ಬ್ಯಾಡಗಿ: ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಆಡಳಿತಾರೂಢ ಸರಕಾರಗಳ ವಿರುದ್ಧ ಸಂಘಟಿತರಾಗಿ ಬೃಹತ್ ಚಳವಳಿ ರೂಪಿಸಿ, ಹೋರಾಟದ ಮೂಲಕ ಗೆಲುವು ಸಾಧಿಸಬೇಕಾಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾಧ್ಯಕ್ಷ ಎಸ್.ಬಸವರಾಜ ಕರೆ ನೀಡಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಂಗಳವಾರ ಬ್ಯಾಡಗಿ ತಾಲೂಕಿನ ಶೈಕ್ಷಣಿಕ ಸಮಗ್ರ ಅಭಿವೃದ್ಧಿಗಾಗಿ ಆಯೋಜಿಸಿದ್ದ ಎಸ್‌ಎಫ್‌ಐ ವಿದ್ಯಾರ್ಥಿಗಳ 4ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಗಳು ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಿಸುವುದು ಆದ್ಯ ಕರ್ತವ್ಯವಾಗಿದೆ ಎಂದರು.
ದೇಶದಲ್ಲಿಯೇ ಬ್ಯಾಡಗಿ ಮೆಣಸಿನಕಾಯಿಗೆ ವಿಶೇಷ ಹೆಸರು ಮತ್ತು ಖ್ಯಾತಿಯಿದೆ. ಇಂತಹ ಪಟ್ಟಣದಲ್ಲಿ ಶಿಕ್ಷಣ ಹಾಗೂ ಕೃಷಿಗೆ ಪೂರಕವಾದ ಸಂಶೋಧನಾ ಕೇಂದ್ರಗಳು ಸ್ಥಾಪನೆಯಾಗಬೇಕು. ವಿದ್ಯಾರ್ಥಿ ಮತ್ತು ಯುವಜನರು ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯ ಕುರಿತು ಅರಿವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ವಿದ್ಯಾರ್ಥಿಗಳ ಸಮಸ್ಯೆಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಸಿದ ಅವರು, ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಕೈಬಿಡುವಂತೆ ಆಗ್ರಹಿಸಿದರು.
ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ: ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪೂರ ಮಾತನಾಡಿ, ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದು ಸರಿಯಲ್ಲ. ಸರಕಾರ ಅಂತಹ ಆದೇಶಗಳನ್ನು ಹಿಂಪಡೆದು ಎಲ್ಲ ಸರಕಾರಿ ಕನ್ನಡ ಶಾಲೆಗಳಿಗೆ ಅಗತ್ಯ ಅನುದಾನ ಒದಗಿಸಬೇಕು. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರುವ ಕ್ರಮವನ್ನು ಕೈಬಿಡಬೇಕು. ಶಿಕ್ಷಣ ಇಲಾಖೆಯಲ್ಲಿ ರುವ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ: ಸಮ್ಮೇಳನದ ಅಂಗವಾಗಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಿಂದ ಬಸ್ ನಿಲ್ದಾಣದ ಮಾರ್ಗವಾಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳು ಬೃಹತ್ ಮೆರವಣಿಗೆ ನಡೆಸಿದರು. ವಿದ್ಯಾರ್ಥಿಗಳ ಹಕ್ಕೊತ್ತಾಯಗಳ ಪರ ಘೋಷಣೆಗಳನ್ನು ಕೂಗಿದರು. ನಂತರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಮಾವಣೆ ಗೊಂಡ ವಿದ್ಯಾರ್ಥಿಗಳು ಎಸ್‌ಎಫ್‌ಐ ಶ್ವೇತ ಪತಾಕೆಯ ಧ್ವಜಾರೋಹಣ ನೆರವೇರಿಸಿ, ಹುತಾತ್ಮ ಸ್ತಂಭಕ್ಕೆ ಪುಷ್ಪನಮನ ಸಲ್ಲಿಸಿದರು.
ರಘು ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಮುಖಂಡ ಅರುಣಕುಮಾರ ನಗಾವತ ಚೈತ್ರಾ ಕೊರವರ, ಸುಗಂಧ ಉಪಸ್ಥಿತರಿದ್ದರು. ವರ್ಷಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪಂಚಾಕ್ಷರಿ ಕೋಟಿಹಾಳ, ಶಿಲ್ಪಾ ಪಾಟೀಲ, ಎನ್.ನಿಖಿಲ್. ರೇಣುಕಾ, ಸಹನ, ಕನ್ನವ್ವ, ಹಿಮಾಶ್ರೀ, ಚೈತ್ರಾ, ದೀಪಲಕ್ಷ್ಮೀ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.