ಸಾರಾಂಶ
ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ನೀಡಿರುವ ಜಾಮೀನು ಮುಂದುವರೆಸಬೇಕೋ ಅಥವಾ ರದ್ದುಪಡಿಬೇಕೋ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಲಿದೆ.
ದರ್ಶನ್ ಮತ್ತು ಪ್ರಕರಣದ ಇತರೆ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಡಿ.13ರಂದು ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಈ ಅರ್ಜಿಯನ್ನು ಜು.24ರಂದು ವಿಚಾರಣೆ ನಡೆಸಿದ ನ್ಯಾ। ಜೆ.ಬಿ. ಪರ್ದಿವಾಲಾ ಮತ್ತು ನ್ಯಾ। ಆರ್. ಮಹಾದೇವನ್ ಅವರ ಪೀಠ, ತೀರ್ಪು ಕಾಯ್ದಿರಿಸಿತ್ತು.
ಜಾಮೀನಿಗೆ ಸುಪ್ರೀಂ ಗರಂ:
ಜಾಮೀನು ರದ್ದತಿ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನು ಚಿಂತಿಸುವಂತೆ ಮಾಡಿದೆ. 7 ಆರೋಪಿಗಳ ಜಾಮೀನು ನಿರ್ಧರಿಸುವಾಗ ಹೈಕೋರ್ಟ್ ಖುಲಾಸೆಗೊಳಿಸುವಂತೆ ಆದೇಶ ಹೊರಡಿಸಿದೆ. ಪ್ರತಿಯೊಂದು ಜಾಮೀನು ಕೊಡುವಾಗ ಹೈಕೋರ್ಟ್ ಇಂಥ ಆದೇಶವನ್ನೇ ನೀಡುತ್ತದೆಯೇ? ಎಂದು ಪ್ರಶ್ನಿಸಿತ್ತು.
ಜೊತೆಗೆ ವಿವೇಚನಾಧಿಕಾರವನ್ನು ಹೈಕೋರ್ಟ್ ತಪ್ಪಾಗಿ ಪ್ರಯೋಗಿಸಿದೆ. ಹೈಕೋರ್ಟ್ ನಿಜಕ್ಕೂ ತನ್ನ ಬುದ್ಧಿಯನ್ನು ಬಳಸಿದೆಯೇ? ಎಂದು ಅಸಮಾಧಾನ ಹೊರಹಾಕಿತ್ತು. ಹೈಕೋರ್ಟ್ ರೀತಿ ನಾವು ಮತ್ತದೇ ತಪ್ಪು ಮಾಡುವುದಿಲ್ಲ. ದೋಷಿ ಅಥವಾ ನಿರ್ದೋಷಿ ಎಂಬುದನ್ನು ನಾವು ನಿರ್ಧರಿಸುವುದಿಲ್ಲ. ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಇಂತಹ ತಪ್ಪು ಮಾಡಬಹುದು. ಆದರೆ ಹೈಕೋರ್ಟ್ ಜಡ್ಜ್ ಅಂತಹ ತಪ್ಪು ಮಾಡುತ್ತಾರೆಂದರೆ ಹೇಗೆ? ಎಂದು ಹೇಳಿತ್ತು.