ಅಖಿಲ ಭಾರತ ಪುರೋಹಿತ ಕಾರ್ಮಿಕರ ಫೆಡರೇಶನ್ ಕೊಡಗು ಶಾಖೆ ಉದ್ಘಾಟನೆ

| Published : Jan 01 2025, 12:02 AM IST

ಸಾರಾಂಶ

ಸೋಮವಾರಪೇಟೆಯ ಸೋಮೇಶ್ವರ ದೇವಾಲಯದ ಸಭಾಂಗಣದಲ್ಲಿ ಅಖಿಲ ಭಾರತ ಪುರೋಹಿತ ಕಾರ್ಮಿಕರ ಫೆಡರೇಶನ್ ನ ಕೊಡಗು ಜಿಲ್ಲಾ ಶಾಖೆ ಉದ್ಘಾಟನೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಎಲ್ಲಾ ಸಮುದಾಯಗಳ ಕಷ್ಟ ಸುಖಗಳಲ್ಲೂ ಕಾಳಜಿಯಿಂದ ಸ್ಪಂದಿಸುವ ಪುರೋಹಿತರು ಅತ್ಯಂತ ಸಂಕಷ್ಟದಲ್ಲಿ ತಮ್ಮ ಬದುಕು ಸಾಗಿಸುತ್ತಿದ್ದಾರೆ ಎಂದು ಅಖಿಲ ಭಾರತ ಪುರೋಹಿತ ಕಾರ್ಮಿಕರ ಫೆಡರೇಶನ್ ರಾಜ್ಯ ಘಟಕದ ಅಧ್ಯಕ್ಷ ಡಾ.ಜೆ.ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.

ಸೋಮವಾರಪೇಟೆಯ ಸೋಮೇಶ್ವರ ದೇವಾಲಯದ ಸಭಾಂಗಣದಲ್ಲಿ ಅಖಿಲ ಭಾರತ ಪುರೋಹಿತ ಕಾರ್ಮಿಕರ ಫೆಡರೇಶನ್ ನ ಕೊಡಗು ಜಿಲ್ಲಾ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧ ದೇವಾಲಯಗಳಲ್ಲಿ ದುಡಿಯುತ್ತಿರುವ ಪುರೋಹಿತರಿಗೆ ಉದ್ಯೋಗ ಭದ್ರತೆಯಾಗಲಿ, ಆರೋಗ್ಯ ವಿಮಾ ಸೌಲಭ್ಯವಾಗಲಿ, ಭವಿಷ್ಯನಿಧಿ ಯೋಜನೆಯಾಗಲಿ ಯಾವುದೂ ಇಲ್ಲದೆ ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಎಲ್ಲಾ ಅಸಹಾಯಕ ಪರಿಸ್ಥಿತಿಯಿಂದ ಪುರೋಹಿತ ಕಾರ್ಮಿಕರನ್ನು ವಿಮುಕ್ತಿಗೊಳಿಸುವ ಉದ್ದೇಶದಿಂದ ಸಂಘಟನೆಯ ಆರಂಭಕ್ಕೆ ನಾಂದಿ ಹಾಡಲಾಗಿದೆ. ಆರಂಭಿಕವಾಗಿ 35ಕ್ಕೂ ಅಧಿಕ ಅರ್ಚಕ ವರ್ಗದವರು ಸದಸ್ಯರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲೇ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜಿಲ್ಲಾ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಸಮಿತಿ ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದರು.

ರಾಷ್ಟ್ರೀಯ ಘಟಕದ ಅಧ್ಯಕ್ಷ ಡಾ.ಎಂ.ಬಿ.ಅನಂತಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪ್ರಹ್ಲಾದ, ಕೊಡಗು ಜಿಲ್ಲಾಧ್ಯಕ್ಷ ಪ್ರಸನ್ನ ಭಟ್ ಇದ್ದರು.

ಪದಾಧಿಕಾರಿಗಳ ನೇಮಕ :ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಪ್ರಸನ್ನ ಭಟ್, ಉಪಾಧ್ಯಕರಾಗಿ ಶನಿವಾರಸಂತೆಯ ಸುದರ್ಶನ, ಖಜಾಂಚಿಯಾಗಿ ಎಸಳೂರು ಉದಯಕುಮಾರ್, ಕಾರ್ಯದರ್ಶಿಗಳಾಗಿ ರವಿಕುಮಾರ್, ಪ್ರಸಾದ್ ಹಾಗೂ ಜಯಂತ್ ಆಯ್ಕೆಯಾದರು.