ರಟ್ಟೀಹಳ್ಳಿ:ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಇತ್ತೀಚೆಗೆ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಅಖಿಲ ಔಷಧಿ ಭಾರತ ವ್ಯಾಪಾರಿಗಳ ಸಂಘದ ತಾಲೂಕಾಧ್ಯಕ್ಷ ರಮೇಶ ಭೀಮಪ್ಪನವರ ಮಾತನಾಡಿ, ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಔಷಧ ವ್ಯಾಪಾರ ವಹಿವಾಟಿಗೆ ಕೇಂದ್ರ ಸರಕಾರ ಅವಕಾಶ ನೀಡಿತ್ತು. ಅದನ್ನು ಹಾಗೆ ಮುಂದುವರೆಸಿದ ಪರಿಣಾಮ ಔಷಧ ಮಳಿಗೆಗಳಿಗೆ ಸಾಕಷ್ಟು ನಷ್ಟವಾಗುವುದಲ್ಲದೇ ಅಲ್ಲಿ ಎಲ್ಲ ರೀತಿಯ ನಿರ್ಬಂಧಿತ ಔಷಧಿಗಳು ಮಾರಾಟವಾಗುತ್ತಿರುವುದರಿಂದ ಸಮಾಜದಲ್ಲಿ ದುಷ್ಪರಿಣಾಮಗಳು ಎದುರಾಗುತ್ತಿದ್ದರೂ ಕಡಿವಾಣ ಹಾಕದೇ ಕೇವಲ ಔಷಧ ಮಳಿಗೆಗಳಿಗೆ ಎಲ್ಲಿಲ್ಲದ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.ಕಾರ್ಪೋರೇಟ್ ಕಂಪನಿಗಳಿಂದ ನಡೆಯುತ್ತಿರುವ ಡಿಸ್ಕೌಂಟ್‌ನಿಂದಾಗಿ ಮಳಿಗೆ ವ್ಯಾಪಾರಸ್ಥರಿಗೆ ಹೊರೆಯಾಗುತ್ತಿದ್ದು ತಕ್ಷಣ ನಿರ್ಬಂಧ ಹೇರಿ ದೇಶದಲ್ಲಿ ಆರೋಗ್ಯಕರ ವ್ಯಾಪಾರಕ್ಕೆ ಅನುವು ಮಾಡಿಕೋಡಬೇಕು, ನಕಲಿ ಹಾಗೂ ಆರೋಗ್ಯಕ್ಕೆ ಹಾನಿಕಾರಕ ಉಂಟು ಮಾಡುವ ಔಷಧಿಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು, ಆದೇಶ ಜಿ.ಎಸ್.ಆರ್ 220, 20/3/2022ನ್ನು ವಾಪಸ್ ಪಡೆದು ಸರಳ ಕಾನೂನು ಅಳವಡಿಸಬೇಕು ಎಂದು ಮನವಿ ಮಾಡಿದರು. ನಮ್ಮ ನ್ಯಾಯ ಸಮ್ಮತ ಬೇಡಿಕೆಗಳನ್ನು ಕೇಂದ್ರ ಸರಕಾರ ಆದಷ್ಟು ಬೇಗ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಉಮೇಶ ಭೀಮಪ್ಪನವರ, ಸಂಜೀವ್ ಪಾಲಂಕರ್, ಶರಣಪ್ಪ ಮಠದ, ವಿನಾಯಕ ನೇಶ್ವಿ, ನಾಸೀರ ಖಾಜಿ, ಬಸನಗೌಡ ಪಾಟೀಲ್, ಕರೆಗೌಡ ಪಾಟೀಲ್, ನಾಗರಾಜ ಹಿರೇಮಠ, ಮನೋಜ್ ಇದ್ದರು.