ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಲೂಕಿನಉಮ್ಮತ್ತೂರು ಗ್ರಾಮದಲ್ಲಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ 110 ನೆ ಜಯಂತಿ ಅಂಗವಾಗಿ ಬೆಳ್ಳಿ ಪಲ್ಲಕ್ಕಿ ರಥದಲ್ಲಿ ಶ್ರೀಗಳವರ ಭಾವಚಿತ್ರವನ್ನು ಉಮ್ಮತ್ತೂರು ಗ್ರಾಮದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.ಈ ಮೆರವಣಿಗೆಯಲ್ಲಿ ಶಾಲಾ ಮಕ್ಕಳಿಂದ ಬ್ಯಾಂಡ್, ವೀರಗಾಸೆ ಕುಣಿತ, ವಾದ್ಯ ಕಲಾತಂಡಗಳು ಹಾಗು ನಂದಿ ಮೆರವಣಿಗೆ ಮೂಲಕ ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಸಾರ್ವಜನಿಕರು ಸಾಮೂಹಿಕವಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿ ನಡೆಸಿದರು.
ಮೆರವಣಿಗೆ ಕಾರ್ಯಕ್ರಮದ ನಂತರ ಸಭಾ ಕಾರ್ಯಕ್ರಮಕ್ಕೆ ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿಚಾಲನೆ ನೀಡಿ, ರಾಜೇಂದ್ರ ಮಹಾಸ್ವಾಮಿಗಳ ದಾಸೋಹ,ಮತ್ತು ಶಿಕ್ಷಣ ಸೇವೆ ಹಾಗು ದಿವ್ಯದೃಷ್ಟಿ ಮತ್ತು ಅವರ ಸಾಮಾಜಿಕ ಕಳಕಳಿ ಬಗ್ಗೆ ತಿಳಿಸಿದರು.ಕಬ್ಬಳ್ಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್ ಎಂ ಸಿದ್ದರಾಜಪ್ಪ ಮಾತನಾಡಿ, ಶಿಕ್ಷಣದಿಂದಲೇ ನಾಡಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಸಂಜೀವಿನಿ. ಇದು ಪೂಜ್ಯರ ಧ್ಯೇಯೋದ್ದೇಶವಾಗಿತ್ತು. ನಿಸ್ವಾರ್ಥ ಸಮಾಜ ಸೇವೆಯನ್ನು ಪ್ರತಿಯೊಬ್ಬ ನಾಗರಿಕರು ಕಿಂಚಿತ್ತಾದರೂ ಅಳವಡಿಸಿಕೊಂಡರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದು ರಾಜೇಂದ್ರ ಶ್ರೀಗಳ ಆಶಯವಾಗಿತ್ತು ಎಂದು ತಿಳಿಸಿದರು.ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವಿ ಕಿರಣ್ ಮಾತನಾಡಿ, ನಿರಂತರ ಪರಿಸರ ಸ್ವಚ್ಛತೆಯಿಂದ ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಜೆಎಸ್‌ಎಸ್ ಹಿರಿಯ ವಿದ್ಯಾರ್ಥಿ ಜಿ ರವಿಶಂಕರ್ ಅತಿ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳಿಗೆ ಇವರ ತಂದೆ ದಿ. ಎಂ . ಗುರುಮಲ್ಲಪ್ಪ ಅವರ ಹೆಸರಿನಲ್ಲಿ ಬಹುಮಾನ ಮತ್ತು ಸನ್ಮಾನ ಮಾಡುವ ಮೂಲಕ ಇತರೆ ಮಕ್ಕಳಿಗೆ ಪ್ರೇರೇಪಣಾದಾಯಕ ಸೇವಾ ಕಾರ್ಯಮಾಡಿ ಮಕ್ಕಳನ್ನು ನಮ್ಮ ದೇಶದ ಆಸ್ತಿಯಾಗಿ ಮಾಡಬೇಕು ಎಂದು ತಿಳಿಸಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರಸ್ವಾಮಿ, ಉಪಾಧ್ಯಕ್ಷ ನಂಜುಂಡ ಶೆಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಜಮ್ಮ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಮೋಹನ್ ಬಾಬು, ಶಾಂತಪ್ಪ, ನಾಗರಾಜ ,ಮಹದೇವಸ್ವಾಮಿ,ಬಸವಣ್ಣ, ಬಿ.ಲಿಂಗರಾಜು, ಶ್ರೀಕಂಠ ಸ್ವಾಮಿ, ನಾಗೇಂದ್ರಸ್ವಾಮಿ,ಶಿವಮಲ್ಲಪ್ಪ,ಪುಟ್ಟಸ್ವಾಮಿ, ಶಾಲೆಮುಖ್ಯಶಿಕ್ಷಕ ಮಲ್ಲರಾಜು ಮತ್ತು ಶಿಕ್ಷಕರು ಹಾಗೂ ಗ್ರಾಮಸ್ಧರು ಇದ್ದರು.