ಮಹಾಕುಂಭಮೇಳದಲ್ಲಿ ಭಕ್ತರಿಗೆ ಆಕಾಶಕಾಯ ದರ್ಶನ!

| Published : Feb 25 2025, 12:45 AM IST

ಸಾರಾಂಶ

144 ವರ್ಷಗಳ ಬಳಿಕ ಬಂದ ಮಹಾಕುಂಭಮೇಳಕ್ಕೆ ಹುಬ್ಬಳ್ಳಿಯಿಂದ ತೆರಳಿದ್ದ "ಹಿಮಾಲಯನ್ ಸ್ಪೇಸ್ ಸೆಂಟರ್‌ " ಅಲ್ಲಿನ ಜನನಿಬಿಡ ಪ್ರದೇಶಗಳಲ್ಲಿ ಟೆಲಿಸ್ಕೋಪ್‌ ಮುಖಾಂತರ ಗ್ರಹಗಳು, ಆಕಾಶಕಾಯಗಳ ವೀಕ್ಷಣೆ, ಅವುಗಳ ಮಾಹಿತಿ ನೀಡುವುದರೊಂದಿಗೆ ಖಗೋಳವಿಜ್ಞಾನ ಜಾಗೃತಿ ಮೂಡಿಸಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡ ಭಕ್ತರು ಪುಣ್ಯಸ್ನಾನದೊಂದಿಗೆ ಸೃಷ್ಟಿಯಲ್ಲಿನ ಕೌತುಕ, ಗ್ರಹಗಳ ಚಲನವಲನಗಳ ಕುರಿತು ಮಾಹಿತಿ ಪಡೆದು ಸಂತಸ ಪಟ್ಟರು.

144 ವರ್ಷಗಳ ಬಳಿಕ ಬಂದ ಮಹಾಕುಂಭಮೇಳಕ್ಕೆ ಹುಬ್ಬಳ್ಳಿಯಿಂದ ತೆರಳಿದ್ದ "ಹಿಮಾಲಯನ್ ಸ್ಪೇಸ್ ಸೆಂಟರ್‌ " ಅಲ್ಲಿನ ಜನನಿಬಿಡ ಪ್ರದೇಶಗಳಲ್ಲಿ ಟೆಲಿಸ್ಕೋಪ್‌ ಮುಖಾಂತರ ಗ್ರಹಗಳು, ಆಕಾಶಕಾಯಗಳ ವೀಕ್ಷಣೆ, ಅವುಗಳ ಮಾಹಿತಿ ನೀಡುವುದರೊಂದಿಗೆ ಖಗೋಳವಿಜ್ಞಾನ ಜಾಗೃತಿ ಮೂಡಿಸಿದೆ.

ಕಳೆದ ಫೆ. 17ರಿಂದ ಹುಬ್ಬಳ್ಳಿಯಿಂದ ಪ್ರಯಾಣ ಅರಂಭಿಸಿದ ಈ ತಂಡ ಮಾರ್ಗಮಧ್ಯದ ಜನನಿಭಿಡ ಪ್ರದೇಶಗಳಲ್ಲಿ ಸಂಜೆ 6 ಗಂಟೆಯಿಂದ 8 ಗಂಟೆ ಹಾಗೂ ಬೆಳಗ್ಗೆ 4ರಿಂದ 5.30ರ ವರೆಗೆ ಟೆಲಿಸ್ಕೋಪ್‌ (ದೂರದರ್ಶಕ) ಇರಿಸಿ ಆಕಾಶಕಾಯ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸುತ್ತಿದ್ದರು. ಜತೆಗೆ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು, ಸಾರ್ವಜನಿಕರನ್ನು ನಿಲ್ಲಿಸಿ ಅವರಿಗೆ ಖಗೋಳವಿಜ್ಞಾನದ ಮಾಹಿತಿ ನೀಡಿದರು.

