ಸಾರಾಂಶ
-ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಎಚ್ಚರಿಕೆ । ಮಸ್ಕಿಯಲ್ಲಿ ಬಿಜೆಪಿಯಿಂದ ನಮ್ಮ ಭೂಮಿ-ನಮ್ಮ ಹಕ್ಕು ಹೋರಾಟ । ಹಕ್ಕು ಪತ್ರಕ್ಕೆ ಒತ್ತಾಯ
-----ಕನ್ನಡಪ್ರಭ ವಾರ್ತೆ ಮಸ್ಕಿ
ಪುರಸಭೆ ವ್ಯಾಪ್ತಿಯ ಗಾಂಧಿ ನಗರದ 7ನೇ ವಾರ್ಡ್ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಮುಂದಾಗಿದ್ದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಕ್ರಮವನ್ನು ರದ್ದು ಮಾಡುವ ಮೂಲಕ ವಸತಿ ಸಚಿವ ಜಮೀರ್ ಅಹ್ಮದ್ ಅವರು ಬಡವರ ಹೊಟ್ಟೆಗೆ ಬರೆ ಎಳೆದಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಆರೋಪಿಸಿದರು.ಹಳೆ ಬಸ್ ನಿಲ್ದಾಣದ ಬಳಿ ಇರುವ ಡಾ. ಅಂಬೇಡ್ಕರ್ ಪ್ರತಿಮೆ ಮುಂಭಾಗ ಬಿಜೆಪಿ ಪಕ್ಷದ ನೇತೃತ್ವದಲ್ಲಿ ನಡೆದ ನಮ್ಮ ಭೂಮಿ – ನಮ್ಮ ಹಕ್ಕು ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಗಾಂಧಿ ನಗರದಲ್ಲಿನ ಸರ್ವೇ ನಂಬರ್ 7/1/ರ 7 ಎಕರೆ ಪ್ರದೇಶವನ್ನು ಜಮೀನಿನ ಮಾಲೀಕರು ಕೊಳಚೆ ಅಭಿವೃದ್ಧಿ ಮಂಡಳಿಗೆ ಬಿಟ್ಟು ಕೊಟ್ಟ ಹಿನ್ನೆಲೆ ಕೊಳಚೆ ಅಭಿವೃದ್ಧಿ ಮಂಡಳಿಯು ಅಲ್ಲಿ ವಾಸಿಸುವ 250ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಕಾರ್ಯಕ್ರಮ ಆಯೋಜನೆ ಮಾಡಿತ್ತು. ಆದರೆ, ಸಚಿವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಇದು ವಕ್ಫ್ ಆಸ್ತಿ ಎಂದು ಹೇಳಿ ಕಾರ್ಯಕ್ರಮವನ್ನು ರದ್ಧು ಮಾಡಿದ್ದಾರೆ ಎಂದರು.
ಪಹಣಿ ಪತ್ರದಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ ಎಂದು ನಮೂದು ಆಗಿದ್ದರು ಸಹ ದಾಖಲೆಗಳನ್ನು ಪರಿಶೀಲನೆ ಮಾಡದೆ ಕಾರ್ಯಕ್ರಮ ರದ್ದು ಮಾಡಿ ಬಡಜನರಿಗೆ ವಂಚನೆ ಮಾಡಿದ್ದಾರೆ. ಇದು ಸಚಿವರ ತುಷ್ಠಿಕರಣ ನೀತಿ ತೋರಿಸುತ್ತದೆ ಎಂದು ಹೇಳಿದರು.15 ದಿನಗಳಲ್ಲಿ ವಾರ್ಡ್ ನಿವಾಸಿಗಳಿಗೆ ಹಕ್ಕುಪುತ್ರ ನೀಡದಿದ್ದರೆ ಬೀದಿಗೆ ಇಳಿದು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ತಾಲೂಕಿನಲ್ಲಿ ರೈತರ ಪಹಣಿಗಳಲ್ಲಿ ವಕ್ಪ್ ಎಂದು ನಮೂದು ಆಗಿರುವ ಬಗ್ಗೆ ದೂರುಗಳು ಬಂದಿವೆ. ಕೂಡಲೇ ಅದನ್ನು ಸರಿಪಡಿಸಿ ರೈತರ ಜಮೀನನ್ನು ರೈತರಿಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಮೂಲ ಆಸ್ತಿ ರಕ್ಷಣೆಗೆ ಮುಂದಾಗಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ರವಿಗೌಡ, ಸುರೇಶ್ ಹರಸೂರ್, ಚೇತನ್ ಪಾಟೀಲ್, ಪ್ರಸನ್ನ ಪಾಟೀಲ್, ಯಲ್ಲೋಜಿರಾವ್ ಕೊರೆಕಾರ, ಬಿಜೆಪಿ ಮಂಡಲ ಕಾರ್ಯದರ್ಶಿ ರಮೇಶ ಉದ್ಬಾಳ, ಮಲ್ಲಣ್ಣ ಬ್ಯಾಳಿ, ಸಂತೋಷ ಪತ್ತಾರ್, ಮಸೂದ ಪಾಶ, ಯಮನಪ್ಪ ಭೋವಿ, ಹುಸೇನಪ್ಪ ವಿಭೂತಿ, ಶಾಂತಮ್ಮ, ಶ್ರೀಕಾಂತ ಮುರಾರಿ ಸೇರಿದಂತೆ ಪುರಸಭೆಯ ಬಿಜೆಪಿ ಸದಸ್ಯರು, ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಹಕ್ಕುಪತ್ರ ವಂಚಿತ ಸ್ಲಂ ನಿವಾಸಿಗಳು ಪಾಲ್ಗೊಂಡಿದ್ದರು.------------------
ಪೋಟೊ: 25-ಎಂ ಎಸ್ ಕೆ -001:ಮಸ್ಕಿ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಇರುವ ಡಾ. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಬಿಜೆಪಿ ನೇತೃತ್ವದಲ್ಲಿ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.