ಸಾರಾಂಶ
ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈಲ್ವೆ ಸಂಪರ್ಕ ವಿಸ್ತರಣೆ, ರೈಲ್ವೆ ಸಚಿವರಿಂದ ಸ್ಪಂಧನ
--ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಪ್ರಯತ್ನದಿಂದಾಗಿ ಕಾಫಿ ಬೆಳೆಗಾರರು ಸರ್ಫೇಸಿ ಕಾಯ್ದೆಯಿಂದ ಹೊರಗಿರುತ್ತಾರೆ. ಇದರಿಂದ ಬೆಳೆಗಾರರಿಗೆ ಒಂದು ಶಕ್ತಿ ನೀಡಿದಂತಾಗಿದೆ ಎನ್ನುವ ಸಮಾಧಾನ ತಂದಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಫಿ ಬೆಳೆಗಾರರು ಸುಸ್ತಿ ಸಾಲಗಾರರಾದಾಗ ತಕ್ಷಣ ಸರ್ಫೇಸಿ ಕಾಯ್ದೆಯಡಿ ಬ್ಯಾಂಕುಗಳು ಇ-ಹರಾಜು ಮಾಡುತ್ತಿವೆ. ಈ ಬಗ್ಗೆ ನಾವು ಅಧಿವೇಶನ ವೇಳೆ ಪ್ರಶ್ನೆ ಕೇಳಿದಾಗ ವಾಣಿಜ್ಯ ಸಚಿವರು ಸರ್ಫೇಸಿ ಕಾಯ್ದೆ ಕಾಫಿ ಬೆಳೆ ಗಾರರ ಸಾಲಕ್ಕೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಇಡೀ ದೇಶದ ಕಾಫಿ ಬೆಳೆಗಾರರಿಗೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ಬ್ಯಾಂಕುಗಳು ಸೇರಿ ಕಾಫಿ ಬೆಳೆಗಾರರಿಗೆ ₹3500 ಕೋಟಿ ನಷ್ಟು ಸಾಲ ನೀಡಿವೆ. ಅದರಲ್ಲಿ ಕೆನರಾ ಬ್ಯಾಂಕ್ ಒಂದೇ ₹1500 ಕೋಟಿ ಸಾಲ ಕೊಟ್ಟಿದೆ. ಇದೀಗ ನಾವು ಸೇರಿದಂತೆ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರು ಕೇಂದ್ರ ಸಚಿವರ ಹೇಳಿಕೆ ಆಧರಿಸಿ ಬ್ಯಾಂಕ್ ಅಧಿಕಾರಿಗಳ ಜೊತೆ ಚರ್ಚಿಸಿದ ಪರಿಣಾಮ ಕೆನರಾ ಬ್ಯಾಂಕ್ ಒನ್ ಟೈಂ ಸೆಟ್ಲ್‌ಮೆಂಟ್‌ಗೆ ಅವಕಾಶ ನೀಡಿತ್ತು. ಇದೀಗ 817 ಮಂದಿ ಬೆಳೆಗಾರರು ಒನ್ ಟೈಂ ಸೆಟ್ಲ್‌ಮೆಂಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 142 ಮಂದಿ ಈಗಾಗಲೇ ಶೇ.5 ರಷ್ಟು ಹಣ ಕಟ್ಟಿ ಸಮಯ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.ರೈಲು ಸೇವೆ ವಿಸ್ತರಣೆ ಚಿಕ್ಕಮಗಳೂರು ಜಿಲ್ಲೆಗೆ ರೈಲು ಸೇವೆ ವಿಸ್ತರಿಸುವ ಉದ್ದೇಶದಿಂದ ರೈಲ್ವೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಿರುವ ರೈಲು ಕೆಲವು ತೊಂದರೆಯಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಿಕೊಡಲು ರೈಲ್ವೆ ಸಚಿವರು ಒಪ್ಪಿದ್ದಾರೆ. ಇದಲ್ಲದೆ ಚಿಕ್ಕ ಮಗಳೂರಿ ನಿಂದ ಬೆಂಗಳೂರು-ತಿರುಪತಿ ರೈಲು ಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಮಂಜೂರಾತಿ ಸಿಗುವ ಭರವಸೆ ಇದೆ. ಚಿಕ್ಕ ಮಗಳೂರಿನಲ್ಲಿ ಪಾಸ್ ಪೋರ್ಟ್ ಸೆಂಟರ್ ಆರಂಭಿಸಲು ಪ್ರಸ್ತಾವನೆ ನೀಡಲಾಗಿದ್ದು, ಅದಕ್ಕೂ ಮಂತ್ರಿಗಳಿಂದ ಆಶ್ವಾಸನೆ ಸಿಕ್ಕಿದೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.ಸಂಸೆ-ದಿಡುಪೆ ರಸ್ತೆ ಅಭಿವೃದ್ಧಿಕಳಸ ತಾಲೂಕು ಸಂಸೆ ಮತ್ತು ದಿಡುಪೆ ನಡುವಿನ ರಸ್ತೆ ದುರಸ್ತಿ ಆಗಬೇಕೆನ್ನುವುದು ಬಹಳ ದಿನದ ಬೇಡಿಕೆ. ಆಸ್ಪತ್ರೆಗೆ ತೆರಳುವವರು ಮತ್ತಿತರೆ ಉದ್ದೇಶಕ್ಕೆ ರಸ್ತೆ ಬಹಳ ಅಗತ್ಯವಿದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಸಂಬಂಧ ಲೋಕೋಪಯೋಗಿ ಇಲಾಖೆಯವರು ಯೋಜನೆಯನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಯಾವ ಇಲಾಖೆ ಮೂಲಕ ಮಾಡಬೇಕು ಎನ್ನುವುದನ್ನು ಯೋಚಿಸಲು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇವೆ.
