ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಬಿಜೆಪಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ರೈಲ್ವೆ ಡಂಪಿಂಗ್ ಯಾರ್ಡ್ ಬಳಿ ನಡೆಸುತ್ತಿದ್ದು, ಬಿಜೆಪಿ ಧರಣಿ ಸತ್ಯಾಗ್ರಹದ ಬಗ್ಗೆ ಕಾಂಗ್ರೆಸ್ ಪಕ್ಷ ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟಣೆ ನೀಡಿದ್ದನ್ನು ಬಿಜೆಪಿ ಪ್ರಶ್ನಿಸಿದೆ.ನಗರ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಈಶ್ವರ ನಾಯಕ ಮಾತನಾಡಿ, ಈ ಭಾಗದ ನೂರಾರು ಜನರು ಪ್ರತಿನಿತ್ಯ ಧೂಳು ಕುಡಿದು ಬದುಕಬೇಕಿದೆ. ಈ ಬಗ್ಗೆ ಬಿಜೆಪಿಯ ಧರಣಿ ಸತ್ಯಾಗ್ರಹವನ್ನು ಅವಹೇಳನ ಮಾಡುವ ಕಾಂಗ್ರೆಸ್ ಪಕ್ಷದವರಿಗೆ ಬಡಜನರ ಆರೋಗ್ಯದ ಬಗ್ಗೆ ಯಾವುದೇ ಅನುಕಂಪವಿಲ್ಲ. ಶಾಸಕ ಭವನವನ್ನು ಕಾಂಗ್ರೆಸ್ ಪಕ್ಷದ ಕಾರ್ಯಾಲಯವಾಗಿ ಉಪಯೋಗಿಸಿರುವುದು ಯಾವ ನ್ಯಾಯ. ಕ್ಷೇತ್ರದಲ್ಲಿ ಯಾವುದೇ ಕೆಲಸವಾಗಲಿ ಸಂಬಂಧಪಟ್ಟ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದೇ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಶಾಸಕರೂ ಸಹ ರೈಲ್ವೆ ಡಂಪಿಂಗ್ ಯಾರ್ಡ್ ಬಗ್ಗೆ ಜನರ ಆರೋಗ್ಯ ಹಿತದೃಷ್ಠಿಯಿಂದ ಧ್ವನಿ ಎತ್ತಬೇಕೆಂಬುವುದೇ ನಮ್ಮ ವಾದ. ಆದರೆ ವಿನಾಕಾರಣ ಶಾಸಕರನ್ನು ಟೀಕಿಸಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷವನ್ನು ದೂಷಣೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಮಂಡಲಾಧ್ಯಕ್ಷ ಬಿ.ಎಂ.ಸುರೇಶ್ ಮಾತನಾಡಿ, ಬಡಜನರ ಆರೋಗ್ಯ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಈ ಭಾಗದ ಜನರ ಸಂಕಷ್ಟಗಳಿಗೆ ಪಕ್ಷ ಸ್ಪಂದಿಸುತ್ತಿದೆ. ಈ ಹಿಂದೆ ಲೋಕಸಭಾ ಸದಸ್ಯರೇ ಆಗಮಿಸಿ ಮನವಿ ಸ್ವೀಕರಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಅಧಿಕಾರಿಗಳು ಕಾರ್ಯೋನ್ಮುಖವಾಗಿಲ್ಲ. ಆದ್ದರಿಂದ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.ಈ ವೇಳೆ ಬಿಜೆಪಿ ಮುಖಂಡರಾದ ಚಿದಾನಂದ, ಡಾ.ರಾಮರಾಜ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ, ಬಿ.ಎಂ.ಶ್ರೀನಿವಾಸ್, ಚನ್ನಗಾನಹಳ್ಳಿ ಮಲ್ಲೇಶ್, ಈ.ರಾಮರೆಡ್ಡಿ, ದಿನೇಶ್‌ರೆಡ್ಡಿ, ಟಿ.ತಿಮ್ಮಪ್ಪ, ಬಾಬು ಮುಂತಾದವರು ಇದ್ದರು. --
ಬಾಕ್ಸ:ಮೈನ್ಸ್ ಲಾರಿಗಳನ್ನು ತಡೆದ ಬಿಜೆಪಿ ಕಾರ್ಯಕರ್ತರು:
ಧರಣಿ ನಿರತ ಸಂದರ್ಭದಲ್ಲಿ ಸಂಜೆ 6ರ ನಂತರ ಟಿಪ್ಪರ್‌ಗಳಲ್ಲಿ ಮೈನ್ಸ್ ಸಾಗಾಣಿಕೆ ಮಾಡದಂತೆ ನಿರ್ಬಂಧ ವಿದ್ದರೂ ಮೂರು ಲಾರಿಯಲ್ಲಿ ಸಂಜೆ 6.30ರ ನಂತರವೂ ಲೋಡ್ ಮಾಡಿ ರಸ್ತೆಗಳಿದ ಲಾರಿಗಳನ್ನು ಬಿಜೆಪಿ ಕಾರ್ಯಕರ್ತರು ತಡೆದರು.ಮೈನ್ಸ್ ಮೇಲ್ಭಾಗದಲ್ಲಿ ತಾಡಪಾಲ್‌ನಿಂದ ಮುಚ್ಚಿ ಸಾಗಾಟ ಮಾಡಬೇಕಿದ್ದು ಯಾವುದೇ ತಾಡಪಾಲ್ ಇಲ್ಲದೆ ಲಾರಿ ಸಾಗುತ್ತಿದ್ದು ಇದರಿಂದ ಧೂಳು ಹರಡುವ ಹಿನ್ನೆಲೆಯಲ್ಲಿ ಲಾರಿ ತಡೆಯಲಾಯಿತು. ಸ್ಥಳಕ್ಕೆ ಆಗಮಿಸಿದ ಇನ್ಸ್‌ಪೆಕ್ಟರ್ ಕೆ.ಕುಮಾರ್ ಮತ್ತು ತಂಡ ಲಾರಿ ಚಾಲಕರಿಗೆ ಎಚ್ಚರಿಕೆಯನ್ನು ನೀಡಿದರು. ಲಾರಿಗಳು ಪುನಃ ಮೈನ್ಸ್ ಯಾರ್ಡ್‌ಗೆ ಮರಳಿದವು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಮಾಜಿ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ, ಎ.ವಿಜಯೇಂದ್ರ, ದೇವರಾಜರೆಡ್ಡಿ, ಭದ್ರಿ, ಟಿ.ಮಂಜುನಾಥ, ಟಿ.ಜೆ.ತಿಪ್ಪೇಸ್ವಾಮಿ ಮುಂತಾದವರು ಇದ್ದರು.