ಬಾಯ್ಮುಚ್ಚಿಕೊಂಡು ಇದ್ದರೆ ಸರಿ, ಇಲ್ಲದಿದ್ದರೆ ಹೈಕಮಾಂಡ್‌ ಶಕ್ತಿ ತೋರಿಸ್ಬೇಕಾಗುತ್ತೆ: ಖರ್ಗೆ

| Published : Jan 18 2025, 01:46 AM IST / Updated: Jan 18 2025, 04:20 AM IST

ಸಾರಾಂಶ

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳಿಂದ ಕೆಂಡಾಮಂಡಲಗೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನಿರಿ. ಮೊದಲು ನಿಮಗೆ ವಹಿಸಿರುವ ಕೆಲಸ ಸರಿಯಾಗಿ ಮಾಡಿ’ ಎಂದು ಖಡಕ್‌ ಸೂಚನೆ ನೀಡಿದ್ದಾರೆ.

  ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳಿಂದ ಕೆಂಡಾಮಂಡಲಗೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನಿರಿ. ಮೊದಲು ನಿಮಗೆ ವಹಿಸಿರುವ ಕೆಲಸ ಸರಿಯಾಗಿ ಮಾಡಿ’ ಎಂದು ಖಡಕ್‌ ಸೂಚನೆ ನೀಡಿದ್ದಾರೆ.

ಜತೆಗೆ, ‘ಹೈಕಮಾಂಡ್‌ ಸೂಚನೆ ಮೀರಿ ಮಾತನಾಡಿದರೆ ಹೈಕಮಾಂಡ್‌ ದುರ್ಬಲ ಅಲ್ಲ ಎಂಬುದನ್ನು ತೋರಿಸಬೇಕಾಗುತ್ತದೆ. ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಪಕ್ಷ ಕಾಂಗ್ರೆಸ್‌. ಯಾರೋ ಒಬ್ಬರು ಇಬ್ಬರನ್ನು ಅವಲಂಬಿಸಿ ಪಕ್ಷ ಕಟ್ಟಿಲ್ಲ’ ಎಂದೂ ಎಚ್ಚರಿಸಿದ್ದಾರೆ.

ಶುಕ್ರವಾರ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿ ವಿವಿಧ ವಿಚಾರಗಳ ಕುರಿತು ಬಹಿರಂಗ ಹೇಳಿಕೆ ನೀಡುತ್ತಿರುವ ನಾಯಕರ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ನಾಯಕರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಬ್ಬರಿಗೊಬ್ಬರು ಹೇಳಿಕೆಗಳನ್ನು ಕೊಟ್ಟು ಹೈಕಮಾಂಡ್‌ ಸುಮ್ಮನೆ ಕುಳಿತಿದೆ ಎಂದು ದೂರುತ್ತಿದ್ದಾರೆ. ನೀವು ಯಾರಾದರೂ ಒಂದು ಹೇಳಿಕೆ ನೀಡಿದರೆ ಅದಕ್ಕೆ ಹೈಕಮಾಂಡ್‌ ಸ್ಪಷ್ಟನೆ ನೀಡಬೇಕಾ? ನೀವೇ ಹೇಳಿಕೆ ನೀಡಿ ನೀವೇ ಗೊಂದಲ ಸೃಷ್ಟಿಸುತ್ತಿದ್ದೀರಿ. ಮತ್ತೆ ಹೈಕಮಾಂಡ್‌ ಸ್ಪಷ್ಟನೆ ನೀಡಬೇಕು ಎಂದು ಹೇಳುತ್ತೀರಿ. ನೀವು ಮಾತನಾಡಿರುವುದಕ್ಕೆಲ್ಲ ನಾವು ಸ್ಪಷ್ಟನೆ ಕೊಡಲು ಸಾಧ್ಯವೇ? ನೂರು ಜನ ನೂರು ರೀತಿ ಮಾತನಾಡಿದರೆ ಹೈಕಮಾಂಡ್‌ ಪ್ರತಿಕ್ರಿಯಿಸಬೇಕೇ? ಎಂದು ಸಚಿವರು ಹಾಗೂ ನಾಯಕರ ವಿರುದ್ಧ ಕಿಡಿಕಾರಿದರು.

