ರೈತರೊಂದಿಗೆ ಸೇವಾ ಮನೋಭಾವನೆಯೊಂದಿಗೆ ವ್ಯವಹರಿಸಿ

| Published : Oct 30 2024, 12:42 AM IST / Updated: Oct 30 2024, 12:43 AM IST

ಸಾರಾಂಶ

ಸರ್ಕಾರಿ ಅಧಿಕಾರಿಗಳು ಮತ್ತು ಕೃಷಿ ಪರಿಕರ ಮಾರಾಟಗಾರರ ನಡುವಿನ ಸಂಬಂಧಗಳ ಬಗ್ಗೆ ರೈತರಲ್ಲಿ ಋಣಾತ್ಮಕ ಮನೋಭಾವವಿದೆ.

ಕನ್ನಡಪ್ರಭ ವಾರ್ತೆ ಹುಣಸೂರು ಕೃಷಿ ಪರಿಕರಗಳ ಮಾರಾಟಗಾರರು ಹವಾಮಾನ ವೈಪರೀತ್ಯದ ನಡುವೆ ಬಸವಳಿದ ರೈತಾಪಿ ಜನರ ಬವಣೆ ಅರಿತು ಸೇವಾ ಮನೋಭಾವದೊಂದಿಗೆ ವ್ಯವಹರಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಎಚ್. ರವಿ ಮನವಿ ಮಾಡಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹುಣಸೂರು ಉಪವಿಭಾಗ ವ್ಯಾಪ್ತಿಯ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ಅಧಿಕಾರಿಗಳು ಮತ್ತು ಕೃಷಿ ಪರಿಕರ ಮಾರಾಟಗಾರರ ನಡುವಿನ ಸಂಬಂಧಗಳ ಬಗ್ಗೆ ರೈತರಲ್ಲಿ ಋಣಾತ್ಮಕ ಮನೋಭಾವವಿದೆ. ಇದನ್ನು ಹೋಗಲಾಡಿಸಬೇಕಿದೆ. ಮೂಲತಃ ನಾವೆಲ್ಲರೂ ರೈತರಾಗಿದ್ದೇವೆ. ವ್ಯಾಪಾರ ನಡೆಸುವಾಗ ಕೇವಲ ಲಾಭದ ದೃಷ್ಟಿಯಿಂದ ಮಾತ್ರ ರೈತರೊಂದಿಗೆ ವ್ಯವಹರಿಸಬೇಡಿ. ಅತಿವೃಷ್ಟಿ, ಅನಾವೃಷ್ಟಿಯ ಜೂಜಾಟದ ನಡುವೆ ಕಷ್ಟಪಟ್ಟು ರೈತ ಬೆಳೆಯುತ್ತಾನೆ. ಅವನ ಬವಣೆ ಅರಿಯಿರಿ. ವ್ಯಾಪಾರಂ ದ್ರೋಹಚಿಂತನಂ ಎನ್ನುವ ಹಳೆಯ ಮಾತನ್ನು ಸುಳ್ಳಾಗಿಸುವತ್ತ ನಿಮ್ಮ ಚಿಂತನೆ ಇರಲಿ ಎಂದರು. ಅಗತ್ಯವಸ್ತುಗಳ ಕಾಯ್ದೆ ಪಾಲನೆ ಆಗಲಿ ಕಾನೂನಿನ ಚೌಕಟ್ಟಿನಲ್ಲಿ ವ್ಯವಹಾರ ನಡೆಸುವ ಯಾವುದೇ ವ್ಯಾಪಾರಿಗೂ ನಮ್ಮಿಂದ ತೊಂದರೆಯಾಗುವುದಿಲ್ಲ ಎನ್ನುವ ಭರವಸೆ ನೀಡುತ್ತೇನೆ. ಅಗತ್ಯ ವಸ್ತುಗಳ ಕಾಯ್ಧೆಯಡಿ ಅಂಗಡಿ ಮಳಿಗೆಗಳಲ್ಲಿ ದರಪಟ್ಟಿ ಪ್ರದರ್ಶನ, ದಾಸ್ತಾನು ಪರಿಮಾಣ ಪ್ರದರ್ಶನ, ಪ್ರತಿ ಗ್ರಾಹಕರಿಗೆ ಬಿಲ್ ನೀಡುವುದು. ಎಂ.