ಸಾರಾಂಶ
ವಿಧಾನಸಭೆ : ಬಾಲ್ಯ ವಿವಾಹ, ಬಾಲ ಗರ್ಭಿಣಿ ಪ್ರಕರಣಗಳ ನಿಯಂತ್ರಣ ಹಾಗೂ ಜನ ಜಾಗೃತಿಗಾಗಿ ಆ.15ರಿಂದ ಬೆಳಗಾವಿ ಸೇರಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ‘ಅಕ್ಕ’ ಪಡೆ ಆರಂಭಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಕಲಾಪದ ಅವಧಿಯಲ್ಲಿ, ಹೆಚ್ಚುತ್ತಿರುವ ಬಾಲ ಗರ್ಭಿಣಿ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಜೆಡಿಎಸ್ ಸದಸ್ಯ ಸಿ.ಬಿ.ಸುರೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಬೀದರ್‌ನಲ್ಲಿ ‘ಅಕ್ಕ’ ಪಡೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಇನ್ನು ಆ.15ರಿಂದ ಬೆಳಗಾವಿ, ಮೈಸೂರು ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಆಲೋಚನೆ ಇದೆ ಎಂದರು.
ಮಹಿಳಾ ಪೊಲೀಸ್, ಎನ್‌ಸಿಸಿ ಅಧಿಕಾರಿ, ಸಿಬ್ಬಂದಿ ಒಳಗೊಂಡ ಈ ಪಡೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಗ್ರಾಮ, ಶಾಲೆ, ಕಾಲೇಜುಗಳಿಗೆ ತೆರಳಿ ಬಾಲ್ಯ ವಿವಾಹ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹದಿಹರೆಯದ ಮಕ್ಕಳ ಮೇಲಿನ ಅತ್ಯಾ*ರ, ಪೋಕ್ಸೋ ಕಾಯ್ದೆಯಡಿ ಆಗುವ ಶಿಕ್ಷೆ ಕುರಿತು ಜಾಗೃತಿ ಮೂಡಿಸಲಿವೆ. ಜತೆಗೆ, ಮಹಿಳೆಯರು, ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರು ಯಾವುದೇ ಸಮಸ್ಯೆ ಆದಲ್ಲಿ ತಕ್ಷಣ ಪೊಲೀಸ್ ಸಹಾಯವಾಣಿ 112, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡುವುದು, ಹೆದರದೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವ ಕುರಿತು ತಿಳಿಹೇಳಲಿದೆ. ಯಾವುದೇ ಸಮಯದಲ್ಲಿ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎನ್ನುವ ಧೈರ್ಯವನ್ನು ಈ ಪಡೆ ನೀಡಲಿದೆ ಎಂದು ವಿವರಿಸಿದರು.
1800 ಬಾಲ ಗರ್ಭಿಣಿ ಪ್ರಕರಣಗಳು:
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 1800 ಬಾಲ ಗರ್ಭಿಣಿ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿವೆ. ಬಾಲ್ಯ ವಿವಾಹ, ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆ ಮತ್ತು ಸಮಸ್ಯೆ, ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿರುವ ಪ್ರೇಮ ಪ್ರಕರಣಗಳು, ಸಾಮಾಜಿಕ ಜಾಲತಾಣದ ಅತಿಯಾದ ಬಳಕೆ, ಇತರೆ ಕಾರಣಗಳಿಂದ ಬಾಲ ಗರ್ಭಿಣಿ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಹಲವು ಕಾಯ್ದೆ, ಕಾನೂನುಗಳಿದ್ದರೂ ಸಾಲುತ್ತಿಲ್ಲ. ಹಾಗಾಗಿ ಈ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ, ಅರಿವು ಮೂಡಿಸುವುದು ಅತ್ಯಗತ್ಯ. ಈ ಕಾರ್ಯವನ್ನು ಅಕ್ಕ ಪಡೆ ಮಾಡಲಿದೆ ಎಂದರು.