ಸಾರಾಂಶ
ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಸ್ಥಗಿತಗೊಂಡು ಸುಮಾರು 9ವರ್ಷ ಕಳೆದಿವೆ. ಆದರೆ ಪುನಃ ಆರಂಭಗೊಳ್ಳುವ ಲಕ್ಷಣಗಳು ಮಾತ್ರ ಕಂಡು ಬರುತ್ತಿಲ್ಲ. ಇದೀಗ ನೀಲಗಿರಿ ನಿಷೇಧ ಬಹುದೊಡ್ಡ ಕಾರಣವನ್ನಾಗಿ ಮಾಡಿ ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಆರೋಪ ಕಾರ್ಮಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಅನಂತಕುಮಾರ್
ಕನ್ನಡಪ್ರಭ ವಾರ್ತೆ ಭದ್ರಾವತಿರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಸ್ಥಗಿತಗೊಂಡು ಸುಮಾರು 9ವರ್ಷ ಕಳೆದಿವೆ. ಆದರೆ ಪುನಃ ಆರಂಭಗೊಳ್ಳುವ ಲಕ್ಷಣಗಳು ಮಾತ್ರ ಕಂಡು ಬರುತ್ತಿಲ್ಲ. ಇದೀಗ ನೀಲಗಿರಿ ನಿಷೇಧ ಬಹುದೊಡ್ಡ ಕಾರಣವನ್ನಾಗಿ ಮಾಡಿ ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಆರೋಪ ಕಾರ್ಮಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಸರ್.ಎಂ. ವಿಶ್ವೇಶ್ವರಯ್ಯ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಮಿರ್ಜಾ ಇಸ್ಮಾಯಿಲ್ ಅವರ ಪರಿಶ್ರಮದ ಫಲವಾಗಿ ಆರಂಭಗೊಂಡು ಒಂದು ಕಾಲದಲ್ಲಿ ತನ್ನದೇ ಆದ ಬ್ರಾಂಡ್ ಮೂಲಕ ದೇಶದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದ ಮೈಸೂರು ಕಾಗದ ಕಾರ್ಖಾನೆ ಸ್ಥಗಿತಗೊಂಡು ಸುಮಾರು 9 ವರ್ಷಗಳು ಕಳೆದಿವೆ. ಸುಮಾರು 7 ದಶಕದವರೆಗೆ ನಿರಂತರವಾಗಿ ಕಾರ್ಯಾಚರಣೆಯಲ್ಲಿದ್ದ ಕಾರ್ಖಾನೆ ಹಲವು ಕಾರಣಗಳಿಂದ ಸ್ಥಗಿತಗೊಳ್ಳುವ ಮೂಲಕ ಸಾವಿರಾರು ಕಾರ್ಮಿಕರು ಬದುಕಿನ ನೆಮ್ಮದಿ ಕಳೆದುಕೊಂಡು ಊರು ಬಿಟ್ಟಿದ್ದಾರೆ. ಅಳಿದುಳಿದಿರುವ ಕಾರ್ಮಿಕರು, ಕುಟುಂಬ ವರ್ಗದವರು ಈಗಲೂ ಕಾರ್ಖಾನೆ ಪುನಾ ಆರಂಭಗೊಳ್ಳುವ ಆಶಾಭಾವನೆಯಲ್ಲಿದ್ದಾರೆ.ಇತಿಹಾಸದ ಪುಟದಲ್ಲಿ ಅಡಗಿರುವ ವೈಭವದ ಕಾರ್ಖಾನೆ
