ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆ ಹೆಚ್ಚಿಸಲು ರಾಜ್ಯ ಸರ್ಕಾರ ಎಐ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿದ ಪರಿಣಾಮ ಇದೀಗ ಅಧಿಕಾರಿಗಳು, ನೌಕರರು ಮನೆ ಹತ್ತಿರವಿರುವ ಕಚೇರಿಗಳಿಗೆ ಡೆಪ್ಯೂಟೇಶನ್ ಅಥವಾ ವರ್ಗಾವಣೆ ಪಡೆಯುವ ಲಾಭಿಗೆ ಮುಂದಾಗಿರುವುದು ಕಂಡು ಬಂದಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು:

ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆ ಹೆಚ್ಚಿಸಲು ರಾಜ್ಯ ಸರ್ಕಾರ ಎಐ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿದ ಪರಿಣಾಮ ಇದೀಗ ಅಧಿಕಾರಿಗಳು, ನೌಕರರು ಮನೆ ಹತ್ತಿರವಿರುವ ಕಚೇರಿಗಳಿಗೆ ಡೆಪ್ಯೂಟೇಶನ್ ಅಥವಾ ವರ್ಗಾವಣೆ ಪಡೆಯುವ ಲಾಭಿಗೆ ಮುಂದಾಗಿರುವುದು ಕಂಡು ಬಂದಿದೆ.

ರಾಜ್ಯ ಸರ್ಕಾರ 42 ಇಲಾಖೆಯ ಅಧಿಕಾರಿಗಳು, ನೌಕರರಿಗೆ ‘ಕರ್ತವ್ಯ’ (ಕರ್ನಾಟಕ ಅಡ್ವಾನ್ಸ್ಡ್‌ ಅಟೆಂಡೆನ್ಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ) ಎಐ ಆಧಾರಿತ ಹಾಜರಾತಿ ನಿರ್ವಹಣಾ ತಂತ್ರಜ್ಞಾನ ಜಾರಿಗೊಳಿಸಿದೆ. ಈ ವ್ಯವಸ್ಥೆಯಡಿ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಚೇರಿಯಲ್ಲಿ ಹಾಜರಾಗಿ ತಮ್ಮ ಮೊಬೈಲ್‌ನಲ್ಲಿ ಹಾಜರಾತಿ ದಾಖಲಿಸಬೇಕು.

ಒಂದು ವೇಳೆ ತಡವಾದರೆ, ಸ್ವಯಂ ಪ್ರೇರಿತವಾಗಿ ಆಕಸ್ಮಿಕ ರಜೆ ಎಂದು ಪರಿಗಣಿಸಲಾಗುತ್ತದೆ. ಕಟ್ಟುನಿಟ್ಟಾಗಿ ವ್ಯವಸ್ಥೆ ಜಾರಿಗೊಳಿಸಿದ ಪರಿಣಾಮ ಇದೀಗ ಕೆಲವು ಅಧಿಕಾರಿಗಳು, ಸಿಬ್ಬಂದಿಗೆ ಸಂಕಷ್ಟ ಎದುರಾಗಿದ್ದು, ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು, ಉನ್ನತ ಅಧಿಕಾರಿಗಳು ಸೇರಿದಂತೆ ಪ್ರಭಾವಿಗಳ ಮೂಲಕ ತಮಗೆ ಅನುಕೂಲವಾಗುವ ಮತ್ತು ಮನೆ ಸಮೀಪದ ಸರ್ಕಾರಿ ಕಚೇರಿಗಳಿಗೆ ಡೆಪ್ಯೂಟೇಶನ್ ಅಥವಾ ವರ್ಗಾವಣೆ ಪಡೆಯುವುದಕ್ಕೆ ತಂತ್ರ ಆರಂಭಿಸಿದ್ದಾರೆ.

ಪ್ರತಿದಿನ ನೂರಾರು ಕಿ.ಮೀ. ಓಡಾಟ ಬ್ರೇಕ್‌?:

ಈವರೆಗೆ ಹಲವು ನೌಕರರು, ನೂರಾರು ಕಿ.ಮೀ.ನಿಂದ ಕಚೇರಿಗೆ ಬಸ್‌ ಅಥವಾ ರೈಲಿನ ಮೂಲಕ ಪ್ರತಿನಿತ್ಯ ಓಡಾಟ ನಡೆಸುತ್ತಿದ್ದರು. ಗ್ರಾಮಾಂತರ ಪ್ರದೇಶದಲ್ಲಿರುವ ಕಚೇರಿಗಳ ನೌಕರರು, ನಗರ ಪ್ರದೇಶದಲ್ಲಿ ಮನೆ ಮಾಡಿಕೊಂಡು ನಿತ್ಯ ಕಚೇರಿಗೆ ಹೋಗಿ ಬರುತ್ತಿದ್ದರು.

