ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಿಸ್ವಾರ್ಥ ಸೇವೆಗೆ ಮನ್ನಣೆ ಸಿಕ್ಕೇ ಸಿಗುತ್ತದೆ ಎಂದು ವಿಧಾನ ಪರಿಷತ್ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಅದಮ್ಯ ರಂಗಶಾಲೆಯು ಶುಕ್ರವಾರ ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಾಂಧಿ ಸದ್ಭಾವನಾ ಪ್ರಶಸ್ತಿ ಪ್ರದಾನ ಹಾಗೂ ಭಸ್ಮಾಸುರ ಪ್ರಸಂಗ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ನಗಾರಿ ಬಾರಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಇತ್ತೀಚೆಗೆ ಮೂಲಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ. ಶಿಕ್ಷಣ, ಕೈಗಾರಿಕಾ ಕೃಷಿ ಕ್ಷೇತ್ರದಲ್ಲಿ ನಮ್ಮ ದೇಶ ತನ್ನದೇ ಆದ ಸಾಧನೆ ಮಾಡಿದೆ. ಇದಕ್ಕೆ ಕಾರಣ ಗಾಂಧೀಜಿ ನೇತೃತ್ವದಲ್ಲಿ ನಡೆದ ಹೋರಾಟ. ಇಲ್ಲಿ ಸನ್ಮಾನ ಸ್ವೀಕರಿಸಿದ ಸಾಧಕರಿಗೆ ಗಾಂಧೀ ಸದ್ಭಾವನ ಪ್ರಶಸ್ತಿ ದೊರಕಿದ್ದು ಅವರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಾನು ಕೂಡ ಅಧಿಕಾರಿಯಾಗಿದ್ದೆ. ಸರ್ಕಾರಿ ಕೆಲಸ ಒಂದು ಪವಿತ್ರವಾದ ಕೆಲಸವಾಗಿದ್ದು ಅದನ್ನು ನಿಷ್ಠೆಯಿಂದ ಮಾಡಿದರಷ್ಟೇ ಜನರು ನಮ್ಮನ್ನು ನೆನೆಯುತ್ತಾರೆ ಎಂದರು.ನಾನು ನಿವೃತ್ತಿಯಾದರೂ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಸಹಾಯ ಹಸ್ತ ಚಾಚುತ್ತ ಬಂದಿದ್ದೇನೆ. ಶಾಂತಿಧೂತ ಗಾಂಧೀಜಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಶಿಕ್ಷಕ ಹಾಗೂ ಲೇಖಕ ಸತೀಶ್ಜವರೇಗೌಡ ಮಾತನಾಡಿ, ಅಂಕಗಳಒತ್ತಡದಾಚೆಗೆ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡಲು ವಾರಾಂತ್ಯ ರಂಗಶಿಬಿರಗಳನ್ನು ಅದಮ್ಯ ರಂಗಶಾಲೆ ಮಾಡುತ್ತಿದೆ ಎಂದರು.ಕೆ.ಟಿ. ವೀರಪ್ಪ ಮಾತನಾಡಿ, ಗಾಂಧೀಜಿ ಸೇವಾ ಮನೋಭಾವ, ಸಹಕಾರ ಜೀವನದ ಸಂದೇಶ ಸಾರಿದವರು. ಅವರನ್ನು ನೆನೆದು ಕೆಲಸಗಳನ್ನು ಮಾಡಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯಬೇಕು. ಆ ಪ್ರೇರಣಾಶಕ್ತಿ ಎಲ್ಲರ ಜೊತೆಗಿರಲಿ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ವಿಜಯನಗರ ಉಪ ವಿಭಾಗದ ಎಸಿಪಿ ಜಿ.ಎಸ್. ಗಜೇಂದ್ರ ಪ್ರಸಾದ್, ಪ್ರಜಾವಾಣಿಯ ಹಿರಿಯ ವರದಿಗಾರ ಎಂ. ಮಹೇಶ್, ಪಿರಿಯಾಪಟ್ಟಣದ ಕಲ್ಪವೃಕ್ಷ ಕ್ರೆಡಿಟ್ ಕೋ-ಆಪರೇಟಿವ್ಸೊಸೈಟಿ ಅಧ್ಯಕ್ಷ ಪಿ. ಪ್ರಶಾಂತ್ ಗೌಡ, ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ. ಸೋಮಣ್ಣ, ಕೊಳ್ಳೇಗಾಲದ ಶ್ರೀವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿ. ವಾಸವಾಂಬ, ಮಂಡ್ಯದ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದ ಪ್ರಾಂಶುಪಾಲೆ, ಕವಯತ್ರಿ ಎಚ್.ಆರ್. ಕನ್ನಿಕಾ ಅವರಿಗೆ ಗಾಂಧಿ ಸದ್ಭಾವನಾ ಪ್ರಶಸ್ತಿಯನ್ನು ಗಾಂಧಿವಾದಿ ಕ.ಟಿ. ವೀರಪ್ಪ ಪ್ರದಾನ ಮಾಡಿದರು.ಅದಮ್ಯ ರಂಗಶಾಲೆಯ ವಾರಾಂತ್ಯ ರಂಗ ತರಬೇತಿ ಶಿಬಿರದ ಮಕ್ಕಳು ಲೋಕನಾಥ ಸೋಗುಂ ಅವರ ಸಂಗೀತ ಮತ್ತು ನಿರ್ದೇಶನದಲ್ಲಿ ‘ಭಸ್ಮಾಸುರ ಪ್ರಸಂಗ’ ಮಕ್ಕಳ ನಾಟಕ ಪ್ರಸ್ತುತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು ಮಾತನಾಡಿದರು. ಅದಮ್ಯ ರಂಗಶಾಲೆ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ, ಕಾರ್ಯದರ್ಶಿ ಚಂದ್ರು ಮಂಡ್ಯ, ಬಸಪ್ಪ ಸಿ. ಸಾಲುಂಡಿ, ಕೆ.ಎಸ್. ಸತೀಶ್ ಕುಮಾರ್, ಬಿ. ಬಸವರಾಜು, ಎನ್. ನವೀನ್ ಕುಮಾರ್, ನಾಗೇಶ್ ಕಾವ್ಯಪ್ರಿಯ, ಆರ್.ಎಸ್. ಸಹನಾ. ಎಸ್. ಪ್ರೀತಿ ಮೊದಲಾದವರು ಇದ್ದರು.