ಫಲಾನುಭವಿಗಳಿಗೆ ಹಣ ಮರಳಿಸಿದ ಬ್ಯಾಂಕುಗಳು

| Published : May 31 2024, 02:17 AM IST

ಸಾರಾಂಶ

ಬರ ಪರಿಹಾರ, ಸಾಮಾಜಿಕ ಪಿಂಚಣಿ, ಭಾಗ್ಯಲಕ್ಷ್ಮೀ ಹಾಗೂ ನರೇಗಾ ಕೂಲಿ ಹಣವನ್ನೂ ಸಾಲಕ್ಕೆ ಜಮೆ ಮಾಡಿಕೊಂಡಿದ್ದ ಬ್ಯಾಂಕುಗಳು, ಕಡಿತಗೊಳಿಸಿದ್ದ ಹಣವನ್ನು ಆಯಾ ಫಲಾನುಭವಿಗಳಿಗೆ ಮರಳಿ ನೀಡುತ್ತಿವೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಬರ ಪರಿಹಾರ, ಸಾಮಾಜಿಕ ಪಿಂಚಣಿ, ಭಾಗ್ಯಲಕ್ಷ್ಮೀ ಹಾಗೂ ನರೇಗಾ ಕೂಲಿ ಹಣವನ್ನೂ ಸಾಲಕ್ಕೆ ಜಮೆ ಮಾಡಿಕೊಂಡಿದ್ದ ಬ್ಯಾಂಕುಗಳು, ಕಡಿತಗೊಳಿಸಿದ್ದ ಹಣವನ್ನು ಆಯಾ ಫಲಾನುಭವಿಗಳಿಗೆ ಮರಳಿ ನೀಡುತ್ತಿವೆ. ಸ್ಥಗಿತ (ಹೋಲ್ಡ್‌) ಮಾಡಿದ್ದ ಉಳಿತಾಯ ಖಾತೆಗಳಲ್ಲಿನ ಹಣದ ನಗದೀಕರಣಕ್ಕೆ ಅನುಕೂಲವಾಗುವಂತೆ ಪುನಾರಂಭಗೊಳಿಸಿದ್ದಾರೆ.

ಜಿಲ್ಲಾ ಲೀಡ್‌ ಬ್ಯಾಂಕ್‌ ಅಧಿಕಾರಿ ಲೂಯಿಸ್‌ ಮತ್ತು ಬ್ಯಾಂಕ್‌ ಅಧಿಕಾರಿ ಅಮೀರ್‌ ಪಟೇಲ್‌ ಅವರ ತಂಡ, ತಡೆ ಹಿಡಿದಿದ್ದ ಹಾಗೂ ಕಡಿತಗೊಳಿಸಿದ್ದ ಹಣ ನಗದೀಕರಣಕ್ಕೆ ಅನುಕೂಲವಾಗುವಂತೆ ಪುನಾರಂಭಿಸಿದ್ದಾರೆ.

ಬರ ಪರಿಹಾರ, ಸಾಮಾಜಿಕ ಪಿಂಚಣಿ, ಭಾಗ್ಯಲಕ್ಷ್ಮಿ, ನರೇಗಾ ಕೂಲಿ ಹಣ, ಗ್ಯಾಸ್‌ ಸಬ್ಸಿಡಿ ವಾಪಸ್‌ ಜಮೆಯಾಗಿ ಅವರೆಲ್ಲ ನಗದೀಕರಿಸಿಕೊಂಡಿದ್ದಾರೆ. ಅನೇಕ ರೈತರುಗಳು, ಫಲಾನುಭವಿಗಳು ಆಯಾ ಬ್ಯಾಂಕುಗಳಿಗೆ ತೆರಳಿ, ಸಾಲಕ್ಕೆ ಜಮೆ ಮಾಡಿದ್ದ ಬರ ಪರಿಹಾರ ಹಣ ಹಿಂಪಡೆಯುತ್ತಿದ್ದಾರೆ.

"ಬರ ಹಣ ರೈತರ ಸಾಲಕ್ಕೆ ಜಮೆ " ಹಾಗೂ "ಪಿಂಚಣಿ, ನರೇಗಾ ಕೂಲಿ ಹಣವೂ ಸಾಲಕ್ಕೆ ಜಮೆ " ಶೀರ್ಷಿಕೆಯಡಿ ಮೇ 15 ರಂದು ಮೇ 17 ರಂದು "ಕನ್ನಡಪ್ರಭ "ದಲ್ಲಿ ಪ್ರಕಟಗೊಂಡಿದ್ದ ವಿಶೇಷ ವರದಿಗಳು ಸಂಚಲನ ಮೂಡಿಸಿದ್ದವು. "ಬರ ಪರಿಹಾರದ ಮೊತ್ತ ರೈತರ ಸಾಲಕ್ಕೆ ಜಮೆ ಸಲ್ಲದು " ಎಂಬುದಾಗಿ ಮೇ 18 ರಂದು ಕನ್ನಡಪ್ರಭದಲ್ಲಿ ಸಂಪಾದಕೀಯ ಪ್ರಕಟಗೊಂಡಿತ್ತು.

ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ ಅವರು, ಬರ ಪರಿಹಾರ ಹಾಗೂ ಸಾಮಾಜಿಕ ಪಿಂಚಣಿ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚನೆಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದರು.

ಇಂತಹ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಎಲ್ಲ ಬ್ಯಾಂಕುಗಳಿಗೆ ಪತ್ರ ಬರೆದು ಎಚ್ಚರಿಸಿದ್ದರು. ಡೀಸಿ ಹಾಗೂ ಜಿಲ್ಲಾ ಪಂಚಾಯತ್‌ ಸಿಇಓ ಗರೀಮಾ ಪನ್ವಾರ್‌ ನೇತೃತ್ವದಲ್ಲಿ ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆದು, ಹಣ ಮರುಪಾವತಿಗೆ ಸೂಚಿಸಿದ್ದರು. ಕೊನೆಗೆ, "ಕನ್ನಡಪ್ರಭ " ಈ ವರದಿಗಳು ರೈತಾಪಿ/ಫಲಾನುಭವಿಗಳ ವಲಯದಲ್ಲಿ ನಿಟ್ಟುಸಿರು ಮೂಡಿಸಿವೆ.