ಆರ್.ಪಿ ದರದಲ್ಲಿ ಮಾರಾಟ ಮಾಡುವುದು ಇವೇ ಮುಂತಾದ ಕನಿಷ್ಟ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಿರಿ. ಪಿಓಎಸ್ (ಪಾಯಿಂಟ್ ಆಫ್ ಸೇಲ್) ಉಪಕರಣವನ್ನು ಬಹುತೇಕ ಗ್ರಾಮೀಣ ಭಾಗದ ಡೀಲರ್ಗಳು ಸಮರ್ಪಕವಾಗಿ ಬಳಕೆ ಮಾಡದ ಕಾರಣ ಜಿಲ್ಲೆಯಲ್ಲಿ ದಾಸ್ತಾನು ಲೆಕ್ಕಾಚಾರ ಸಮರ್ಪಕವಾಗಿ ಸಿಗುತ್ತಿಲ್ಲ. ಹಾಗಾಗಿ ಪಿಓಎಸ್ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಕ್ಲಿಯರ್ ಮಾಡಿಕೊಳ್ಳಿರಿ ಎಂದರು. 28 ದಿನಗಳಲ್ಲಿ ಪರವಾನಗಿ ನೀಡುತ್ತೇನೆ ಮಾರಾಟಗಾರರಿಗೆ ಅಗತ್ಯವಾಗಿರುವ ರಸಗೊಬ್ಬರ ಮಾರಾಟದ ಪರವಾನಗಿ, ಬಿತ್ತನೆ ಬೀಜ ಮಾರಾಟ ಪರವಾನಗಿ ಸೇರಿದಂತೆ ವಿವಿಧ ರೀತಿಯ ಪರವಾನಗಿಯನ್ನು ಸರ್ಕಾರ ನಿಗದಿಪಡಿಸಿ 28 ದಿನಗಳೊಳಗೆ ನಿಮಗೆ ತಲುಪಿಸುವ ಜವಾಬ್ದಾರಿ ನನ್ನದು, ಇದಕ್ಕಾಗಿ ನೀವು ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಹೊರತುಪಡಿಸಿ ಒಂದು ರು. ಯಾರಿಗೂ ನೀಡಬೇಕಿಲ್ಲ. ಆದರೆ ಕಾನೂನಿನ ಪಾಲನೆ ನಿಮ್ಮದಾಗಬೇಕು. ವ್ಯಾಪಾರದೊಂದಿಗೆ ಸೇವೆಯೂ ನಿಮ್ಮ ವ್ಯಾಪಾರದ ಒಂದು ಭಾಗವಾಗಲಿ ಎಂದು ಕೋರಿದರು.ಸಭೆಯಲ್ಲಿ ಕೃಷಿ ಇಲಾಖೆ ಹುಣಸೂರು ಸಹಾಯಕ ನಿರ್ದೇಶಕ ಅನಿಲ್ಕುಮಾರ್, ಪಿರಿಯಾಪಟ್ಟಣದ ವೈ. ಪ್ರಸಾದ್, ಕೆ.ಆರ್. ನಗರದ ಕೆ.,ಎಂ. ಮಲ್ಲಿಕಾರ್ಜುನ, ತಾಲೂಕು ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ರಾಜಶೇಖರ್, ಗಿರೀಶ್, ಪ್ರಸಾದ್, ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಲಿಂಗರಾಜು, ನಿರ್ದೇಶಕ ಚಂದ್ರೇಗೌಡ, ರೈತ ಸೇವಾ ಕೇಂದ್ರದ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಮತ್ತು ರೈತರು ಇದ್ದರು. ------------