ರಾಜ್ಯದಲ್ಲಿ 40 ಲಕ್ಷ ಗೃಹಲಕ್ಷ್ಮಿ ಸಂಘ ರಚನೆ: ಲಕ್ಷ್ಮೀ ಹೆಬ್ಬಾಳಕರ್‌

| Published : Jul 06 2025, 01:48 AM IST

ರಾಜ್ಯದಲ್ಲಿ 40 ಲಕ್ಷ ಗೃಹಲಕ್ಷ್ಮಿ ಸಂಘ ರಚನೆ: ಲಕ್ಷ್ಮೀ ಹೆಬ್ಬಾಳಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ 30ರಿಂದ 40 ಲಕ್ಷ ಗೃಹಲಕ್ಷ್ಮಿ ಸಂಘಗಳನ್ನು ರಚಿಸುವ ಯೋಜನೆಯಿದ್ದು, ಈ ಮೂಲಕ ಯಜಮಾನಿ ಮಹಿಳೆಯರಿಗೆ ಆರ್ಥಿಕವಾಗಿ ಬಲ ತುಂಬಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ರಾಜ್ಯದಲ್ಲಿ 30ರಿಂದ 40 ಲಕ್ಷ ಗೃಹಲಕ್ಷ್ಮಿ ಸಂಘಗಳನ್ನು ರಚಿಸುವ ಯೋಜನೆಯಿದ್ದು, ಈ ಮೂಲಕ ಯಜಮಾನಿ ಮಹಿಳೆಯರಿಗೆ ಆರ್ಥಿಕವಾಗಿ ಬಲ ತುಂಬಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಅವರು ಶನಿವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಕಲಬುರಗಿ ವಿಭಾಗ ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2ನೇ ದಿನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈ ವರ್ಷ ಅಂಗನವಾಡಿ ಆರಂಭವಾಗಿ 50 ವರ್ಷ ತುಂಬುತ್ತಿದ್ದು, ಅಕ್ಟೋಬರ್‌ನಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಸಂಘಗಳ ಘೋಷಣೆ ಮಾಡಿ ಇನ್ನಷ್ಟು ಬಲ ತುಂಬಲಾ ಗುವುದು ಎಂದರು.

ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿದ್ದು, ಜನರಿಗೆ ತಿಳಿವಳಿಕೆ ಮೂಡಿಸಲು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ನಮ್ಮ ಇಲಾಖೆ ಜನರಿಗೆ, ಜನರ ಬದುಕಿಗೆ ಹತ್ತಿರವಾದ ಇಲಾಖೆ, ಅಧಿಕಾರಿಗಳು ಹೆಚ್ಚು ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬಾಲ್ಯ ವಿವಾಹವನ್ನು ತಡೆಯಲು ಅಧಿಕಾರಿಗಳು ವಿಶೇಷ ಕ್ರಮಕೈಗೊಳ್ಳಬೇಕು, ಸ್ವತಃ ಕರೆ ಮಾಡಿ ತನ್ನ ವಿವಾಹವನ್ನು ತಪ್ಪಿಸುವಂತೆ ಅಧಿಕಾರಿಗಳನ್ನು ಕೋರಿದ್ದ ಜಿಲ್ಲೆಯ ಬಾಲಕಿಯನ್ನು ಕರೆಸಿ ಸನ್ಮಾನಿಸ ಬೇಕು, ಜೊತೆಗೆ ಆರ್ಥಿಕ ಸಹಾಯ ಮಾಡಬೇಕು. ಇದರಿಂದ ಬೇರೆಯವರಿಗೂ ಕೂಡ ಸಹಾಯವಾಗುತ್ತದೆ ಎಂದ ಸಚಿವರು, ಎಲ್ಲಾ ಇಲಾಖೆಗಳು ಕೈಜೋಡಿಸಿದಾಗ ಅನಿಷ್ಟ ಪದ್ಧತಿಗಳನ್ನು ತಡೆಯಲು ಸಾಧ್ಯ. ಜಾಗೃತಿ ಮೂಡಿಸುವದರ ಜೊತೆಗೆ ಕಠಿಣ ಕ್ರಮದ ಮೂಲಕ ಭಯ ಹುಟ್ಟಿಸಿದರೆ ಅನಿಷ್ಟ ಪದ್ಧತಿ ನಿಲ್ಲಲು ಸಾಧ್ಯ ಎಂದು ತಿಳಿಸಿದರು.