ಸೂಕ್ತಕಾಲದಲ್ಲಿ ಸೂಕ್ತ ನಿರ್ಧಾರ:

ಪ್ರಮುಖ ನಿರ್ಧಾರ ಮಾಡಲು ಹೈಕಮಾಂಡ್‌ ಇದೆ. ಸುಮ್ಮನೆ ಬದಲಾವಣೆ ಬದಲಾವಣೆ ಎನ್ನುತ್ತಿದ್ದರೆ ಹೇಗೆ? ಯಾವುದೇ ನಿರ್ಧಾರ ತೆಗೆದುಕೊಳ್ಳಲು ನಾನು, ರಾಹುಲ್‌ಗಾಂಧಿ, ಸೋನಿಯಾಗಾಂಧಿ ಇದ್ದೇವೆ. ನಾವೆಲ್ಲ ಕೂತು ಸೂಕ್ತ ಕಾಲದಲ್ಲಿ ಅಗತ್ಯ ನಿರ್ಧಾರ ಮಾಡುತ್ತೇವೆ. ಅಲ್ಲಿಯವರೆಗೆ ಅನಗತ್ಯ ಹೇಳಿಕೆಗಳನ್ನು ನಿಲ್ಲಿಸಿ ಬಾಯ್ಮುಚ್ಚಿಕೊಂಡು ನಿಮ್ಮ ಕೆಲಸ ನೀವು ಮಾಡಿ. ಯಾವುದೇ ಶಾಸಕರು, ಸಚಿವರು, ಸಂಸದರು ಬದಲಾವಣೆ ಬಗ್ಗೆ ಮಾತನಾಡಬೇಡಿ ಎಂದು ತಾಕೀತು ಮಾಡಿದರು.

ಪಕ್ಷ, ಸರ್ಕಾರ ದುರ್ಬಲ ಮಾಡಬೇಡಿ:

ಸ್ಥಿರ ಸರ್ಕಾರವನ್ನು ಇನ್ನೂ ಗಟ್ಟಿ ಮಾಡಬೇಕೇ ಹೊರತು ಅಲುಗಾಡಿಸುವ ಪ್ರಯತ್ನ ಮಾಡಬಾರದು. ಉತ್ತಮವಾಗಿರುವ ಸಂಘಟನೆಯನ್ನು ದುರ್ಬಲಗೊಳಿಸುವ ಕೆಲಸಕ್ಕೆ ಕೈ ಹಾಕಬಾರದು. ಈಗ ಅನಗತ್ಯ ಹೇಳಿಕೆಗಳನ್ನು ನೀಡಿ ಗೊಂದಲ ಉಂಟು ಮಾಡಲಾಗುತ್ತಿದೆ. ನೇಮಕವೇ ಆಗಿರಲಿ, ಬದಲಾವಣೆಯೇ ಆಗಿರಲಿ ಎಲ್ಲಿಯವರೆಗೆ ಹೈಕಮಾಂಡ್‌ ತೀರ್ಮಾನ ಮಾಡುತ್ತದೆಯೋ ಅಲ್ಲಿಯವರೆಗೆ ಯಾರೂ ಹೇಳಿಕೆ ಕೊಡುವ ಅಗತ್ಯವಿಲ್ಲ. ಏನು ಮಾಡಬೇಕು? ಯಾವಾಗ ಮಾಡಬೇಕು ಎಂಬುದು ಹೈಕಮಾಂಡ್‌ಗೆ ತಿಳಿದಿದೆ. ಹೈಕಮಾಂಡ್‌ ತನ್ನ ಕೆಲಸ ಮಾಡುತ್ತದೆ. ಬದಲಾವಣೆ ಮಾಡಲೇಬಾರದು ಎಂದು ನಿರ್ಧರಿಸಿದರೆ ಮಾಡುವುದೇ ಇಲ್ಲ. ಅದೆಲ್ಲ ಹೈಕಮಾಂಡ್‌ಗೆ ಬಿಟ್ಟದ್ದು ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳನ್ನು ಬೇರೆ ರಾಜ್ಯಗಳಲ್ಲಿ ಎಲ್ಲಾ ಪಕ್ಷಗಳು ಅನುಕರಿಸಲು ಹೊರಟಿವೆ. ರಾಜ್ಯ ಹಾಗೂ ದೇಶದಲ್ಲಿ ಗ್ಯಾರಂಟಿ ಕಾರ್ಯಕ್ರಮಗಳಿಂದ ಸರ್ಕಾರಕ್ಕೆ ಉತ್ತಮ ಹೆಸರು ಬಂದಿದೆ. ಆ ಬಗ್ಗೆ ಪ್ರಚಾರ ಮಾಡಿ ಇನ್ನೂ ಹೆಚ್ಚು ಕೆಲಸ ಮಾಡಬೇಕೇ ಹೊರತು ಅನಗತ್ಯ ವಿಚಾರಗಳ ಬಗ್ಗೆ ಹೇಳಿಕೆ ನೀಡಿ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಬಾರದು. ಮೊದಲು ಬಾಯ್ಮುಚ್ಚಿಕೊಂಡು ಕೊಟ್ಟ ಕೆಲಸ ಮಾಡಿ ಪಕ್ಷ ಹಾಗೂ ಜನರಿಗೆ ಬಲ ತುಂಬುವ ಕೆಲಸ ಮಾಡಿ ಎಂದು ಹೇಳಿದರು.

