ನರಸಿಂಹರಾಜಪುರಸಂಸ್ಕಾರಕ್ಕೆ ದೊಡ್ಡ ಶಕ್ತಿ ಇದ್ದು ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರ ಸಹ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಕರೆ ನೀಡಿದರು.
- ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2025-26 ನೇ ಸಾಲಿನ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸಂಸ್ಕಾರಕ್ಕೆ ದೊಡ್ಡ ಶಕ್ತಿ ಇದ್ದು ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರ ಸಹ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಕರೆ ನೀಡಿದರು.
ಗುರುವಾರ ಸಂಜೆ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2025-26 ನೇ ಸಾಲಿನ ವಾರ್ಷಿಕೋತ್ಸವ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಲ್ಲಿಗೆ ಸಂಸ್ಕಾರ ಸಿಕ್ಕಿದರೆ ಅದು ಶಿಲೆಯಾಗುತ್ತದೆ. ಮಣ್ಣಿಗೆ ಸಂಸ್ಕಾರ ಸಿಕ್ಕಿದರೆ ಅದು ಮಡಿಕೆಯಾಗುತ್ತದೆ. ಸಗಣಿಗೆ ಸಂಸ್ಕಾರ ಸಿಕ್ಕಿದರೆ ಅದು ವಿಭೂತಿಯಾಗುತ್ತದೆ. ನೀರಿಗೆ ಸಂಸ್ಕಾರ ಸಿಕ್ಕಿದರೆ ಅದು ತೀರ್ಥವಾಗುತ್ತದೆ. ಅದೇ ರೀತಿ ಮಕ್ಕಳಿಗೆ ಸಂಸ್ಕಾರ ನೀಡಿ ಬೆಳಸಿದರೆ ಮುಂದೆ ಆತ ಮಹಾ ಮಹಾ ಪುರುಷ ನಾಗಬಲ್ಲ. ಸಂಸ್ಕಾರಕ್ಕೆ ಅಂತಹ ಶಕ್ತಿ ಇದೆ. ಶಾಲೆಗಳಿಗೆ ಸರ್ಕಾರ ಪಠ್ಯ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಬಿಸಿಯೂಟ, ರಾಗಿ ಮಾಲ್ಟ್ ನೀಡುತ್ತಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ನೋಟ್ ಬುಕ್ ಸಹ ನೀಡಲಾಗುತ್ತದೆ ಎಂದರು.ಅತಿಥಿಯಾಗಿದ್ದ ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನುರಿತ ಶಿಕ್ಷಕರಿದ್ದಾರೆ. ಇದರಿಂದ ಉತ್ತಮ ಗುಣ ಮಟ್ಟದ ಶಿಕ್ಷಣ ಸಿಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆ ಎಂದರೆ ದೇವಾಲಯ ಇದ್ದಂತೆ. ಈ ಶಾಲೆಗೆ ಗ್ರಾಮ ಪಂಚಾಯಿತಿಯಿಂದಲೂ ವಿಶೇಷ ಅನುದಾನ ನೀಡಲಾಗಿದೆ ಎಂದರು. ಸಭೆ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿಎಂಸಿ ಅಧ್ಯಕ್ಷ ಎಂ.ಜಗದೀಶ್ ವಹಿಸಿದ್ದರು. ಅತಿಥಿಗಳಾಗಿ ಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಎಂ. ಕಾಂತರಾಜ್, ಗ್ರಾಪಂ ಸದಸ್ಯರಾದ ಶೈಲಾ ಮಹೇಶ್, ವಾಣಿ ನರೇಂದ್ರ, ಎ.ಬಿ.ಮಂಜುನಾಥ್, ಪೂರ್ಣಿಮಾ ಸಂತೋಷ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ರಾಗಿಣಿ, ದಾನಿ ದಿವಾಕರ ಗೌಡ,ಸಿ.ಆರ್.ಪಿ ತಿಮ್ಮಮ್ಮ, ಪಿಡಿಒ ವಿಂದ್ಯಾ, ವಿವಿಧ ಸಂಘಗಳ ಪದಾಧಿಕಾರಿಗಳಾದ ಅಶೋಕ್, ನಂಜುಂಡಪ್ಪ, ಗೀತಾ ಪ್ರಕಾಶ್, ತಿಮ್ಮೇಶ್,ಬೋಗೇಶ್, ಅನಿಲ್, ಮುಖ್ಯ ಶಿಕ್ಷಕಿ ಶಕುಂತಳಾ ಶಿಕ್ಷಕಿಯರಾದ ರಾಧಾಮಣಿ ಮತ್ತು ಶುಭಾ, ಶಿಕ್ಷಕ ಅರುಣಕುಮಾರ್ ಇದ್ದರು.