ಮೀಟಿಂಗ್‌ ನೆಪ ಹೇಳಿಕೊಂಡು ಕಚೇರಿಗೆ ಹೋಗದೆ ಕೆಲವು ಅಧಿಕಾರಿಗಳು, ಸಿಬ್ಬಂದಿ ಈವರೆಗೆ ದಿನ ಕಳೆಯುತ್ತಿದ್ದರು. ಹೊಸ ಹಾಜರಾತಿ ವ್ಯವಸ್ಥೆ ಜಾರಿಗೆ ಬಂದಿರುವುದಿಂದ ಕಡ್ಡಾಯವಾಗಿ ಪ್ರತಿದಿನ ಬೆಳಗ್ಗೆ 10ಕ್ಕೆ ಕಚೇರಿಯಲ್ಲಿ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ನಿತ್ಯದ ಓಡಾಟ ಕೈಬಿಡುವ ನಿರ್ಧಾರದ ಬಗ್ಗೆ ಕೆಲವು ನೌಕರರು ಚಿಂತಿಸುತ್ತಿದ್ದಾರೆ.

ಕಚೇರಿ ಸಮೀಪ ಮನೆ ಹುಡುಕಾಟ:

ನೌಕರರು ಇದೀಗ ಕಚೇರಿ ಇರುವ ಗ್ರಾಮದಲ್ಲಿಯೇ ಮನೆ ಹುಡುಕಾಟ ಸಹ ಆರಂಭಿಸಿರುವುದು ಕಂಡು ಬಂದಿದೆ. ಮತ್ತೆ ಕೆಲವರು, ಎಷ್ಟು ದಿನ ಈ ವ್ಯವಸ್ಥೆ ಇರಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ವ್ಯವಸ್ಥೆ ಮಾಡಿಕೊಳ್ಳಲೆಂದು ಸದ್ಯಕ್ಕೆ ತಾತ್ಕಲಿಕ ವಾಸ್ತವ್ಯಕ್ಕೆ ಬೇಕಾದ ತಯಾರಿಗೆ ಮುಂದಾಗಿದ್ದಾರೆ.ಶಾಲೆ, ಕಚೇರಿ ಸಮಯಕ್ಕೆ ಬಸ್‌ ಓಡಿಸಲು ಒತ್ತಡ:

ಕಟ್ಟುನಿಟ್ಟಿನ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಿರುವುದರಿಂದ ರಾಜ್ಯದಲ್ಲಿ ಶಾಲೆ ಹಾಗೂ ಕಚೇರಿ ಸಮಯಕ್ಕೆ ತಮ್ಮ ನಿವಾಸ ಸ್ಥಳದಿಂದ ಕಚೇರಿ ಅಥವಾ ಶಾಲೆ ಇರುವ ಸ್ಥಳಕ್ಕೆ ಸರ್ಕಾರಿ ಬಸ್‌ ಓಡಿಸುವಂತೆ ಸಾರಿಗೆ ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿರುವುದು ಸಹ ಕೇಳಿ ಬಂದಿದೆ.

ಬೆಳಗ್ಗೆ ಮಾತ್ರವಲ್ಲ, ಸಂಜೆಯೂ ಕಚೇರಿ ಹಾಗೂ ಶಾಲೆ ಮುಗಿಯುವ ಸಮಯಕ್ಕೆ ಸರಿಯಾಗಿ ಬಸ್‌ ಓಡಿಸುವಂತೆ ಆಗ್ರಹಿಸುತ್ತಿದ್ದಾರೆ. ಅದಕ್ಕೂ ರಾಜಕಾರಣಿಗಳ ಮೂಲಕ ಒತ್ತಡ ಹಾಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಉನ್ನತ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.2.11 ಲಕ್ಷ ನೌಕರರ ನೋಂದಣಿ ಬಾಕಿ:

ರಾಜ್ಯದಲ್ಲಿ ಒಟ್ಟಾರೆ 4,78,033 ಸರ್ಕಾರಿ ಅಧಿಕಾರಿ, ನೌಕರರಿದ್ದಾರೆ. ಈ ಪೈಕಿ ಜೂನ್‌ 17ರ ವರೆಗೆ ಒಟ್ಟು 2,66,711 ನೌಕರರು ಕರ್ತವ್ಯ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ 2,11,322 ಅಧಿಕಾರಿ ನೌಕರರು ನೋಂದಣಿ ಮಾಡಿಕೊಂಡಿಲ್ಲ. ನೋಂದಣಿ ಮಾಡಿಕೊಂಡವರ ಪೈಕಿ ಕಳೆದ ಬುಧವಾರ 1,78,543 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. 88,168 ನೌಕರರು ಗೈರಾಗಿದ್ದರು.---ಕೋಟ್‌---

ರಾಜ್ಯ ಸರ್ಕಾರ ಉತ್ತಮ ವ್ಯವಸ್ಥೆ ಆರಂಭಿಸಿದ್ದು, ಶುರುವಿನಲ್ಲಿ ಸಣ್ಣ-ಪುಟ್ಟ ಸಮಸ್ಯೆ ಎದುರಾಗಲಿದೆ. ಹೊಸ ಹಾಜರಾತಿ ವ್ಯವಸ್ಥೆಗೆ ಯಾವುದೇ ವಿರೋಧವಿಲ್ಲ. ಜುಲೈ ವೇಳೆಗೆ ಸಂಪೂರ್ಣವಾಗಿ ಎಲ್ಲ ನೌಕರರು ಕರ್ತವ್ಯ ಆ್ಯಪ್‌ ಮೂಲಕವೇ ಹಾಜರಾತಿ ದಾಖಲಿಸಲಿದ್ದಾರೆ.

- ಸಿ.ಎಸ್‌. ಷಡಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ.