ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಉಳಿದಿರುವ ಮೂರು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಮಾಡಬೇಕಾದ ಕೆಲಸ ಬಹಳಷ್ಟಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಉಪ್ಪರಿಗೇನಹಳ್ಳಿ ಗ್ರಾಮದ ಹತ್ತಿರ 5 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಚೆಕ್‍ಡ್ಯಾಂಗೆ ಬಾಗಿನ ಸಲ್ಲಿಸಿ ಮಾತನಾಡಿದರು.
ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದ ಹಲವೆಡೆ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿದ್ದರಿಂದ ಮುಂಗಾರು ಮಳೆಗೆ ಅವು ತುಂಬಿ ರೈತರಲ್ಲಿ ಸಂತಸ ಮೂಡಿಸಿವೆ. ಚೆಕ್ ಡ್ಯಾಂಗಳು ತುಂಬಿದ್ದರಿಂದ ಸಹಜವಾಗಿ ಅಂತರಜಲ ಮಟ್ಟ ಏರಿಕೆಯಾಗಿದೆ. ತೋಟದ ಬೆಳೆ ತೆಗೆಯುವ ರೈತರಿಗೆ ನೆರವಾಗಿದೆ ಎಂದರು.ದೂರದೃಷ್ಟಿಯ ಯೋಜನೆಗಳನ್ನು ಕ್ಷೇತ್ರದಲ್ಲಿ ತರಲು ಮುಂದಾಗಿದ್ದರ ಪರಿಣಾಮವಾಗಿ ಕೆರೆಗಳ ಅಭಿವೃದ್ಧಿಯಾಗಿದೆ, ಚೆಕ್ ಡ್ಯಾಂಗಳ ನಿರ್ಮಾಣ ಆಗಿದೆ, ವಿದ್ಯುತ್ ಕೇಂದ್ರಗಳ ಸ್ಥಾಪನೆಯಾಗಿದೆ. ಕ್ಷೇತ್ರದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ವಾಣಿವಿಲಾಸ ಕುಡಿಯುವ ನೀರಿನ ಯೋಜನೆ ಜಾರಿಯಾಗುತ್ತಿದೆ. ಅದಕ್ಕಾಗಿ 367 ಕೋಟಿ ರು. ಅನುದಾನ ನೀಡಲಾಗಿದೆ ಎಂದರು.
ಈ ಭಾಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ ಮಾಡಿ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಉಚಿತವಾಗಿ ಬಸ್ ಸೌಲಭ್ಯ ಒದಗಿಸುವ ಅಪೇಕ್ಷೆ ಇದೆ ಎಂದರು.ಎಲ್ಲಾ ಕಡೆ ಸಿ.ಸಿ.ರಸ್ತೆ, ಕೆರೆಗಳ ಅಭಿವೃದ್ದಿ, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ಕೆರೆಗಳಿಗೆ ನೀರು ತುಂಬಿಸಲು ಇನ್ನೂರು ಕೋಟಿ ರೂ. ಮುನ್ನೂರರಿಂದ ನಾಲ್ಕು ನೂರು ರೂ.ಗಳನ್ನು ಚೆಕ್‍ಡ್ಯಾಂ ಕಟ್ಟಲು ಖರ್ಚು ಮಾಡಲಾಗಿದೆ. ಹೀಗಿರುವಾಗ ಜನರು ಅಭಿವೃದ್ಧಿಯ ಕೆಲಸ ಮಾಡುವ ಜನರಿಗೆ ಚುನಾವಣೆಯಲ್ಲಿ ಮತ ನೀಡಬೇಕು. ಕೇವಲ ಒಂದು ನಿಮಿಷದಲ್ಲಿ ನೀವು ನಿರ್ಧರಿಸುವ ಮತ ಯೋಗ್ಯ ನಾಯಕನಿಗೆ ಲಭ್ಯವಾಗಬೇಕು. ಯಾರು ಕ್ಷೇತ್ರದದ ತುಂಬೆಲ್ಲಾ ಓಡಾಡಿ, ಜನರ ಸಂಕಷ್ಟಗಳಲ್ಲಿ ಭಾಗಿಯಾಗುತ್ತಾರೋ ಅಂತಹವರಿಗೆ ನೀವು ಮತ ಚಲಾಯಿಸಬೇಕು ಎಂದು ಶಾಸಕರು ತಿಳಿಸಿದರು.
ಅಧಿಕಾರ ಮುಖ್ಯವಲ್ಲ, ಇರುವಷ್ಟು ದಿನ ಹತ್ತಾರು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕೆಂದುಕೊಂಡಿರುವ ರಾಜಕಾರಣಿ ನಾನು. ಯಾರಿಂದಲೂ ಏನನ್ನು ಹೇಳಿಸಿಕೊಳ್ಳದೆ ಎಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡರೆ ಜನರಿಗೆ ಒಳ್ಳೆಯದಾಗುತ್ತದೆಂದು ಚಿಂತಿಸಿ ಹಗಲು-ರಾತ್ರಿ ಶ್ರಮಿಸುತ್ತಿದ್ದೇನೆಂದರು.ಗ್ರಾಮಸ್ಥ ಚಂದ್ರಣ್ಣ ಮಾತನಾಡಿ ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಇಂತಹ ಶಾಸಕರನ್ನು ನಾನು ಇದುವರೆವಿಗೂ ಕಂಡಿಲ್ಲ. ಪ್ರತಿನಿತ್ಯವೂ ಒಂದಲ್ಲ ಒಂದು ಅಭಿವೃದ್ದಿ ಕಾಮಗಾರಿಗಳು ಕ್ಷೇತ್ರದಲ್ಲಿ ನಡೆಯುತ್ತಿರುತ್ತವೆ. ರೈತರಿಗೆ ತೊಂದರೆಯಾಗಬಾರದೆಂದು ವಿದ್ಯುತ್ ಪವರ್ ಸ್ಟೇಷನ್‍ಗಳನ್ನು ಕಟ್ಟಿಸಿದ್ದಾರೆ. ಗುಣ ಮಟ್ಟದ ರಸ್ತೆ, ಚೆಕ್‍ಡ್ಯಾಂಗಳ ನಿರ್ಮಾಣ, ಶಾಲಾ-ಕಾಲೇಜು, ಆಸ್ಪತ್ರೆಗಳನ್ನು ಕಟ್ಟಿಸಿ ಜನರಿಗೆ ಅನುಕೂಲ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ಸದಸ್ಯರಾದ ಸುರೇಶ್, ಪ್ರವೀಣ್, ಚಂದ್ರಣ್ಣ, ಹನುಮಂತರಾಜು, ನಟರಾಜ್, ಬೋರಣ್ಣ, ಗಿರೀಶ್, ಮನು, ಗುತ್ತಿಗೆದಾರ ಎಚ್.ಜಗದೀಶ್ ಹಾಗೂ ರೈತರು, ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.