ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಹಾಗೂ ರಾಜಕೀಯ ಉದ್ದೇಶ ಹಾಗೂ ವ್ಯಾಪಾರ ಮನೋಭಾವದಿಂದ ಇಲ್ಲಿಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಸಂಸದ ಶ್ರೇಯಸ್ ಎಂ.ಪಟೇಲ್ ಅವರ ಪ್ರಾಯೋಜಕತ್ವದಲ್ಲಿ ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಸಾಂಸ್ಕೃತಿಕ ವೈಭವ ತಂಡದ ೩೫೦ಕ್ಕೂ ಹೆಚ್ಚು ಕಲಾವಿದರು ಪ್ರದರ್ಶಿಸಿದ ಯೋಗ ಹಾಗೂ ವಿವಿಧ ಪ್ರಕಾರದ ನೃತ್ಯಗಳನ್ನು ನೋಡಿದ ಕಲಾಸಕ್ತರು ಹಾಗೂ ಸಾರ್ವಜನಿಕರು ಸಂಸದರ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಸಂಸದ ಶ್ರೇಯಸ್ ಎಂ.ಪಟೇಲ್ ಕಾರ್ಯಕ್ರಮ ಉದ್ಘಾಟಿಸಿ, ಇತ್ತೀಚಿನ ದಿನಗಳಲ್ಲಿ ಕಲೆ, ಸಾಹಿತ್ಯ ಹಾಗೂ ಭಾರತೀಯ ಸಂಸ್ಕೃತಿಯ ಪಾಲನೆ ಮರೀಚಿಕೆಯಾಗುತ್ತಿದೆ. ಆದ್ದರಿಂದ ಪೂರ್ವಿಕರು ಹಾಕಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲೆ, ಸಾಹಿತ್ಯ ಹಾಗೂ ಇತರೆ ವಿಷಯಗಳನ್ನು ಭಾರತೀಯರಾದ ನಾವು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವ ಕಾರ್ಯ ಹಾಗೂ ಜವಾಬ್ದಾರಿ ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥರಾದ ಮೋಹನ್ ಆಳ್ವ ಅವರು ಕಲೆ, ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಿಸ್ವಾರ್ಥತೆಯಿಂದ ರಾಜ್ಯದ್ಯಾಂತ ನೀಡುತ್ತಿರುವ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಮಹತ್ವದ್ದಾಗಿದೆ. ನಾವು ಸಹ ಈ ರೀತಿಯ ಕಾರ್ಯಕ್ರಮಗಳನ್ನು ಅಭಿನಂದಿಸುವ ಜತೆಗೆ ಅರ್ಥೈಸಿಕೊಂಡು, ಸಾಂಸ್ಕೃತಿಯ ಪಾಲನೆಯನ್ನು ಜೀವನದಲ್ಲಿ ರೂಢಿಸಿಕೊಂಡು ಮುನ್ನಡೆಯೋಣವೆಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥರಾದ ಮೋಹನ್ ಆಳ್ವ ಮಾತನಾಡಿ, ಸಾಂಸ್ಕೃತಿಕ ಬದುಕಿನ ಮೂಲಕ ನಾವು ಒಟ್ಟಾಗಬೇಕು, ಜಿಲ್ಲೆ ಜಿಲ್ಲೆಗಳ ನಡುವೆ ಇರುವ ಕಂದಕ ದೂರವಾಗಬೇಕು. ಮನೋರಂಜನೆ ನೀಡುವ ಜತೆಗೆ ಉತ್ತಮ ಸಂದೇಶ ನೀಡಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದೇಶದಲ್ಲಿ ೫೨ ಕೋಟಿ ಯುವ ಜನತೆಯ ಸಂಪತ್ತು ಇದ್ದು, ಹೆಚ್ಚು ಸಂಪತ್ಬರಿತವಾದ ಜಾತ್ಯತೀತ ದೇಶದಲ್ಲಿ ಬದಲಾವಣೆಗಳನ್ನು ಕಂಡಿದ್ದರೂ, ವಿದ್ಯಾವಂತರು ಹೆಚ್ಚುತ್ತಿದ್ದರೂ, ಸಂಕುಚಿತ ಮನೋಭಾವ ಹೆಚ್ಚುತ್ತಿದೆ. ಸಾಮರಸ್ಯದ ಹಾಗೂ ಅನ್ಯೋನತೆಯ ಬದುಕು ರೂಢಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರಲ್ಲೂ ಸಾಮರಸ್ಯದ ಜೀವನ ರೂಪಿಸಲು ಸಾಂಸ್ಕೃತಿಕ ಕ್ರಿಯೆಯಿಂದ ಮಾತ್ರ ಸಾಧ್ಯವಾಗಲಿದೆ ಎಂದು ತಿಳಿಸಿದರು.
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಹಾಗೂ ರಾಜಕೀಯ ಉದ್ದೇಶ ಹಾಗೂ ವ್ಯಾಪಾರ ಮನೋಭಾವದಿಂದ ಇಲ್ಲಿಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.ಆಳ್ವಾಸ್ ಸಾಂಸ್ಕೃತಿಕ ವೈಭವ ತಂಡದ ಕಲಾವಿದರು ಸಾಂಸ್ಕೃತಿಕ ವೈಭವದ ವೇಳೆ ಕಲಾತ್ಮಕ ಯೋಗ, ಶಾಸ್ತ್ರೀಯ ನೃತ್ಯ, ಆಂಧ್ರದ ಜನಪದ ಬಂಜಾರ ನೃತ್ಯ, ದಾಂಡೀಯ, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ, ಪುರಲಿಯ ಸಿಂಹ ನೃತ್ಯ, ಯಕ್ಷಗಾನ, ಬೊಂಬೆ ವಿನೋಧಾವಳಿ ಪ್ರದರ್ಶನದ ಪ್ರಾರಂಭದಿಂದ ಕೊನೆತನಕ ಸಾವಿರಾರು ಕಲಾಭಿಮಾನಿಗಳು ಕೊರೆಯುವ ಚಳಿಯಲ್ಲೂ ತನ್ಮಯತೆಯಿಂದ ಕಾರ್ಯಕ್ರಮ ವೀಕ್ಷಿಸಿ, ಸಂಸದರ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸುವ ಜತೆಗೆ ಕಲಾವಿದರ ಸಮಯಪ್ರಜ್ಞೆ ಹಾಗೂ ನೈಪುಣ್ಯತೆಯನ್ನು ಅಭಿನಂದಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಲಕ್ಷ್ಮಣ್ ಸ್ವಾಗತಿಸಿದರು, ಜಾವಗಲ್ ಪ್ರಸನ್ನ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.