ಸುಮಾರು ₹50 ಕೋಟಿ ವೆಚ್ಚದ ಈ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಸ್ವಲ್ಪ ಆಕ್ಷೇಪಗಳಿರುವ ಹಿನ್ನೆಲೆಯಲ್ಲಿ ಬೇರೆ ಜಾಗವನ್ನು ಕಾಯ್ದಿರಿಸಲು ಚರ್ಚೆಗಳು ನಡೆಯುತ್ತಿದೆ ಎಂದು ಹೇಳಿದರು.ಮತ್ಸ್ಯಸಂಪದ-ಕಾರ್‍ಯಾಗಾರಕೇಂದ್ರದ ಯೋಜನೆಗಳನ್ನು ಮುತುವರ್ಜಿಯಿಂದ ಜನರಿಗೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಮೀನುಗಾರಿಕೆ ಇಲಾಖೆಯಿಂದ ಮತ್ಸ್ಯ ಸಂಪದ ಯೋಜನೆಯಡಿ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಯಲ್ಲಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಪ್ರಧಾನ ಮಂತ್ರಿ ಆಹಾರ ಸಂಸ್ಕರಣಾ ಘಟಕ ಯೋಜನೆಯಡಿ ಪ್ರತಿ ಜಿಲ್ಲೆಗೆ 250 ಜನರಿಗೆ ಸಬ್ಸಿಡಿಯೊಂದಿಗೆ ಸಾಲ ಕೊಡುವ ಯೋಜನೆ ಇದಾಗಿದೆ ಎಂದರು.
ನಿರುದ್ಯೋಗಿ ಯುವಕ ಯುವತಿಯರಿಗೆ ಇದು ಪ್ರಯೋಜನಕಾರಿ. ನಮ್ಮಲ್ಲಿ 250 ಘಟಕಗಳ ಗುರಿಯಿದ್ದರೂ 60 ಜನರಿಗೆ ಮಾತ್ರ ಮಂಜೂರಾತಿ ಪ್ರಸ್ತಾಪನೆಗಳಿವೆ ಈ ಹಿನ್ನೆಲೆಯಲ್ಲಿ ಮೀನುಗಾರಿಕೆ, ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆ ಅಧಿಕಾರಿಗಳು, ಫಲಾನುಭವಿಗಳು, ಅರ್ಜಿದಾರರು, ಬ್ಯಾಂಕ್ ಅಧಿಕಾರಿಗಳನ್ನೊಳಗೊಂಡ ಕಾರ್‍ಯಾಗಾರ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.ಎಲ್ಲಾ ಶಾಸಕರು, ಉಸ್ತುವಾರಿ ಸಚಿವರನ್ನು ಕಾರ್‍ಯಾಗಾರಕ್ಕೆ ಆಹ್ವಾನಿಸಿ ಆಕಾಂಕ್ಷಿಗಳಿಗೆ ಒಂದಷ್ಟು ಮಾಹಿತಿ ನೀಡಲಾಗುವುದು. ಈ ಯೋಜನೆ ಯಿಂದ ಬಹಳಷ್ಟು ನಿರುದ್ಯೋಗಿಗಳಿಗೆ ಅನುಕೂಲವಾಗುತ್ತದೆ ಎನ್ನುವುದು ನಮ್ಮ ನಿರೀಕ್ಷೆ ಎಂದರು.ಉಪಗ್ರಹ ಮೂಲಕ ಬಿಎಸ್‌ಎನ್‌ಎಲ್ ಟವರ್‌ಗಳಿಗೆ ಸಂಪರ್ಕಚಿಕ್ಕಮಗಳೂರು: ಉಪಗ್ರಹ ಮೂಲಕ ಬಿಎಸ್‌ಎನ್‌ಎಲ್ ಟವರ್‌ಗಳಿಗೆ ಸಂಪರ್ಕ ಕೊಡಬೇಕೆನ್ನುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ. ಹಾಗೆ ಕೊಡುವಾಗ ಚಿಕ್ಕಮಗಳೂರು ಜಿಲ್ಲೆಯನ್ನು ಸೇರಿಸಿಕೊಳ್ಳುವಂತೆ ದೂರ ಸಂಪರ್ಕ ಸಚಿವರಲ್ಲಿ ಮನವಿ ಮಾಡಿದ್ದೇವೆ ಎಂದುಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆ ನಕ್ಸಲ್ ಸಮಸ್ಯೆ ಇರುವ ಪ್ರದೇಶ. ಈ ಹಿನ್ನೆಲೆಯಲ್ಲಿ ಪರಿಗಣಿಸಬೇಕು ಎಂದು ಕೋರಿದ್ದೇವೆ. ಸಚಿವರು ಕರ್ನಾಟಕಕ್ಕೆ ಆಧ್ಯತೆ ಕೊಡುವುದಾಗಿ ಚಿಕ್ಕಮಗಳೂರು ಜಿಲ್ಲೆಯನ್ನೂ ಸೇರಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.ಜಿಲ್ಲೆಯಲ್ಲಿ 217 ಬಿಎಸ್‌ಎನ್ಎಲ್ ಟವರ್‌ಗಳಿವೆ. ಬ್ಯಾಟರಿ ಮತ್ತು ಜನರೇಟರ್ ಸಮಸ್ಯೆ ಪರಿಹರಿಸುವ ಸಲುವಾಗಿ ಕೇಂದ್ರ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೊಸದಾಗಿ ಜಿಲ್ಲೆಗೆ 57 ಬ್ಯಾಟರಿಗಳನ್ನು ಮಂಜೂರು ಮಾಡಿದ್ದಾರೆ. ಇನ್ನೊಂದು ವಾರದಲ್ಲಿ 47 ಹೆಚ್ಚುವರಿ ಬ್ಯಾಟರಿಗಳು ಪೂರೈಕೆ ಆಗಲಿದೆ ಎಂದು ತಿಳಿಸಿದರು.ಇದೇ ವೇಳೆ ಜಿಲ್ಲೆಗೆ 28 ಹೊಸ ಟವರ್‌ಗಳು ಮಂಜೂರಾಗಿದೆ. ಇವುಗಳ ಪೈಕಿ 10ರಲ್ಲಿ 4ಜಿ ಸೇವೆ ಪ್ರಾರಂಭ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ, ಸಿರಗುಳ, ಬೊಗಸೆ, ಬೆರಣಗೋಡು, ಕಡೂರು ತಾಲೂಕು ಹೆಳವರ ಕಾಲೋನಿ ಹೀಗೆ 18 ಕಡೆಗಳಲ್ಲಿ ಹೊಸ ಟವರ್ ನಿರ್ಮಾಣಕ್ಕೆ ಬೇಡಿಕೆ ಇದೆ. ಇದೆಲ್ಲವನ್ನೂ ಸೇರಿ ಇನ್ನೂ 36 ಟವರ್‌ಗಳಿಗೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.--ದತ್ತಪೀಠದ ಸಮಗ್ರ ಅಭಿವೃದ್ಧಿಕೇಂದ್ರದ ಪ್ರವಾಸೋದ್ಯಮ ಇಲಾಖೆಯಿಂದ ₹100 ಕೋಟಿ ವೆಚ್ಚದಲ್ಲಿ ದತ್ತಪೀಠವನ್ನು ಸಮಗ್ರ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ಕೇಂದ್ರ ಪ್ರವಾಸೋದ್ಯಮ ಸಚಿವ ರಾಜೇಂದ್ರ ಸಿಂಗ್ ಶೆಕಾವತ್ ಅವರಲ್ಲಿ ಹೇಳಿದಾಗ ಜಿಲ್ಲೆಯಿಂದ ಒಂದು ಪ್ರಸ್ತಾವನೆ ಸಲ್ಲಿಸಲು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದಷ್ಟೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿದ್ದೇನೆ. ಈ ವಾರದಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಹೋಗಲಿದೆ ಎಂದು ಹೇಳಿದರು.
ಪೋಟೋ ಫೈಲ್ ನೇಮ್ 31 ಕೆಸಿಕೆಎಂ 5