ಕನ್ನಡಪ್ರಭ ವಾರ್ತೆ ಯಲ್ಲಾಪುರ
ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿ.ಎಂ.ಎಸ್.)ನ ಅಧ್ಯಕ್ಷರಾಗಿ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಉಪಾಧ್ಯಕ್ಷರಾಗಿ ನರಸಿಂಹ ಕೋಣೆಮನೆ ಪುನರಾಯ್ಕೆಗೊಂಡಿದ್ದಾರೆ.ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ ನ್ಯಾಯಾಲಯದ ಆದೇಶದಂತೆ ೨೦೨೫, ಸೆ. ೧೮ರಂದು ಚುನಾವಣೆ ನಡೆದು ಮತ ಪೆಟ್ಟಿಗೆಯನ್ನು ಉಪಖಜಾನೆಯಲ್ಲಿ ಭದ್ರತೆಯಲ್ಲಿ ಇಡಲಾಗಿತ್ತು. ಇದೀಗ ನ್ಯಾಯಾಲಯದ ಆದೇಶದಂತೆ ಜು. ೬ರಂದು ಮತ ಎಣಿಕೆ ನಡೆದು ಎನ್.ಕೆ.ಭಟ್ಟ ಗುಂಪು 14ರಲ್ಲಿ 12ರಲ್ಲಿ ಆಯ್ಕೆಯಾಗುವ ಮೂಲಕ ಜಯಭೇರಿ ಬಾರಿಸಿತ್ತು. ಮಂಗಳವಾರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಒಂದೊಂದೇ ನಾಮಪತ್ರ ಬಂದ ಕಾರಣ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಕುಮಟಾದ ಸಹಾಯಕ ನಿಬಂಧಕ ಬಿ.ಡಿ. ಡಿಸೋಜಾ ಘೋಷಿಸಿದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಬಿಜೆಪಿ ರಾಜ್ಯವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಸೇರಿದಂತೆ ಹಲವರಿದ್ದರು.ನಂತರ ಮಾಧ್ಯಮದೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಎನ್.ಕೆ. ಭಟ್ಟ, ರೈತರ ಪರ ಹೋರಾಟ ನಿರಂತರವಾಗಿರುತ್ತದೆ. ರೈತರಿಗೆ ಸಾಲದ ಬಡ್ಡಿದರ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಜು.೧೮ರಂದು ರೈತರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಉಪಾಧ್ಯಕ್ಷ ನರಸಿಂಹ ಕೊಣೆಮನೆ ಮಾತನಾಡಿ, ಆಡಳಿತ ಸಮಿತಿ ಇಲ್ಲದಿದ್ದರೆ ರೈತರಿಗೆ ಸಂಸ್ಥೆಯ ಮೇಲೆ ವಿಶ್ವಾಸ ಬಾರದು. ೯ ತಿಂಗಳು ಸಮಿತಿ ಇಲ್ಲದೇ ೧೩ ಸಾವಿರ ಕ್ವಿಂಟಲ್ ಅಡಕೆ ಬೇರೆಡೆಗೆ ಹೋಗಿದೆ. ಆ ರೈತರನ್ನು ಮತ್ತೆ ವಾಪಸ್ ಸಂಘಕ್ಕೆ ಕರೆತರಬೇಕು. ಗೋಡನ್ ನಿರ್ಮಾಣಕ್ಕೆ ೧೦ ಗುಂಟೆ ಸ್ಥಳ ಖರೀದಿಸಿದ್ದು, ನೂತನ ಕಟ್ಟಡ ಕಟ್ಟಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.