ಇಂದಿನಿಂದ ಅಗ್ನಿವೀರ ಸೇನಾ ನೇಮಕಾತಿ ರ್‍ಯಾಲಿ

| Published : Aug 08 2025, 01:00 AM IST

ಇಂದಿನಿಂದ ಅಗ್ನಿವೀರ ಸೇನಾ ನೇಮಕಾತಿ ರ್‍ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿ ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆ.8 ರಿಂದ ಆರಂಭವಾಗಲಿದ್ದು, ಶುಕ್ರವಾರದಿಂದ ಆ.22 ವರೆಗೆ ಹಾಗೂ ಆ.25ಕ್ಕೆ ಶಾರಿರೀಕ ದೇಹದಾರ್ಡ್ಯ ಪರೀಕ್ಷೆ ಮತ್ತು 26ಕ್ಕೆ ವೈದ್ಯಕೀಯ ಪರೀಕ್ಷೆ ನಡೆಯಲಿವೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ.

ಕನ್ನಡಪ್ರಭ ವಾರ್ತೆ ರಾಯಚೂರು

ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿ ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆ.8 ರಿಂದ ಆರಂಭವಾಗಲಿದ್ದು, ಶುಕ್ರವಾರದಿಂದ ಆ.22 ವರೆಗೆ ಹಾಗೂ ಆ.25ಕ್ಕೆ ಶಾರಿರೀಕ ದೇಹದಾರ್ಡ್ಯ ಪರೀಕ್ಷೆ ಮತ್ತು 26ಕ್ಕೆ ವೈದ್ಯಕೀಯ ಪರೀಕ್ಷೆ ನಡೆಯಲಿವೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ.

ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅಭ್ಯರ್ಥಿಗಳಿಗೆ ಅನುಕೂಲವಾಗಲು ವಿಶ್ವ ವಿದ್ಯಾಲಯದ ಆವರಣದಲ್ಲಿ ಪೆಂಡಾಲ್ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಪೂರೈಕೆ, ಮೊಬೈಲ್ ಟಾಯ್ಲೆಟ್ ಸೇರಿದಂತೆ ನಾನಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಭಾಗಿಯಾಗಲು ವಿವಿಧೆಡೆ ವಸತಿ ಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆ ಸೇರಿದಂತೆ ನಾನಾ ಸೌಕರ್ಯ ಕಲ್ಪಿಸಲಾಗಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿವಿ ಆವರಣದಲ್ಲಿ ಬ್ಯಾರಿಕೇಡ್ ಅಳವಡಿಸಿ, ಅಗತ್ಯ ಪ್ರಮಾಣದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಪೊಲೀಸ್ ಭದ್ರತೆಗೆ ಕ್ರಮ ವಹಿಸಿದ್ದಾರೆ.

ಸೇನಾ ಅಧಿಕಾರಿಗಳು ಭಾಗಿ

ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ಈ ಸೇನ ನೇಮಕಾತಿ ರ್ಯಾಲಿ ಪ್ರಕ್ರಿಯೆ ನಡೆಯಲಿದ್ದು, ಸೇನಾ ಅಧಿಕಾರಿ ಎಆರ್ಓ ಮನೋಜ್ ಸೇರಿದಂತೆ ಅನೇಕ ಅಧಿಕಾರಿಗಳು ಹಲವಾರು ದಿನಗಳಿಂದ ರಾಯಚೂರ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಆವರಣದಲ್ಲಿದ್ದು ಸೇನಾ ನೇಮಕಾತಿ ರ್ಯಾಲಿಯ ನಾನಾ ಪ್ರಕ್ರಿಯೆಗಳನ್ನು ನಡೆಸಿ ಸಿದ್ಧತೆ ಮಾಡಿದ್ದಾರೆ.

ರಾಯಚೂರಿನತ್ತ ಅಭ್ಯರ್ಥಿಗಳು

ರಾಯಚೂರು ಸೇರಿದಂತೆ ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಿಂದ ಪ್ರಥಮ ಹಂತದಲ್ಲಿ ಆಯ್ಕೆಯಾದ ಅಂದಾಜು 15,000 ಅಭ್ಯರ್ಥಿಗಳು ಈ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು, ಸೇನೆ ಸೇರಬೇಕು, ನಾಡಸೇವೆ ಮಾಡಬೇಕು ಎನ್ನುವ ಕನಸು ಹೊತ್ತ ಯುವ ಪಡೆಯು ರಾಯಚೂರು ಸಿಟಿಯತ್ತ ತಂಡೋಪತಂಡವಾಗಿ ಆಗಮಿಸುವ ದೃಶ್ಯಗಳು ಕಾಣಿಸುತ್ತಿವೆ.

---

ಸೇನೆಯಲ್ಲಿ ಎಲ್ಲ ವಿಭಾಗಗಳ ಆಯ್ಕೆಯಾಗಿ ಸೇನಾ ನೇಮಕಾತಿ ರ್‍ಯಾಲಿಯನ್ನು ನಡೆಸಲಾಗುತ್ತದೆ. ಈ ಸೇನಾ ಭರ್ತಿಯು ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವುದು ವಿಶೇಷ. ಈ ರ್ಯಾಲಿಯಲ್ಲಿ ಬೇರೆ ಬೇರೆ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿಯಾಗಲಿದ್ದು, ರ್‍ಯಾಲಿಯು ಶಿಸ್ತಿನಿಂದ ನಡೆದಲ್ಲಿ ನಮ್ಮ ಜಿಲ್ಲೆಗೆ ಹೆಸರು ಬರಲಿದೆ. ರಾಯಚೂರ ಜಿಲ್ಲೆಯ ಸಾರ್ವಜನಿಕರು ಈ ಸೇನಾ ನೇಮಕಾತಿ ರ್ಯಾಲಿಗೆ ಸಹಕರಿಸಬೇಕು. ಈ ಭಾಗದ ವಿದ್ಯಾರ್ಥಿ-ಯುವಜನರು ಈ ರ್ಯಾಲಿಯಿಂದಾಗಿ ಸೇನೆ ಸೇರುವ ಸ್ಫೂರ್ತಿ ಹೊಂದಬೇಕು.

- ಕೆ ನಿತೀಶ್, ಜಿಲ್ಲಾಧಿಕಾರಿ, ರಾಯಚೂರು