ಯುವಕರು ದುಶ್ಚಟಗಳಿಂದ ಮುಕ್ತರಾದಾಗ ಕನ್ಯೆಗಳು ದೊರಕಿ ಲಗ್ನವಾಗುತ್ತವೆ. ಅನಂತರ ಹೊಸ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕುಂಚುಟಿಗ ಮಠದ ಶಾಂತವೀರ ಸ್ವಾಮೀಜಿ ನುಡಿದಿದ್ದಾರೆ.

- ಹಾಲಿವಾಣದಲ್ಲಿ ಬೀರಲಿಂಗೇಶ್ವರ ದೊಡ್ಡ ಎಡೆ ಮಹೋತ್ಸವ, ಸಾಮೂಹಿಕ ವಿವಾಹ ಸಮಾರಂಭ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಯುವಕರು ದುಶ್ಚಟಗಳಿಂದ ಮುಕ್ತರಾದಾಗ ಕನ್ಯೆಗಳು ದೊರಕಿ ಲಗ್ನವಾಗುತ್ತವೆ. ಅನಂತರ ಹೊಸ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕುಂಚುಟಿಗ ಮಠದ ಶಾಂತವೀರ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ಹಾಲಿವಾಣ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಾಲಯದ ಸಮಿತಿ ಶುಕ್ರವಾರ ಏರ್ಪಡಿಸಿದ್ದ ಬೀರಲಿಂಗೆಶ್ವರ ದೊಡ್ಡ ಎಡೆ, ಮಹೋತ್ಸವ ಸಾಮೂಹಿಕ ವಿವಾಹ ಮಹೋತ್ಸವ, ಧಾರ್ಮಿಕ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು.

ಈ ಹಿಂದೆಯೂ ಹಳ್ಳಿಗಳಲ್ಲಿ ಕಾಲರಾ ಮಲೇರಿಯಾಗಳು ಹರಡಿದ್ದವು. ಪ್ರಸ್ತುತ ಗುಟ್ಕಾ, ಮದ್ಯಪಾನ ಎಂಬ ಹೆಮ್ಮಾರಿಗಳು ಯುವಜನರನ್ನು ಕಾಡುತ್ತಿವೆ. ತೋಟಗಳಲ್ಲಿರುವ ಚಿಕ್ಕ ಮನೆಗಳು ಇಸ್ಪೀಟ್ ಅಡ್ಡೆಗಳಾಗಿವೆ. ಜತೆಗೆ ಮೌಢ್ಯತೆ, ಕಂದಾಚಾರ ಮತ್ತು ದುರಾಚಾರಗಳಿಂದ ಯುವಕರಿಗೆ ವಿವಾಹಕ್ಕೆ ಕನ್ಯೆಗಳು ಸಿಗಂದಂತಾಗಿ ಕೌಟುಂಬಿಕ ವ್ಯವಸ್ಥೆ ಹಾಳಾಗಿವೆ ಎಂದು ವಿಷಾದಿಸಿದರು.

ಹತ್ತನೇ ತರಗತಿ ಓದಿ ದುಶ್ಚಟಗಳಿಗೆ ದಾಸರಾದ ಯುವಕರಿಗೆ ಡಿಗ್ರಿ ಓದಿದ ಯುವತಿ ಲಗ್ನವಾಗಲು ಮುಂದೆ ಬಾರದ ಸ್ಥಿತಿ ಇದೆ. ಸರ್ಕಾರ ಮದ್ಯವನ್ನು ಕುಡಿಸೋದು, ಕುಡಿಬೇಡಿ ಎಂದು ಜನಪ್ರತಿನಿಧಿಗಳು ಭಾಷಣ ಮಾಡೋದು ಯಾವ ನ್ಯಾಯ? ಸರ್ಕಾರವೇ ಮದ್ಯವನ್ನು ನಿಷೇಧ ಮಾಡಬೇಕು ಅಥವಾ ಮಹಿಳಾ ಸಂಘಟನೆಗಳು ಪಾನ ನಿಷೇಧಕ್ಕೆ ಬಡಿಗೆ ಹಿಡಿದು ಸಿದ್ಧರಾಗಿ ನಿಲ್ಲಬೇಕು ಎಂದು ಸ್ವಾಮೀಜಿ ತಾಕೀತು ಮಾಡಿದರು.

ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ನವಜೋಡಿಗಳು ಯಾರೂ ತಮ್ಮ ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸದೇ, ನರಕ ತೋರಿಸದೇ ಅವರ ಸೇವೆ ಮಾಡುತ್ತಾ ಸ್ವರ್ಗಕ್ಕೆ ಕಳಿಸಿ. ದುಶ್ಚಟಗಳಿಂದ ಚಿಕ್ಕ ಮಕ್ಕಳು ನಶೆಯಲ್ಲಿ ತೇಲಾಡುತ್ತಿರುವ ಸಂಗತಿಗಳನ್ನು ಕಾಣುತ್ತೇವೆ. ಹಿರಿಯರು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಣೆ ಮಾಡಬೇಕಿದೆ ಎಂದು ತಿಳಿಸಿದರು.

ಭಾಜಪ ಮುಖಂಡ ಚಂದ್ರಶೇಖರ್ ಮಾತನಾಡಿ, ಭಾರತದಲ್ಲಿ ಗಂಡು- ಹೆಣ್ಣಿನ ಅನುಪಾತ ಸಮನಾಗಿದೆ. ಯುವಕರಿಗೆ ವಿವಾಹಕ್ಕೆ ಕನ್ಯೆ ಸಿಗಲ್ಲ ಎಂಬ ಮಾತು ಸುಳ್ಳಾಗಿದೆ. ಕಾಯಕವನ್ನೇ ಮರೆತು ಯುವಕರು ವ್ಯಸನಿಗಳಾಗಬಾರದು. ಇಲ್ಲಿನ ೧೨ ನವ ಜೋಡಿಗಳಿಂದ ಪೋಷಕರ ₹೫೦ ಲಕ್ಷ ಉಳಿತಾಯವಾಗಿದೆ ಎಂದರು.

ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ೩೩ ವರ್ಷಗಳಿಂದ ಹಾಲಿವಾಣ ಗ್ರಾಮದಲ್ಲಿ ಸಾಮೂಹಿಕ ವಿವಾಹ ನಡೆಸುತ್ತಿರುವುದು ಸುಲಭದ ಸೇವೆಯಲ್ಲ. ಸಾವಿರಾರು ಲಗ್ನಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ವಧೂ-ವರರ ಕುಟುಂಬಕ್ಕೆ ಕೋಟಿ ರು. ಉಳಿತಾಯವಾಗಿದೆ ಎಂದು ಗ್ರಾಮಸ್ಥರ ಕಾರ್ಯವನ್ನು ಶ್ಲಾಘಿಸಿದರು.

ಹದಡಿ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ ಹಾಜರಿದ್ದರು. ಬಿ.ಕೆ. ಲೀಲಾಜಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ಮೇಲ್ವಿಚಾರಕಿ ಗೀತಾ, ಡಾ. ರಶ್ಮಿ, ಕುಂಬಳೂರು ವಿರೂಪಾಕ್ಷಪ್ಪ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀದೇವಿ, ಎಸ್‌.ಜಿ. ಬಸವರಾಜಪ್ಪ, ಎಸ್‌.ಜಿ. ಪರಮೇಶ್ವರಪ್ಪ, ಪಿ.ಹಾಲೆಶಪ್ಪ, ಚಿಕ್ಕಪ್ಪ, ಮಂಜುಳಮ್ಮ, ಗಂಗಮ್ಮ, ವಿಜಯಲಕ್ಷ್ಮೀ, ಜಿ.ಮಂಜುನಾಥ್ ಜನಪ್ರತಿನಿಧಿಗಳು ಇದ್ದರು. ಪ್ರೇರಣಾ ಗೆಳಯರ ಬಳಗದ ಪದಾಧಿಕಾರಿಗಳು ನವಜೋಡಿಗಳಿಗೆ ಕಾಣಿಕೆ ವಿತರಿಸಿದರು.

- - -

-ಚಿತ್ರ-೩: