ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ವಿಜಯೇಂದ್ರ ವಿರುದ್ಧ ಬಂಡೆದ್ದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪರ್ಧೆ?

| Published : Jan 18 2025, 01:46 AM IST / Updated: Jan 18 2025, 04:22 AM IST

Basanagouda patil yatnal

ಸಾರಾಂಶ

ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ಧ ಬಂಡೆದ್ದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ನಾಯಕರು ನೇರ ಟಕ್ಕರ್ ನೀಡಲು ಸಜ್ಜಾಗುತ್ತಿದ್ದು, ಮುಂಬರುವ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣೆಗೆ ಯತ್ನಾಳರನ್ನೇ ಅಭ್ಯರ್ಥಿಯಾಗಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

 ವಿಜಯ್‌ ಮಲಗಿಹಾಳ

 ಬೆಂಗಳೂರು : ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ಧ ಬಂಡೆದ್ದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ನಾಯಕರು ನೇರ ಟಕ್ಕರ್ ನೀಡಲು ಸಜ್ಜಾಗುತ್ತಿದ್ದು, ಮುಂಬರುವ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣೆಗೆ ಯತ್ನಾಳರನ್ನೇ ಅಭ್ಯರ್ಥಿಯಾಗಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಈ ಬಗ್ಗೆ ಯತ್ನಾಳ ಬಣದಲ್ಲಿ ಬಿರುಸಿನ ಚಟುವಟಿಕೆ ನಡೆದಿದ್ದು, ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರ ಮುಂದಿನ ಹಾದಿ ಸುಗಮವಾಗಿರಬಾರದು ಎಂಬ ನಿಲುವಿಗೆ ಬಣದ ನಾಯಕರು ಬಂದಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣೆ ಎಂದರೆ ಇತರ ಸಾಮಾನ್ಯ ಚುನಾವಣೆಗಳಂತೆ ಅಲ್ಲದಿದ್ದರೂ ಒಂದು ಹಂತದ ಭರಾಟೆ ಇದ್ದೇ ಇರುತ್ತದೆ. ಪರೋಕ್ಷವಾಗಿ ಮತದಾನದಂತೆ ಪ್ರಕ್ರಿಯೆ ನಡೆಯುತ್ತದೆ. ಒಬ್ಬರಿಗಿಂತ ಹೆಚ್ಚು ಮಂದಿ ಪ್ರಬಲ ಆಕಾಂಕ್ಷೆ ವ್ಯಕ್ತಪಡಿಸಿದಲ್ಲಿ ಅಥವಾ ಪ್ರತಿಸ್ಪರ್ಧಿಗಳಿದ್ದಲ್ಲಿ ಆಗ ರಾಜ್ಯ ಪದಾಧಿಕಾರಿಗಳು, ರಾಜ್ಯ ಪರಿಷತ್ ಸದಸ್ಯರು ಹಾಗೂ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಬೇಕಾಗುತ್ತದೆ.

ಹಿಂದೆ ಅನಂತ ಕುಮಾರ್, ಕೆ.ಎಸ್‌.ಈಶ್ವರಪ್ಪ, ಬಸವರಾಜ ಪಾಟೀಲ್ ಸೇಡಂ ಅವರು ರಾಜ್ಯಾಧ್ಯಕ್ಷರಾಗುವ ವೇಳೆ ಒಬ್ಬರಿಗಿಂತ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದರು. ಅನಂತ ಕುಮಾರ್ ಅವರಿಗೆ ಯಡಿಯೂರಪ್ಪ, ಈಶ್ವರಪ್ಪ ಅವರಿಗೆ ರಾಮಚಂದ್ರಗೌಡರು, ಸೇಡಂ ಅವರಿಗೆ ಡಾ.ಎಂ.ಆರ್.ತಂಗಾ ಅವರು ಪ್ರತಿಸ್ಪರ್ಧಿಗಳಾಗಿದ್ದರು. ಆಗ ಪಕ್ಷದ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರದ ನಾಯಕರು ರಾಜ್ಯ ಘಟಕದ ಅಭಿಪ್ರಾಯ ಸಂಗ್ರಹ ಮಾಡಿ ತೀರ್ಮಾನ ಮಾಡಿದ್ದರು.

ಈಗಲೂ ಅದೇ ರೀತಿ ಅಭಿಪ್ರಾಯ ಸಂಗ್ರಹವಾಗಲಿ ಎಂಬ ಉದ್ದೇಶವನ್ನು ಯತ್ನಾಳ ಬಣದ ನಾಯಕರು ಹೊಂದಿದ್ದು, ವಿಜಯೇಂದ್ರ ಅವರಿಗೆ ಪ್ರತಿಸ್ಪರ್ಧಿಯಾಗಿ ಯತ್ನಾಳರ ಹೆಸರನ್ನು ಸೂಚಿಸಲು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ರಾಜ್ಯ ಬಿಜೆಪಿ ಚುನಾವಣೆಗೆ ಈಗಾಗಲೇ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ರಾಜ್ಯದಲ್ಲಿ ಈಗ ಸಂಘಟನಾ ಪರ್ವ ನಡೆದಿದ್ದು, ಕೆಳಹಂತದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ರಾಜ್ಯಾಧ್ಯಕ್ಷ ಹುದ್ದೆಯ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಬಹುತೇಕ ಬರುವ ಫೆಬ್ರವರಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣಾ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.

ರಾಜ್ಯಾಧ್ಯಕ್ಷ ಹುದ್ದೆಗೆ ಈ ಬಾರಿ ಚುನಾವಣೆ ನಡೆಯಲಿದೆ ಎಂದು ಕೆಲದಿನಗಳ ಹಿಂದೆಯಷ್ಟೇ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.