ಆಕಾಶಕಾಯಗಳ ವೀಕ್ಷಣೆ

ಚಂದ್ರ, ಮಂಗಳ, ಗುರು, ಶುಕ್ರಗ್ರಹಗಳು ಸೇರಿದಂತೆ ಹಲವು ನಕ್ಷತ್ರ, ಆಕಾಶಕಾಯಗಳ ವೀಕ್ಷಣೆ ಹಾಗೂ ಅವುಗಳ ಕುರಿತು ಸಂಪೂರ್ಣ ಮಾಹಿತಿ ನೀಡುವ ಕಾರ್ಯ ಮಾಡಲಾಯಿತು. ಕರ್ನಾಟಕ, ಬಿಹಾರ, ಒಡಿಶಾ, ಮಹಾರಾಷ್ಟ್ರ, ಉತ್ತರಪ್ರದೇಶ‌ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪುಟ್ಟ ಪುಟ್ಟಮಕ್ಕಳು, ಯುವಕರು, ವೃದ್ಧರು, ಪೊಲೀಸ್‌ ಅಧಿಕಾರಿಗಳಿಗೆ ಆಗಸದಲ್ಲಿ ನಡೆಯುವ ಕೌತುಕದ ಘಟನೆಗಳು, ಗ್ರಹಗಳ ಚಲನವಲನದ ಮಾಹಿತಿ ನೀಡುವುದರೊಂದಿಗೆ ಜಾಗೃತಿ ಮೂಡಿಸಿದ ತಂಡ ಫೆ. 22ರಂದು ಹುಬ್ಬಳ್ಳಿಗೆ ಮರಳಿತು.

6 ದಿನಗಳ ಪ್ರಯಾಣ

ಸುಮಾರು 6 ದಿನಗಳ ಪ್ರಯಾಣದಲ್ಲಿ ಪ್ರಯಾಗ್‌ರಾಜ್‌, ಅಯೋಧ್ಯೆ, ಕಾಶಿ ಸೇರಿದಂತೆ 10ಕ್ಕೂ ಅಧಿಕ ನಗರಗಳಿಗೆ ಭೇಟಿ ನೀಡಿ ಆಕಾಶಕಾಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು. ಎಲ್ಲರೂ ಸಂತಸದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯದಿಂದಾಗಿ ಮುಂದಿನ ದಿನಗಳಲ್ಲಿ ಇದೇ ರೀತಿ ಜಾಗೃತಿ ಕಾರ್ಯಗಳನ್ನು ಕೈಗೊಳ್ಳಲು ಉತ್ತೇಜನ ದೊರೆತಂತಾಗಿದೆ ಎಂದು ಸೆಂಟರ್‌ನ ಸಹ ಸಂಸ್ಥಾಪಕಿ ಶ್ರೀದೇವಿ ರೂಗಿ ಕನ್ನಡಪ್ರಭಕ್ಕೆ ತಿಳಿಸಿದರು.

ಕೇಂದ್ರದ ಸಹ ಸಂಸ್ಥಾಪಕರಾದ ವೀರೇಶ ಪಾಟೀಲ, ಶ್ರೀದೇವಿ ರೂಗಿ ಹಾಗೂ ಅವರೊಂದಿಗೆ ಎಚ್.ಎಸ್, ರೂಗಿ ಮತ್ತು ವೀರೇಶ ಕುಷ್ಟಗಿ ಈ ಜಾಗೃತಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ಸಂತಸ

ಮಹಾಕುಂಭದೊಂದಿಗೆ ಆಕಾಶಕಾಯಗಳನ್ನು ನೋಡಿ ತುಂಬಾ ಸಂತಸವಾಯಿತು. ಕರ್ನಾಟಕದ ಹಿಮಾಲಯನ್‌ ಸ್ಪೇಸ್‌ ಸೆಂಟರ್‌ ಟೆಲಿಸ್ಕೋಪ್‌ (ದೂರದರ್ಶಕ) ಮೂಲಕ ಆಕಾಶಕಾಯ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಿರುವುದು ಅಭಿನಂದನಾರ್ಹ.

- ರಾಮಕುಮಾರ ಚೌವ್ಹಾಣ, ಅಯೋಧ್ಯಾ ನಗರದ ನಿವಾಸಿ

ಆಕಾಶಕಾಯ ವೀಕ್ಷಣೆ

ನನ್ನ 60 ವರ್ಷಗಳ ಅನುಭವದಲ್ಲಿ ಒಮ್ಮೆಯೂ ಕುಂಭಮೇಳ, ಆಕಾಶಕಾಯ ವೀಕ್ಷಣೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಮಹಾಕುಂಭದಲ್ಲಿ ಪಾಲ್ಗೊಂಡು ಪುಣ್ಯಸ್ನಾನದೊಂದಿಗೆ ಆಕಾಶಕಾಯ ವೀಕ್ಷಣೆ ಮಾಡಿರುವುದು ಸಂತಸ ತಂದಿದೆ.

- ಶೈಲಜಾ, ಮಹಾರಾಷ್ಟ್ರದಿಂದ ಪ್ರಯಾಗರಾಜ್‌ಗೆ ಆಗಮಿಸಿದ್ದ ವೃದ್ಧೆ