ಕಲಬುರಗಿ ವಿಭಾಗದಲ್ಲಿ 10 ಸಾವಿರ ಕೋಟಿ:

ಈ ಭಾಗಕ್ಕೆ ಗೃಹಲಕ್ಷ್ಮಿ ಯೋಜನೆ ಮೂಲಕ 10 ಸಾವಿರ ಕೋಟಿ ರುಪಾಯಿ ನೀಡಲಾಗಿದೆ. ಯಾರಿಗೂ ಯೋಜನೆ ಕೈ ತಪ್ಪದಂತೆ ಕ್ರಮ ಕೈಗೊಳ್ಳ ಬೇಕು. ಗೃಹ ಲಕ್ಷ್ಮೀ ಹಣದಿಂದ ಮಹಿಳೆಯರು ಸಾಕಷ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ, ಅವುಗಳನ್ನು ಪ್ರಚಾರ ಮಾಡುವುದರಿಂದ ಇತರರಿಗೂ ಲಾಭವಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್‌ ಸಿಇಒ ಗಿರೀಶ ಬಡೊಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಇಲಾಖೆಯ ನಿರ್ದೇಶಕ ರಾಘವೇಂದ್ರ, ಜಂಟಿ ಕಾರ್ಯದರ್ಶಿ ಹಾಗೂ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿಎಚ್‌ ನಿಶ್ಚಲ್‌, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್‌ ಸೂರ್ಯವಂಶಿ ಸೇರಿದಂತೆ ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಅಧಿಕಾರಿ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಭಾಗ್ಯ ಲಕ್ಷ್ಮೀ ಬಾಂಡ್‌ ಹಂಚಲು 25 ಸಾವಿರ ಜನರ ವಿಳಾಸವೇ ಸಿಕ್ತಿಲ್ಲ

ಭಾಗ್ಯ ಲಕ್ಷ್ಮೀ ಬಾಂಡ್‌ ಪಡೆದ ಸುಮಾರು 25 ಸಾವಿರ ಜನರ ವಿಳಾಸವೇ ನಮ್ಮ ಇಲಾಖೆಗೆ ಸಿಗುತ್ತಿಲ್ಲ. ಹೀಗಾಗಿ ಮೆಚ್ಯುರಿಟಿಯಾದ ಎಲ್ಲ ಬಾಲಕಿಯರ ಭಾಗ್ಯಲಕ್ಷ್ಮೀ ಬಾಂಡ್‌ ಎಲ್ಲರೂ ಇಲಾಖೆಯಿಂದ ಪಡೆದು ಅದರ ಲಾಭ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.

ಭಾಗ್ಯ ಲಕ್ಷ್ಮೀ ಬಾಂಡ್‌ ಪಡೆಯಲು ಕನಿಷ್ಟ 8ನೇ ತರಗತಿ ಉತ್ತಿರ್ಣರಾಗುವದು ಅಗತ್ಯವಾಗಿದೆ, ಹೀಗಾಗಿ ಬಹಳಷ್ಟು ಜನ ಶಾಲೆಯಿಂದ ಹೊರಗುಳಿದಿರಬಹುದು ಹೀಗಾಗಿ ಅದನ್ನು ಪಡೆಯಲು ಬರುತ್ತಿಲ್ಲ. ಅಥವಾ ವಿಳಾಸವೇ ಮಾಯವಾಗಿದೆ ಹೀಗಾಗಿ ಅರ್ಹ ಫಲಾನುಭವಿಗಳು ತಮ್ಮ ಬಾಂಡ್‌ಗಳನ್ನು ಪಡೆಯಬೇಕೆಂದು ಸಚಿವೆ ಹೆಬ್ಬಾಳಕರ ಮನವಿ ಮಾಡಿದರು.