ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಸೋಂಪುರ ಹೋಬಳಿಯ ಸೀಗೇಪಾಳ್ಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಚಿರತೆಯೊಂದು ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಬಲಿ ಪಡೆದು ಪರಾರಿಯಾಗಿತ್ತು. ಇದರಿಂದ ಕಂಬಾಳು, ಗೊಲ್ಲರಹಟ್ಟಿ ಗ್ರಾಮ ಸೇರಿದಂತೆ ಅಕ್ಕ- ಪಕ್ಕದ ಗ್ರಾಮಗಳ ಜನರ ನಿದ್ದೆಗೆಡಿಸಿದ್ದ ಚಿರತೆ, ಕೊನೆಗೂ ಬೋನಿಗೆ ಬಿದ್ದಿದೆ. ವಿಧಿ- ವಿಜ್ಞಾನ ಪ್ರಯೋಗಾಲಯದ ವರದಿ ನಂತರ ನರಭಕ್ಷಕ ಚಿರತೆ ಇದೇನಾ? ಅಥವಾ ಬೇರೆಯಾದ? ಎಂಬುದು ಪತ್ತೆಯಾಗಲಿದೆ.ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಮುದ್ವೀರೇಶ್ವರ ದೇವಾಲಯದ ಬಳಿಯ ಗಂಜಿಕಟ್ಟೆ ಎಂಬಲ್ಲಿ ಇರಿಸಿದ್ದ ತುಮಕೂರಿನ ಬೃಹತ್ ಬೋನಿಗೆ ಚಿರತೆ ಸೋಮವಾರ ಬೆಳಗ್ಗೆ ೦೮ ಗಂಟೆ ವೇಳೆಗೆ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಸುಮಾರು 7- 8 ವರ್ಷದ ಗಂಡು ಚಿರತೆ ಇದಾಗಿದೆ.
ಎಂಟು ದಿನಗಳ ಕಾರ್ಯಾಚರಣೆ:ನ.17ರಂದು ಸೀಗೇಪಾಳ್ಯ ಗೊಲ್ಲರಹಟ್ಟಿಯ ರೈತ ಮಹಿಳೆ ಕರಿಯಮ್ಮ ಎಂಬುವರು, ಗೋವುಗಳಿಗೆ ಹುಲ್ಲು ಕಟಾವು ಮಾಡುವಾಗ ಚಿರತೆ ದಾಳಿ ನಡೆಸಿ, ಮಹಿಳೆಯ ರುಂಡ ತಿಂದಿತ್ತು, ಇದಾದ ನಂತರ, ನ.18 ರಿಂದ ಆರ್ ಎಫ್ ಮಂಜುನಾಥ್ ನೇತೃತ್ವದಲ್ಲಿ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆ ಆರಂಭಿಸಿ, ನ.25 ರವರೆಗೆ ಎಂಟು ದಿನಗಳ ಕಾಲ ಕಾರ್ಯಾಚರಣೆ ನಡೆದು, ಅಂತಿಮವಾಗಿ ಚಿರತೆ ಬೋನಿಗೆ ಬಿದ್ದಿದ್ದು ಸ್ಥಳೀಯರಲ್ಲಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ.
ನರಭಕ್ಷಕ ಚಿರತೆ ಇದೇನಾ ?!:ಬೆಂ.ಗ್ರಾ. ಜಿಲ್ಲಾ ಡಿಎಫ್ ಒ ಸರೀನಾ ಸಿಕ್ಕಲಿಗಾರ್ ಮಾತನಾಡಿ, ಸೆರೆಸಿಕ್ಕ ಚಿರತೆ ಹಾಗೂ ಮಹಿಳೆಯನ್ನು ಕೊಂದ ಚಿರತೆ ಇದೇನಾ ಎಂಬುದನ್ನು, ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ, ಮೃತ ಮಹಿಳೆಯ ಮೇಲಿದ್ದ ಕೂದಲು, ರಕ್ತ ಮಾದರಿಯನ್ನು ಈಗಾಗಲೇ ಕಳುಹಿಸಿದ್ದೇವೆ, ಸೆರೆ ಸಿಕ್ಕ ಚಿರತೆಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ನಂತರ, ನರಭಕ್ಷಕ ಚಿರತೆ ಇದೇನಾ ? ಅಥವಾ ಬೇರೆಯದ್ದಾ? ಎಂಬುದನ್ನು ದೃಢೀಕರಿಸಲಾಗುತ್ತದೆ ಎಂದರು.
