮಾದರಿಯಲ್ಲಿ ದರ ಪರಿಷ್ಕರಣೆ ಆಗಲಿದೆ ಎನ್ನಲಾಗಿದೆ. ನಾನ್ ಪೀಕ್ ಅವರ್‌ನಲ್ಲಿ ರಿಯಾಯಿತಿ ದರ ಹಾಗೂ ಪೀಕ್ ಅವರ್‌ನಲ್ಲಿ ಪರಿಷ್ಕೃತ ಹೆಚ್ಚಳವಾಗುವ ಸಂಪೂರ್ಣ ದರ ಜಾರಿಯಾಗುವ ಸಾಧ್ಯತೆಯಿದೆ. ಅಂದರೆ ಕನಿಷ್ಠ ದರ ₹15 ವರೆಗೆ, ಗರಿಷ್ಠ ದರ ₹85- ₹90 ವರೆಗೆ ಹೆಚ್ಚಳವನ್ನು ಜನತೆ ನಿರೀಕ್ಷಿಸಬಹುದು ಎಂದು ಮೆಟ್ರೋ ಅಧಿಕಾರಿಯೊಬ್ಬರು ಹೇಳಿದರು.
ಪ್ರಸ್ತುತ ಕನಿಷ್ಠ ₹10 ಹಾಗೂ ಗರಿಷ್ಠ ದರ ₹60 ಇದೆ. ಬಿಎಂಆರ್‌ಸಿಎಲ್ ಮೆಟ್ರೋ ರೈಲುಗಳ ಸಂಚಾರ, ನಿರ್ವಹಣೆ, ಹೊಸ ಮೆಟ್ರೋ ಮಾರ್ಗ ಸೇರಿ ಇತರೆ ಕಾರಣಗಳಿಂದ ಟಿಕೆಟ್ ದರವನ್ನು ಕೇವಲ ಶೇ.20ರಷ್ಟು ಏರಿಸಿದರೆ ಯಾವುದೇ ಪ್ರಯೋಜನ ಇಲ್ಲ. ಹೀಗಾಗಿ ಶೇ.40ರಷ್ಟು ಏರಿಸುವುದು ಅನಿವಾರ್ಯ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಶೇ.40-45 ರಷ್ಟು ಏರಿಕೆ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ.
ರಿಯಾಯಿತಿ ಮುಂದುವರಿಕೆ
ಪ್ರಸ್ತುತ ಮೆಟ್ರೋ ದರ ಏರಿಕೆ ನಡುವೆಯೂ ಪ್ರಯಾಣಿಕರಿಗೆ ಪ್ರಯಾಣದರದಲ್ಲಿ ರಿಯಾಯಿತಿ ಸಿಗಲಿದೆ. ವಿಶೇಷ ಸಂದರ್ಭದಲ್ಲಿ ಈಗಿನಂತೆ ಹಾಗೂ ಸ್ಮಾರ್ಟ್‌ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಬಳಸುವ ಪ್ರಯಾಣಿಕರು ಶೇಕಡಾ 5 ರಷ್ಟು ರಿಯಾಯಿತಿಯನ್ನು ಪಡೆಯಲಿದ್ದಾರೆ.
ಜೊತೆಗೆ ಮೆಟ್ರೋಗೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯಲು ಕೂಡ ದರ ಪರಿಷ್ಕರಣ ಸಮಿತಿ ಕೆಲ ಸಲಹೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಹಿಂದೆ 2017ರ ಜೂನ್‌ನಲ್ಲಿ ನಮ್ಮ ಮೆಟ್ರೋ ಟಿಕೆಟ್ ದರವನ್ನು ಶೇ.10-15 ಏರಿಕೆ ಮಾಡಲಾಗಿತ್ತು. ಆಗ ಕೇವಲ ಮೆಟ್ರೋ 43 ಕಿ.ಮೀ. ಉದ್ದವಿತ್ತು. ಪ್ರಸ್ತುತ 77 ಕಿ.ಮೀ. ಉದ್ದಕ್ಕೆ ಸೇವೆ ವಿಸ್ತರಣೆಯಾಗಿದೆ. 2026ರ ಡಿಸೆಂಬರ್‌ಗೆ ಹಳದಿ, ಗುಲಾಬಿ, ನೀಲಿ ಮಾರ್ಗವೂ ಸೇರಿ 175ಕಿಮೀ ಗೆ ವಿಸ್ತರಣೆಯಾಗಲಿದೆ. ಹೀಗಾಗಿ ದರ ಪರಿಷ್ಕರಣೆ ಅನಿವಾರ್ಯವಾಗಿದೆ.ನಮ್ಮ ಮೆಟ್ರೋ 2023-24ರಲ್ಲಿ ಒಟ್ಟಾರೆ ₹990.2 ಕೋಟಿ ಆದಾಯ ಗಳಿಸಿದೆ. ಇದರಲ್ಲಿ ₹573.91 ಕೋಟಿ ಪ್ರಯಾಣಿಕರಿಂದ ಹಾಗೂ ₹416.11 ಕೋಟಿ ಬಾಡಿಗೆ, ಜಾಹೀರಾತು ಮತ್ತಿತರ ಮೂಲಗಳಿಂದ ಆದಾಯ ಸಂಗ್ರಹಿಸಿದೆ. ಮೆಟ್ರೋ ರೈಲುಗಳ ಸಂಚಾರಕ್ಕೆ ₹617.07 ಕೋಟಿ ವ್ಯಯಿಸಿದೆ. ಕಳೆದ 2024ರ ನವೆಂಬರ್ ತಿಂಗಳಲ್ಲಿ ಪ್ರತಿದಿನ ಸರಾಸರಿ 7.87 ಲಕ್ಷ ಜನ ಸಂಚರಿಸಿದ್ದು, ಒಟ್ಟಾರೆ 2.36 ಕೋಟಿ ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡಿದ್ದರು. ಬಿಎಂಆರ್‌ಸಿಎಲ್ ಒಟ್ಟು ₹62.14 ಕೋಟಿ ಆದಾಯ ಗಳಿಸಿತ್ತು.