ಸ್ಥಳೀಯ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಕಾಗದ ಕಾರ್ಖಾನೆ ನಿರ್ಮಿಸಬಹುದು ಎಂಬ ವಿಶ್ವೇಶ್ವರಯ್ಯ ಅವರ ಕನಸನ್ನು ಮಿರ್ಜಾ ಇಸ್ಮಾಯಿಲ್‌ರವರು 1937ರಲ್ಲಿ ಮೈಸೂರು ಕಾಗದ ಕಾರ್ಖಾನೆ ಆರಂಭಿಸುವ ಮೂಲಕ ನನಸಾಗಿಸಿದ್ದರು. ಆರಂಭದಲ್ಲೇ ಪ್ರತಿದಿನ 100 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದ ಬರವಣಿಗೆ ಮತ್ತು ಮುದ್ರಣ ಕಾಗದದ 3 ಘಟಕ ಸ್ಥಾಪಿಸಲಾಗಿತ್ತು. 1970 ರ ದಶಕದಲ್ಲಿ ಮುದ್ರಣ ಕಾಗದ (ನ್ಯೂಸ್‌ಪ್ರಿಂಟ್)ಕ್ಕೆ ಭಾರಿ ಬೇಡಿಕೆ ಬರಲಾರಂಭಿಸಿದ ಬಳಿಕ ರಾಜ್ಯ ಸರ್ಕಾರ ಮುದ್ರಣ ಕಾಗದ ಘಟಕ ಸ್ಥಾಪನೆಗೆ ಯೋಜನೆ ರೂಪಿಸಿತು. ಇದರ ಫಲವಾಗಿ 1982ರಲ್ಲಿ ದಿನಕ್ಕೆ 300 ಮೆಟ್ರಿಕ್ ಟನ್ ಸಾಮರ್ಥ್ಯದ ಮುದ್ರಣ ಕಾಗದ ಉತ್ಪಾದನಾ ಘಟಕ ಆರಂಭವಾಯಿತು.ಸಕ್ಕರೆ ಘಟಕ ಆರಂಭ:
1983-84ರಲ್ಲಿ ದಿನಕ್ಕೆ 2500 ಟನ್ ಕಬ್ಬು ಅರೆಯುವ ಸಾಮರ್ಥ್ಯದ ಸಕ್ಕರೆ ಕಾರ್ಖಾನೆ ಸಹ ಸ್ಥಾಪಿಸಲಾಯಿತು. ವಾರ್ಷಿಕ ಸರಾಸರಿ ₹2.50 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು ಸರಾಸರಿ 20 ಸಾವಿರ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗುತ್ತಿತ್ತು. ಒಂದು ಕಾಲದಲ್ಲಿ ಕಾರ್ಖಾನೆಯಲ್ಲಿ 7 ಸಾವಿರ ಖಾಯಂ ಮತ್ತು 3 ಸಾವಿರ ಗುತ್ತಿಗೆ ಕಾರ್ಮಿಕರಿದ್ದರು. ದೇಶದಲ್ಲಿ 500ಕ್ಕೂ ಅಧಿಕ ಕಾಗದ ಕಾರ್ಖಾನೆಗಳಿದ್ದು, ಅವುಗಳಲ್ಲಿ ಅತಿಹೆಚ್ಚು ಕಾಗದ ಉತ್ಪಾದಿಸುವ ಮತ್ತು ಮಾರಾಟ ಮಾಡುವ ಹೆಗ್ಗಳಿಕೆ ಈ ಕಾರ್ಖಾನೆ ಹೊಂದಿತ್ತು.ನಷ್ಟದ ಹಾದಿ ಹಿಡಿದ ಕಾರ್ಖಾನೆ