ನಿಮ್ಮ ಈ ಸೂಚನೆಯನ್ನು ನಾಯಕರು ಮೀರಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, ಯಾರೂ ಅನಗತ್ಯವಾಗಿ ಮಾತನಾಡಬಾರದು ಎಂದು ಹೇಳಿದ್ದೇನೆ. ನಮ್ಮ ಸೂಚನೆ ಮೀರಿ ಮಾತನಾಡಿದರೆ ಹೈಕಮಾಂಡ್‌ ದುರ್ಬಲವಿಲ್ಲ ಎಂಬುದನ್ನು ತೋರಿಸಬೇಕಾಗುತ್ತದೆ. ಯಾಕೆಂದರೆ ಇದು ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಪಕ್ಷ. ಯಾರೋ ಒಬ್ಬರು, ಇಬ್ಬರನ್ನು ಅವಲಂಬಿಸಿ ಪಕ್ಷ ಕಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

- ನಿರ್ಧಾರ ಕೈಗೊಳ್ಳಲು ನಾವಿದ್ದೇವೆ । ಯಾವಾಗ, ಏನು ಮಾಡಬೇಕು ಅಂತ ನಮಗೆ ಗೊತ್ತಿದೆ- ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ ಮುಖಂಡರಿಗೆ ಎಐಸಿಸಿ ಅಧ್ಯಕ್ಷ ಖಡಕ್‌ ಎಚ್ಚರಿಕೆ

ಹೇಳಿಕೆಗಳನ್ನು ನಿಲ್ಲಿಸಿಸ್ಥಿರ ಸರ್ಕಾರವನ್ನು ಇನ್ನೂ ಗಟ್ಟಿ ಮಾಡಬೇಕೇ ಹೊರತು ಅಲುಗಾಡಿಸುವ ಪ್ರಯತ್ನ ಮಾಡಬಾರದು. ಉತ್ತಮವಾಗಿರುವ ಸಂಘಟನೆಯನ್ನು ದುರ್ಬಲಗೊಳಿಸುವ ಕೆಲಸಕ್ಕೆ ಕೈ ಹಾಕಬಾರದು. ಈಗ ಅನಗತ್ಯ ಹೇಳಿಕೆಗಳನ್ನು ನೀಡಿ ಗೊಂದಲ ಉಂಟು ಮಾಡಲಾಗುತ್ತಿದೆ. ನೇಮಕವೇ ಆಗಿರಲಿ, ಬದಲಾವಣೆಯೇ ಆಗಿರಲಿ ಎಲ್ಲಿಯವರೆಗೆ ಹೈಕಮಾಂಡ್‌ ತೀರ್ಮಾನ ಮಾಡುತ್ತದೆಯೋ ಅಲ್ಲಿಯವರೆಗೆ ಯಾರೂ ಹೇಳಿಕೆ ಕೊಡುವ ಅಗತ್ಯವಿಲ್ಲ.

- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