ಕಾರ್ಯಾಚರಣೆ ವಿವರ:ಬೆಳಗ್ಗೆ ಸುಮಾರು 8 ಗಂಟೆಗೆ ಚಿರತೆ ಬೋನಿಗೆ ಬಿದ್ದ ನಂತರ ಮಧ್ಯಾಹ್ನ 12 ಗಂಟೆ ವೇಳೆಗೆ, ಬನ್ನೇರುಘಟ್ಟ ಪಶು ವೈದ್ಯ ಡಾ.ಕಿರಣ್ ಅರವಳಿಕೆ ನೀಡಿ, ನಂತರ ಬನ್ನೇರುಘಟ್ಟದಿಂದ ತಂದ ಬೋನಿಗೆ ಹಾಕಿಕೊಂಡು, ಚಿರತೆಯನ್ನು ಬನ್ನೇರುಘಟ್ಟಕ್ಕೆ ಸಾಗಿಸಲಾಯಿತು.
ಕಾರ್ಯಾಚರಣೆ ನಿಲ್ಲಲ್ಲಾ:ಇನ್ನುಳಿದ ಚಿರತೆಗಳನ್ನು ಸೆರೆಹಿಡಿಯಲು ಎಲ್.ಟಿ.ಎಫ್. (ಲಿಫಾರ್ಡ್ ಟಾಸ್ಕ್ ಪೋರ್ಸ್) ರಚನೆಯಾಗಿದ್ದು, ಕಾರ್ಯಾಚರಣೆ ಮುಂದುವರಿಯುತ್ತದೆ, 10 ಬೋನುಗಳು ಮತ್ತು 18 ಸಿಸಿಟಿವಿಗಳ ಮೂಲಕ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದರು.
ಮಹಿಳೆ ಸಾಯಿಸಿದ್ದ ಜಾಗದಲ್ಲಿ ಕೂತಿದ್ದ ಚಿರತೆ:ನ.24ರಂದು ಮಹಿಳೆಯನ್ನು ಬಲಿ ಪಡೆದಿದ್ದ ಜಾಗದ ಬಂಡೆಯ ಮೇಲೆ ಕೂತಿರುವ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರು ಪ್ರತ್ಯಕ್ಷವಾಗಿ ನೋಡಿ ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದಾರೆ.
ಅರಣ್ಯಾಧಿಕಾರಿಗಳಾದ ಎಸಿಎಫ್ ನಿಜಾಮುದ್ದೀನ್, ದಾಬಸ್‌ಪೇಟೆ ಪಿ.ಎಸ್.ಐ. ವಿಜಯಕುಮಾರಿ ಮತ್ತು ಸಿಬ್ಬಂದಿ, ಆರ್.ಎಫ್.ಓ ಮಂಜುನಾಥ್, ಸುಮಾರು100 ಅರಣ್ಯ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಂದಾಯ ಇಲಾಖೆಯ ಆರ್.ಐ. ಸುಂದರ್ ರಾಜ್, ಶಿವಗಂಗೆ ಗ್ರಾಪಂ ಅಧ್ಯಕ್ಷ ಪ್ರಭುದೇವ್, ಸದಸ್ಯೆ ಉಮಾರೇವಣ್ಣ ಸ್ಥಳದಲ್ಲಿದ್ದರು.