ವಾರ್ಷಿಕ ಸರಾಸರಿ ₹415 ಕೋಟಿ ವಹಿವಾಟು ನಡೆಸುತ್ತಿದ್ದ ಕಾರ್ಖಾನೆಯು ನ್ಯೂಸ್ ಪ್ರಿಂಟ್‌ನಿಂದ ಶೇ.58 ಮುದ್ರಣ ಮತ್ತು ಬರವಣಿಗೆ ಕಾಗದದಿಂದ ಶೇ.28 ಮತ್ತು ಸಕ್ಕರೆಯಿಂದಾಗಿ ಶೇ.17ರಷ್ಟು ಆದಾಯ ಗಳಿಸುತ್ತಿತ್ತು. ಕಾರ್ಖಾನೆ 1999 ರವರೆಗೆ ನಿರಂತರವಾಗಿ ಲಾಭದಲ್ಲಿತ್ತು. ವಾರ್ಷಿಕ ₹80 ಕೋಟಿವರೆಗೂ ಲಾಭ ಗಳಿಸಿದೆ. 2008-09ನೇ ಸಾಲಿಗೆ ₹35 ಕೋಟಿ ನಷ್ಟ ಅನುಭವಿಸಿತು. ಅದಾದ ಬಳಿಕ ಕಾರ್ಖಾನೆ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. 2014ರಲ್ಲಿ ₹350 ಕೋಟಿ, 2015ರಲ್ಲಿ ₹550 ಕೋಟಿ ಗಳಿಗೆ ಏರಿಕೆಯಾಗಿ ಪ್ರಸ್ತುತ ₹1541.54 ಕೋಟಿ ತಲುಪಿದೆ.ಸರ್ಕಾರದ ಧೋರಣೆ, ಖಾಸಗಿ ಕಂಪನಿಗಳ ದರ ಸಮರ ನಷ್ಟಕ್ಕೆ ಕಾರಣ:
90ರ ದಶಕದಲ್ಲಿ ಕೇಂದ್ರ ಸರಕಾರದ ವಿದೇಶಾಂಗ ನೀತಿ, ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ದಿಢೀರನೆ ಕಾರ್ಖಾನೆ ಅವನತಿಯ ಹಾದಿ ಹಿಡಿಯಿತು. ಕಾಗದ ಕ್ಷೇತ್ರದಲ್ಲಿ ಇರುವ ಲಾಭದ ಮೇಲೆ ಕಣ್ಣಿಟ್ಟ ಖಾಸಗಿ ಕಂಪೆನಿಗಳು ಹೊಸ ಕಾರ್ಖಾನೆಗಳನ್ನು ತೆರೆಯಲಾರಂಭಿಸಿದವು. ಇದಕ್ಕೂ ಎರಡು ವರ್ಷ ಮೊದಲು ಅಂದರೆ 1996ರಲ್ಲಿ ವಿದೇಶಿ ಕಾಗದ ಆಮದು ಸುಂಕಕ್ಕೆ ಭಾರಿ ರಿಯಾಯಿತಿ ನೀಡಿತು. ಇದಾದ ಬಳಿಕ ದೇಸಿ ಮಾರುಕಟ್ಟೆಯಲ್ಲಿ ಮುದ್ರಣ ಮತ್ತು ಬರವಣಿಗೆ ಹಾಗೂ ನ್ಯೂಸ್ ಪ್ರಿಂಟ್ ದರ ಕುಸಿತ ಕಂಡಿತು.ನಿರಂತರ ಪ್ರಯತ್ನ, ಹೋರಾಟದ ನಡುವೆಯೂ ಈಡೇರದ ಬೇಡಿಕೆ :
೨೦೧೬ರಲ್ಲಿ ಸ್ಥಗಿತಗೊಂಡ ಕಾರ್ಖಾನೆ ಪುನರ್ ಆರಂಭಿಸುವಂತೆ ಧರಣಿ ಸತ್ಯಾಗ್ರಹ, ಪ್ರತಿಭಟನೆ, ರಸ್ತೆ ತಡೆ, ಭದ್ರಾವತಿ ಬಂದ್, ಅರೆಬೆತ್ತಲೆ ಮೆರವಣಿಗೆ, ಪಾದಯಾತ್ರೆ ಹೀಗೆ ನಾನಾ ರೀತಿಯ ಸಾಕಷ್ಟು ಹೋರಾಟಗಳು ನಡೆದಿವೆ. ಹೋರಾಟಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಅಲ್ಲದೆ ಕ್ಷೇತ್ರದ ನಾಗರೀಕರು, ವಿವಿಧ ಸಂಘ-ಸಂಸ್ಥೆಗಳು, ಮಠಾಧೀಶರು, ಗಣ್ಯರು ಕಾರ್ಖಾನೆ ಪುನರ್ ಆರಂಭಿಸುವ ನಿಟ್ಟಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಇದುವರೆಗೂ ಬೇಡಿಕೆ ಈಡೇರಿಲ್ಲ.