ಎನ್‌.ಆರ್‌.ಐ ಕೋಟಾ ರದ್ದುಪಡಿಸಲು ಆಗ್ರಹಿಸಿ ಎಐಡಿಎಸ್‌ಒ ಪ್ರತಿಭಟನೆ

| Published : Sep 11 2025, 12:03 AM IST

ಎನ್‌.ಆರ್‌.ಐ ಕೋಟಾ ರದ್ದುಪಡಿಸಲು ಆಗ್ರಹಿಸಿ ಎಐಡಿಎಸ್‌ಒ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447 ಬೋಧಕ ಹುದ್ದೆಗಳು ಖಾಲಿ ಇರುವ ವೇಳೆ, ಸರ್ಕಾರವು ಈ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಮೂಲಸೌಕರ್ಯ ಸುಧಾರಿಸಲು ಆದ್ಯತೆ ನೀಡಬೇಕು. ಬೋಧಕ ವರ್ಗ ಮತ್ತು ಸೌಲಭ್ಯಗಳನ್ನು ಬಲಪಡಿಸುವುದು ನಿಜವಾದ ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌.ಆರ್‌.ಐ ಕೋಟಾ ರದ್ದುಪಡಿಸಲು ಆಗ್ರಹಿಸಿ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಎಐಡಿಎಸ್‌ಒ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್‌ ಮಾತನಾಡಿ, 2025-26ನೇ ಸಾಲಿನಿಂದ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 15ರಷ್ಟು ಎನ್‌.ಆರ್‌.ಐ ಕೋಟಾವನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರವು ವೈದ್ಯಕೀಯ ಶಿಕ್ಷಣದ ಕನಸು ಹೊತ್ತ ರಾಜ್ಯದ ಬಡ ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿದೆ ಎಂದು ಆರೋಪಿಸಿದರು.

ಈಗಾಗಲೇ ಅಖಿಲ ಭಾರತ ಕೋಟಾದಡಿ ಶೇ.15ರಷ್ಟು ಸೀಟುಗಳನ್ನು ನೀಡಲಾಗುತ್ತಿದೆ. ಇನ್ನೂ ಶೇ.15 ಸೀಟುಗಳು ಎನ್‌.ಆರ್‌.ಐ ಕೋಟಾಗೆ ನೀಡಿದರೆ 200 ವಿದ್ಯಾರ್ಥಿಗಳ ಒಂದು ಬ್ಯಾಚಿನಲ್ಲಿ 140 ಸೀಟುಗಳು ಮಾತ್ರ ರಾಜ್ಯದ ವಿದ್ಯಾರ್ಥಿಗಳಿಗೆ ಉಳಿದಂತಾಗುತ್ತದೆ ಎಂದರು.

ಸರ್ಕಾರಿ ವೈದ್ಯಕೀಯ ಕಾಲೇಜುಗಳು ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸಲು ಸ್ಥಾಪಿಸಲಾಗಿದೆ. ಶ್ರೀಮಂತ ಎನ್‌.ಆರ್‌.ಐ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಡುವ ಮೂಲಕ ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುವ ನೂರಾರು ಶ್ರಮಜೀವಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಪ್ರತಿಭಾವಂತ ವಿದ್ಯಾರ್ಥಿಗಳ ಅವಕಾಶವನ್ನು ಕಡಿತಗೊಳಿಸಿದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ ಮಾತನಾಡಿ, ಕರ್ನಾಟಕ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447 ಬೋಧಕ ಹುದ್ದೆಗಳು ಖಾಲಿ ಇರುವ ವೇಳೆ, ಸರ್ಕಾರವು ಈ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಮೂಲಸೌಕರ್ಯ ಸುಧಾರಿಸಲು ಆದ್ಯತೆ ನೀಡಬೇಕು. ಬೋಧಕ ವರ್ಗ ಮತ್ತು ಸೌಲಭ್ಯಗಳನ್ನು ಬಲಪಡಿಸುವುದು ನಿಜವಾದ ಅಗತ್ಯವಾಗಿದೆ. ಈ ಅಗತ್ಯ ಪೂರೈಸಲು ಸರ್ಕಾರವು ಮುಂದಾಗಬೇಕು ಮತ್ತು ಶೇ. 15ರಷ್ಟು ಎನ್‌.ಆರ್‌.ಐ ಕೋಟಾ ರದ್ದುಗೊಳಿಸುವ ಮೂಲಕ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಚಂದ್ರಕಲಾ, ಪದಾಧಿಕಾರಿಗಳಾದ ಚಂದ್ರಿಕಾ, ದಿಶಾ, ಅಂಜಲಿ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಇದ್ದರು.

14ಕ್ಕೆ ಮೈಸೂರಿನಲ್ಲಿ ಮೊಬೈಲ್ ಫೋಟೋಗ್ರಫಿ ಕಾರ್ಯಾಗಾರ

ಮೈಸೂರು: ಹವ್ಯಾಸಿ ಛಾಯಾಗ್ರಾಹ ಜಿ.ಎಲ್. ತ್ರಿಪುರಾಂತಕ ಅವರು ಸೆ. 14ರ ಭಾನುವಾರ ಮೈಸೂರಿನ ಸದರನ್ ಸ್ಟಾರ್ ಹೋಟೆಲ್ ನಲ್ಲಿ ಒಂದು ದಿನದ ಮೊಬೈಲ್ ಫೋಟೋಗ್ರಫಿ ಹಾಗೂ ವಿಡೀಯೋಗ್ರಫಿ ಕಾರ್ಯಾಗಾರ ಏರ್ಪಡಿಸಿದ್ದಾರೆ. ಇದು ಐದನೇ ಕಾರ್ಯಾಗಾರವಾಗಿದ್ದು, ಇದರೊಂದಿಗೆ ಹಿರಿಯ ಛಾಯಾಗ್ರಾಹಕ ಬಿ.ಎಸ್. ರಾಜಾರಾಂ ಅವರೂ ಕೂಡ ತರಬೇತುದಾರರಾಗಿ ಪಾಲ್ಗೊಳ್ಳುವರು.

ಸಾಧಾರಣ ಮೊಬೈಲ್ ಕ್ಯಾಮೆರಾದಲ್ಲಿಯೇ ಅಸಾಧಾರಣ ಚಿತ್ರ ಹಾಗೂ ವಿಡೀಯೋ ಮಾಡುವುದು ಹಾಗೂ ಮೊಬೈಲ್ ಆಪ್ ಬಳಸಿ ಎಡಿಟಿಂಗ್ ಮಾಡುವ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ಈ ತರಬೇತಿ ಕಾರ್ಯಾಗಾರದಲ್ಲಿ ತಿಳಿಸಿಕೊಡುವರು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಗೂ ವಿಡೀಯೋಗಳನ್ನು ಅಪ್ಲೋಡ್ ಮಾಡುವ ತರಬೇತಿಯನ್ನೂ ನೀಡುವರು. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. 96866 77284 ಸಂಪರ್ಕಿಸಬಹುದು.