ಸಾರಾಂಶ
ವಿಧಾನಪರಿಷತ್ ಕಲಾಪ ವೇಳೆ ಶಾಸಕ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ ಆರೋಪದ ಪ್ರಕರಣ ಸಂಬಂಧ ಘಟನಾ ಸ್ಥಳದ ಮಹಜರ್ ಪ್ರಕ್ರಿಯೆಯನ್ನೇ ನಡೆಸದೆ ತನಿಖೆ ಪೂರ್ಣಗೊಳಿಸಲು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ನಿರ್ಧರಿಸಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ವಿಧಾನಪರಿಷತ್ ಕಲಾಪ ವೇಳೆ ಶಾಸಕ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ ಆರೋಪದ ಪ್ರಕರಣ ಸಂಬಂಧ ಘಟನಾ ಸ್ಥಳದ ಮಹಜರ್ ಪ್ರಕ್ರಿಯೆಯನ್ನೇ ನಡೆಸದೆ ತನಿಖೆ ಪೂರ್ಣಗೊಳಿಸಲು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ನಿರ್ಧರಿಸಿದೆ. ಮೇಲ್ಮನೆ ಸಭಾಪತಿ ಅವರು ಮಹಜರ್‌ಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಐಡಿ ಈ ತೀರ್ಮಾನ ತೆಗೆದುಕೊಂಡಿದೆ.
ತನ್ಮೂಲಕ ಮಹಜರ್ ಸಂಬಂಧ ಶಾಸಕಾಂಗ ಹಾಗೂ ಕಾರ್ಯಾಂಗದ ಮಧ್ಯೆ ಉಂಟಾಗಿದ್ದ ತಿಕ್ಕಾಟಕ್ಕೂ ಶುಭಂ ಹೇಳಿರುವ ಸಿಐಡಿ, ಮಹಜರ್ ನಡೆಯದಿದ್ದರೆ ತನಿಖೆಗೆ ಭಾರಿ ಹಿನ್ನಡೆಯಾಗಲಿದೆ ಎಂಬ ಮಾತುಗಳಿಗೂ ಫುಲ್ ಸ್ಟಾಪ್ ಹಾಕಿದೆ.
ಅಪರಾಧ ಪ್ರಕರಣಗಳಲ್ಲಿ ಮಹಜರ್ ಎಂಬುದು ತನಿಖಾ ಪ್ರಕ್ರಿಯೆಯ ಒಂದು ಭಾಗವೇ ಹೊರತು ಅದೇ ಆರೋಪ ರುಜುವಾತು ಪಡಿಸಲು ಬಹುಮುಖ್ಯವಲ್ಲ. ತನಿಖಾ ಹಂತದಲ್ಲಿ ಸಂಗ್ರಹವಾಗುವ ಸಾಂದರ್ಭಿಕ ಸಾಕ್ಷ್ಯಗಳು, ವೈದ್ಯಕೀಯ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಹಾಗೂ ಸಾಕ್ಷಿದಾರರ ಹೇಳಿಕೆ ಆಧರಿಸಿ ಆರೋಪಪಟ್ಟಿ ಸಲ್ಲಿಸಲು ಅವಕಾಶವಿದೆ. ಹೀಗಾಗಿ ಮಹಜರ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲವೆಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಹೇಳಿವೆ.
ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ವಿಧಾನಪರಿಷತ್‌ನಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಂಸದೀಯ ಪದ ಬಳಸಿ ರವಿ ನಿಂದಿಸಿದ್ದ ಆರೋಪ ಕೇಳಿ ಬಂದಿದೆ. ಈ ಕೃತ್ಯವು ಸದನದೊಳಗೆ ನಡೆದಿರುವ ಕಾರಣ ಪೊಲೀಸ್ ತನಿಖೆ ನಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಸದನದಲ್ಲಿ ನಡೆದಿರುವ ಪ್ರಕರಣವನ್ನು ಬಗ್ಗೆ ನಾನೇ ಬಗೆಹರಿಸುತ್ತೇನೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದರು. ಆದರೆ ಪೊಲೀಸ್ ತನಿಖೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಲವಾಗಿ ಸಮರ್ಥಿಸಿಕೊಂಡಿದ್ದರು.
