ನಾಳೆ ಅಳ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ ಚುನಾವಣೆ

| Published : Dec 21 2024, 01:17 AM IST

ನಾಳೆ ಅಳ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಳ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲು ಹಿರಿಯರು ಮುಂದಾಗಿದ್ದರು. ಆದರೆ, ಕೆಲವರು ಸ್ಪರ್ಧೆ ನಿರ್ಧಾರ ಪ್ರಕಟಿಸಿದ್ದರಿಂದ ಚುನಾವಣೆ ಅಖಾಡ ಸಜ್ಜಾಗಿದೆ.

ಅಳ್ನಾವರ:

ಅರವತ್ತೇಳು ವರ್ಷ ಇತಿಹಾಸವುಳ್ಳ ಪಟ್ಟಣದ ಪ್ರತಿಷ್ಠಿತ ಅಳ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮುಂದಿನ ಐದು ವರ್ಷ ಅವಧಿಯ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಡೆಯಲಿದೆ. ಅಬ್ಬರದ ಪ್ರಚಾರ ನಡೆಸುತ್ತಿರುವ ಪ್ರಗತಿ ಸಹಕಾರ ಗುಂಪು ಜಯಬೇರಿ ಭಾರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲು ಹಿರಿಯರು ಮುಂದಾಗಿದ್ದರು. ಆದರೆ, ಕೆಲವರು ಸ್ಪರ್ಧೆ ನಿರ್ಧಾರ ಪ್ರಕಟಿಸಿದ್ದರಿಂದ ಚುನಾವಣೆ ಅಖಾಡ ಸಜ್ಜಾಗಿದೆ.

ಲಾಭದ ಬ್ಯಾಂಕ್‌:

ಆರೂವರೆ ದಶಕಗಳ ಹಿಂದೆ ಸ್ಥಾಪನೆಯಾಗಿರುವ ಅಳ್ನಾವರ ಅರ್ಬನ್‌ ಕೋ-ಆಪ್‌ ಬ್ಯಾಂಕ್‌ ಸತತವಾಗಿ ಪ್ರಗತಿಯಲ್ಲಿಯೇ ಸಾಗಿದ್ದು ಕಳೆದ ಆರ್ಥಿಕ ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಲಾಭಗಳಿಸಿದೆ. ಬ್ಯಾಂಕಿನ ಠೇವಣಿ ₹ ೭೬ ಕೋಟಿಗಳಷ್ಟಿದ್ದು ಇದು ಸುಸ್ಥಿರ ಮತ್ತು ಸುಭದ್ರತೆ ಸಂಕೇತವಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಶಿವಲಿಂಗ ಜಕಾತಿ ತಿಳಿಸಿದ್ದಾರೆ.

ಬ್ಯಾಂಕಿನ ಹಿಂದಿನ ಅಧ್ಯಕ್ಷರಾದ ದಿ. ಬಿ.ಬಿ. ತೇಗೂರ, ಶಿವಾನಂದ ಹೊಸಕೇರಿ, ನಾರಾಯಣ ಗಡಕರ ಇನ್ನಿತರ ಹಿರಿಯರ ಮಾರ್ಗದರ್ಶನದಲ್ಲಿ ಬ್ಯಾಂಕ್‌ನ್ನು ಹಾಲಿ ನಿರ್ದೇಶಕ ಮಂಡಳಿ ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿನ ನಾಲ್ಕು ಹೊಸ ಶಾಖೆ ತೆರೆಯುವ ಪ್ರಸ್ತಾವನೆ ಇದ್ದು ಈಗಾಗಲೇ ಬ್ಯಾಂಕಿನಲ್ಲಿ ಡಿಜಿಟಲ್ ಸೇವೆ ಅಳವಡಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ನಿರ್ದೇಶಕ ಮಂಡಳಿಯ ೧೫ ಸ್ಥಾನಗಳ ಪೈಕಿ ಆರು ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದೆ. ೯ ಸ್ಥಾನಗಳಿಗೆ ಜರುಗಲಿರುವ ಚುನಾವಣೆಗೆ ೧೨ ಜನರು ಕಣದಲ್ಲಿದ್ದಾರೆ. ಇವರಲ್ಲಿ ಪ್ರಗತಿ ಸಹಕಾರ ಗುಂಪಿನ 9 ಜನರು ಸ್ಪರ್ಧಿಸಿದ್ದರೆ ಮೂವರು ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತಿದ್ದಾರೆ.

ಸಾಮಾನ್ಯ ವರ್ಗದಿಂದ ಉಳಿದ 9 ಸ್ಥಾನಕ್ಕೆ ಭಾನುವಾರ ಮುಖ್ಯ ಕಚೇರಿಯ ಎದುರಿನ ಜಾಗೆಯಲ್ಲಿ ಬೆಳಗ್ಗೆ 9ರಿಂದ ಸಂಜೆ ೪ರ ವರೆಗೆ ಚುನಾವಣೆ ನಡೆಯಲಿದೆ. ಒಟ್ಟು ೨೮೬೪ ಮತದಾರರು ಮತ ಚಲಾಯಿಸಲಿದ್ದಾರೆ. ಮತದಾನದ ನಂತರ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಅವಿರೋಧ ಆಯ್ಕೆ

ಹಿಂದಿನ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದ ನಾಗರಾಜ ಪರಮೇಶ್ವರಪ್ಪ ಹಂಜಗಿ (ಎಸ್ಸಿ), ಫಕ್ಕೀರಪ್ಪ ಶಂಕರ ಮೇದಾರ (ಎಸ್ಟಿ), ಜಾವಿದ್‌ಅನ್ವರ ರೆಹಮತುಲ್ಲಾ ತೊಲಗಿ (ಹಿಂದುಳಿದ ಅ ವರ್ಗ), ಉದಯ ನಾರಾಯಣ ಗಡಕರ ( ಹಿಂದುಳಿದ ಬ ವರ್ಗ) ಹಾಗೂ ಎರಡು ಮಹಿಳಾ ಸ್ಥಾನಕ್ಕೆ ಸಂಧ್ಯಾ ಶಶಿಧರ ಅಂಬಡಗಟ್ಟಿ, ವರ್ಷಾ ಬಸವರಾಜ ತೇಗೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಷೇರುದಾರರು, ಗ್ರಾಹಕರ ಅಪೇಕ್ಷೆಯ ಮೇರೆಗೆ ಮತ್ತೊಂದು ಅವಧಿಗೆ ಆಯ್ಕೆ ಬಯಸಿ ಬ್ಯಾಂಕಿನ ಅಭಿವೃದ್ಧಿಯ ಭರವಸೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಅಳ್ನಾವರ ಪ್ರಗತಿ ಸಹಕಾರ ಗುಂಪಿನ ಎಲ್ಲ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದು ಉಪಾಧ್ಯಕ್ಷ ರೂಪೇಶ ಗುಂಡಕಲ್ಲ ಹೇಳಿದರು.