ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ, ವಿದ್ಯಾರ್ಥಿಗಳ ಭವ್ಯಸ್ವಾಗತಕ್ಕೆ ಶಿಕ್ಷಕರು ಸಜ್ಜು

| Published : May 31 2024, 02:17 AM IST

ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ, ವಿದ್ಯಾರ್ಥಿಗಳ ಭವ್ಯಸ್ವಾಗತಕ್ಕೆ ಶಿಕ್ಷಕರು ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆಯಿತು ಆ ಬೇಸಿಗೆ, ಅರಳಿತು ಹೂ ಮೆಲ್ಲಗೆ, ಹೋಗೋಣ ಶಾಲೆಗೆ ಎನ್ನುವಂತೆ ಜಿಲ್ಲಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 31ರಂದು ಪ್ರಾರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, 957 ಪ್ರಾಥಮಿಕ ಶಾಲೆಗಳು, 172 ಪ್ರೌಢಶಾಲೆಗಳು ಕನ್ನಡಪ್ರಭ ವಾರ್ತೆ ಕೊಪ್ಪಳ

ಕಳೆಯಿತು ಆ ಬೇಸಿಗೆ, ಅರಳಿತು ಹೂ ಮೆಲ್ಲಗೆ, ಹೋಗೋಣ ಶಾಲೆಗೆ ಎನ್ನುವಂತೆ ಜಿಲ್ಲಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 31ರಂದು ಪ್ರಾರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ ನೀಡಲು ಶಿಕ್ಷಕರ ಸಜ್ಜಾಗಿದ್ದಾರೆ.

ಹೌದು, ಶಾಲಾ ಪ್ರಾರಂಭೋತ್ಸವ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ರಜೆಯನ್ನು ಪೂರ್ಣಗೊಳಿಸಿ, ಶಾಲೆಗೆ ಮತ್ತೆ ಹೋಗುವುದು ಎಂದರೆ ಮಕ್ಕಳಿಗೆ ಖುಷಿಯೋ ಖುಷಿ.

ರಜೆಯ ಮಜಾ ಮುಗಿಸಿ ಶಾಲೆಗೆ ಬರುತ್ತಿರುವ ಮಕ್ಕಳು ಶಾಲೆಯಲ್ಲಿಯೂ ಖುಷಿಯಾಗಿಯೇ ಇರಬೇಕು ಎನ್ನುವ ಕಾರಣಕ್ಕಾಗಿ ಹಲವಾರು ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ.

ಶಾಲೆಗಳನ್ನು ಸ್ವಚ್ಛ ಮಾಡಿ, ತಳಿರು, ತೋರಣಗಳನ್ನು ಬೆಳಗ್ಗೆ ಕಟ್ಟಿ, ರಂಗೋಲಿ ಹಾಕಿ, ಸಿಂಗಾರ ಮಾಡಲಾಗುತ್ತದೆ. ಮಕ್ಕಳು ಶಾಲೆಗೆ ಬಂದಾಗ ಮಕ್ಕಳಲ್ಲಿ ಉಲ್ಲಾಸದ ಭಾವನೆ ಇರಲಿ ಎನ್ನುವ ಕಾರಣಕ್ಕಾಗಿ ಮನೆಯಲ್ಲಿ ಹಬ್ಬದ ವೇಳೆಯಲ್ಲಿ ಮಾಡಿದಂತೆ ಸಿದ್ಧತೆ ಮಾಡಲಾಗುತ್ತಿದೆ.

ಕಳೆದೆರಡು ದಿನಗಳಿಂದ ಶಾಲೆಗಳಿಗೆ ತೆರಳುತ್ತಿರುವ ಶಿಕ್ಷಕರು ಶಾಲೆಗಳನ್ನು ಸಕಲ ರೀತಿಯಿಂದಲೂ ಸಜ್ಜುಗೊಳಿಸುತ್ತಿದ್ದಾರೆ. ಬಿಸಿಯೂಟ ಸಿಬ್ಬಂದಿ ಸೇರಿದಂತೆ ಎಲ್ಲರೂ ಸೇರಿ ಸಿದ್ಧತೆ ನಡೆಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ತಳಿರು-ತೋರಣಗಳನ್ನು ಕಟ್ಟಿ, ಸ್ವಾಗತ ಮಾಡುವುದಾಗಿ ಶಿಕ್ಷಕರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 957 ಪ್ರಾಥಮಿಕ ಶಾಲೆಗಳು ಹಾಗೂ 172 ಪ್ರೌಢಶಾಲೆಗಳು ಇವೆ. 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಅವರ ಪೈಕಿ ಬಹುತೇಕರು ಹಾಜರಾಗುವಂತೆ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಶಾಲೆ ಪ್ರಾರಂಭವಾಗಿರುವ ಕುರಿತು ಮಕ್ಕಳಿಗೂ ಮಾಹಿತಿ ರವಾನೆ ಮಾಡಲಾಗಿದೆ.

ಸಿಹಿ ವಿತರಣೆ:ಶಾಲಾ ಪ್ರಾರಂಭೋತ್ಸವದ ದಿನದಂದು ಮಕ್ಕಳಿಗೆ ಸಿಹಿ ವಿತರಣೆ ಮಾಡುವಂತೆ ಡಿಡಿಪಿಐ ಶ್ರೀಶೈಲ ಬಿರಾದರ ಸೂಚಿಸಿದ್ದಾರೆ. ಇದಕ್ಕಾಗಿ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಪ್ರಾರಂಭದ ದಿನ ಮಕ್ಕಳಿಗೆ ಬಿಸಿಯೂಟದಲ್ಲಿ ಕಡ್ಡಾಯವಾಗಿ ಸಿಹಿ ಉಣಬಡಿಸಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ ಶಾಲೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಸಾಧ್ಯವಾದರೆ ಸಕಲ ರೀತಿಯಿಂದಲೂ ತಯಾರು ಮಾಡಿ, ಹಬ್ಬದ ವಾತಾವರಣ ಮೂಡಿಸಬೇಕು. ತಳಿರು-ತೋರಣಗಳನ್ನು ಸಹ ಕಟ್ಟಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.