ಇನ್ನು ಪ್ರಕರಣದ ಸಂಬಂಧ ಕೃತ್ಯ ನಡೆದ ಸ್ಥಳದ ಮಹಜರ್‌ಗೆ ಅನುಮತಿ ನೀಡುವಂತೆ ಸಿಐಡಿ ಮಾಡಿದ್ದ ಮನವಿಯನ್ನು ಸಭಾಪತಿಗಳು ತಳ್ಳಿ ಹಾಕಿದ್ದರು. ಹೀಗಾಗಿ ಮಹಜರ್ ವಿಚಾರವಾಗಿ ಸಿಐಡಿ ಮತ್ತು ಸಭಾಪತಿಗಳ ನಡುವೆ ಕಾನೂನು ಸಂಘರ್ಷ ಆರಂಭವಾಗಿದೆ ಎನ್ನಲಾಗಿತ್ತು. ಈ ಬೆಳವಣಿಗೆ ಕುರಿತು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿರುವ ಹೊತ್ತಿನಲ್ಲೇ ಮಹಜರ್‌ಗೆ ಪ್ರಕ್ರಿಯೆಯನ್ನೇ ಕೈ ಬಿಟ್ಟು ಸಿ.ಟಿ.ರವಿ ವಿರುದ್ಧದ ತನಿಖೆಯನ್ನು ನಡೆಸಲು ಸಿಐಡಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಧ್ವನಿ ಪರೀಕ್ಷೆ ಸಾಕು-ಸಿಐಡಿ :
ಕೊಲೆ, ಸುಲಿಗೆ, ನಿಂದನೆ ಹಾಗೂ ಹಲ್ಲೆಯಂತಹ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಘಟನಾ ಸ್ಥಳದ ಸ್ಪಷ್ಟತೆಗೆ ಆರೋಪಿ ಸಕ್ಷಮದಲ್ಲಿ ಮಹಜರ್ ನಡೆಸಲಾಗುತ್ತದೆ. ಇದು ತನಿಖೆಯ ಒಂದು ಭಾಗವೇ ಹೊರತು ಅದೇ ತನಿಖೆಯ ಮೂಲ ತಳಹದಿಯಲ್ಲ. ಹೀಗಾಗಿ ಮಹಜರ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಅವಕಾಶ ಇಲ್ಲ. ಸಮುದ್ರದಲ್ಲಿ ಮೃತಪಟ್ಟರೆ ತನಿಖಾಧಿಕಾರಿ ಸಮುದ್ರದೊಳಗೆ ಇಳಿದು ಮಹಜರ್ ನಡೆಸಲು ಸಾಧ್ಯವಿಲ್ಲ. ಅಂಥ ಪ್ರಕರಣಗಳಲ್ಲಿ ಈ ಸ್ಥಳದಲ್ಲಿ ಕೃತ್ಯ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿ ತನಿಖೆ ಪೂರ್ಣಗೊಳಿಸಲಾಗುತ್ತದೆ. ಈ ನಿಲುವು ವಿಧಾನಪರಿಷತ್ ಸದನದಲ್ಲಿ ಸಚಿವರಿಗೆ ರವಿ ಅಶ್ಲೀಲವಾಗಿ ನಿಂದಿಸಿರುವ ಪ್ರಕರಣದಲ್ಲಿ ಕೂಡ ಅನ್ವಯವಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸದನದೊಳಗೆ ಮಹಜರ್‌ಗೆ ಅನುಮತಿ ನೀಡಲು ಸಭಾಪತಿಗಳು ನಿರಾಕರಿಸಿದ್ದಾರೆ. ನಿಂದನೆ ಆರೋಪಕ್ಕೆ ಅಸಲಿ ವಿಡಿಯೋ ಲಭ್ಯವಾಗಿದೆ. ಹೀಗಾಗಿ ನಿಂದಿಸಿರುವುದು ಸತ್ಯವೋ ಸುಳ್ಳೋ ಎಂಬುದಕ್ಕೆ ರವಿ ಅವರ ಧ್ವನಿ ಪರೀಕ್ಷೆ ಅಗತ್ಯವಾಗಿದ್ದು, ಈ ಪರೀಕ್ಷೆಗೆ ಅವರು ಸಮ್ಮತಿಸಿದರೆ ಸಾಕು. ಮಹಜರ್ ನಡೆದರೂ ನಡೆಯದಿದ್ದರೂ ತನಿಖೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಸಿ.ಟಿ. ರವಿ, ಹೆಬ್ಬಾಳ್ಕರ್ ಕೇಸ್ ಪರಿಣಾಮ: ಸಭಾಪತಿ ಹೊರಟ್ಟಿ ಬದಲಿಗೆ ಕಾಂಗ್ರೆಸ್ ಪ್ಲ್ಯಾನ್!
ನಿಂದಿಸಿಲ್ಲ ಎಂದಾದರೆ ಧ್ವನಿ ಪರೀಕ್ಷೆಗೆ ಹಿಂದೇಟು ಯಾಕೆ?
ಸಚಿವರಿಗೆ ನಿಂದಿಸಿದ ಪ್ರಕರಣದಲ್ಲಿ ಅಧಿಕೃತವಾಗಿ ಹೇಳಿಕೆ ದಾಖಲಿಸಲು ರವಿ ನಿರಾಕರಿಸಿದ್ದಾರೆ. ತಾವು ನಿಂದಿಸಿಲ್ಲವೆಂದಾದರೆ ಧ್ವನಿ ಪರೀಕ್ಷೆಗೆ ಅವರು ಹಿಂದೇಟು ಹಾಕುವ ಅವಶಕ್ಯತೆ ಇಲ್ಲ ಎಂಬುದು ಸರ್ಕಾರದ ವಾದವಾಗಿದೆ.
ನ್ಯಾಯಾಲಯಕ್ಕೆ ಸಭಾಪತಿ ಕುರಿತು ಸಿಐಡಿಯಿಂದ ಮಾಹಿತಿ
ಈ ಪ್ರಕರಣದಲ್ಲಿ ಮಹಜರ್ ನಡೆಸಲು ಸಭಾಪತಿಗಳು ನಿರಾಕರಿಸಿರುವ ಕುರಿತು ನ್ಯಾಯಾಲಯಕ್ಕೆ ಸಹ ಮಾಹಿತಿ ನೀಡಲು ಸಿಐಡಿ ಮುಂದಾಗಿದೆ. ಆರೋಪ ಪಟ್ಟಿ ಸಲ್ಲಿಸುವ ಮುನ್ನ ಅಥವಾ ಆರೋಪ ಪಟ್ಟಿಯಲ್ಲಿ ಮಹಜರ್ ವಿಚಾರವಾಗಿ ಸಭಾಪತಿಗಳ ನಡೆ ಬಗ್ಗೆ ನ್ಯಾಯಾಲಯಕ್ಕೆ ಸಿಐಡಿ ಮಾಹಿತಿ ನೀಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.