ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸುಧಾ ಮೂರ್ತಿ ಅವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ, ಅವರ ಸಮಾಜಮುಖಿ ಕಾರ್ಯಗಳು ದೇಶದಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿವೆ.

ಸಕಲೇಶಪುರ: ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಶ್ರೀ ಸಕಲೇಶ್ವರ ಸ್ವಾಮಿ ದೇವಾಲಯಕ್ಕೆ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರು, ಸಮಾಜಸೇವಕಿ ಸುಧಾ ಮೂರ್ತಿ ಅವರು ಭೇಟಿ ನೀಡಿದ್ದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರನ್ನು ಸಕಲೇಶಪುರ-ಆಲೂರು- ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರು ಆತ್ಮೀಯವಾಗಿ ಭೇಟಿಯಾಗಿ ಗೌರವ ಸನ್ಮಾನ ಮಾಡಿದರು. ಶಾಸಕರು ಮಾತನಾಡಿ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸುಧಾ ಮೂರ್ತಿ ಅವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ, ಅವರ ಸಮಾಜಮುಖಿ ಕಾರ್ಯಗಳು ದೇಶದಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿವೆ ಎಂದು ಪ್ರಶಂಸಿಸಿದರು.

ಶ್ರೀಮತಿ ಸುಧಾಮೂರ್ತಿ ಅವರು ಮಾತನಾಡಿ, ಸಕಲೇಶ್ವರ ಸ್ವಾಮಿ ದೇವಾಲಯದ ಆಧ್ಯಾತ್ಮಿಕ ಮಹತ್ವ ಹಾಗೂ ಶಾಂತ ವಾತಾವರಣ ಮನಸ್ಸಿಗೆ ಅಪಾರ ನೆಮ್ಮದಿ ನೀಡಿದೆ. ತಮ್ಮನ್ನು ಗೌರವಿಸಿದ ಶಾಸಕರು ಹಾಗೂ ಸಕಲೇಶಪುರದ ಜನತೆಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಸಮಾಜಸೇವೆಯ ಕಾರ್ಯಗಳನ್ನು ಮುಂದುವರಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.ಈ ಗೌರವ ಸಮಾರಂಭದಲ್ಲಿ ಶಾಸಕರ ಪತ್ನಿ ಪ್ರತಿಭಾ ಮಂಜುನಾಥ್ ಉಪಸ್ಥಿತರಿದ್ದು, ಸುಧಾ ಮೂರ್ತಿ ಅವರಿಗೆ ಶುಭಾಶಯಗಳನ್ನು ತಿಳಿಸಿದರು. ಜೊತೆಗೆ ಸ್ಥಳೀಯ ಮುಖಂಡರು, ದೇವಾಲಯದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.