ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಶ್ರೀರಾಮರಂಗಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಮಹಾಜನ ಸಭೆ ಸಂಘದ ಅಧ್ಯಕ್ಷ ತಾಳೂರು ವೆಂಕಟರಮಣ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಜರುಗಿತು.ಸಂಘದ ಮುಖ್ಯ ಕಾರ್ಯನಿರ್ವಾಹಕ ಎಸ್. ರಮೇಶ್ ವಾರ್ಷಿಕ ಲೆಕ್ಕಪತ್ರ ವರದಿ ಮಂಡಿಸಿ ಸಂಘವು ಒಟ್ಟು 3377 ಮಂದಿ ಸದಸ್ಯರನ್ನು ಹೊಂದಿದೆ. ₹89.89 ಲಕ್ಷ ಶೇರು ಬಂಡವಾಳ ಇದೆ. 516 ರೈತರಿಗೆ ₹5.49 ಲಕ್ಷ ಬೆಳೆಸಾಲ ವಿತರಿಸಲಾಗಿದೆ. ₹10 ಲಕ್ಷ ಐಪಿ ಸೆಟ್ ಸಾಲ ನೀಡಲಾಗಿದೆ. 69 ರೈತರಿಗೆ ₹21.88 ಲಕ್ಷ ಹೈನುಗಾರಿಕೆ (ಪಶುಸಂಗೋಪನೆ) ಸಾಲ ಒದಗಿಸಲಾಗಿದೆ. ಕೃಷಿ ಅವಶ್ಯಕತೆಗಾಗಿ ₹34.19 ಲಕ್ಷ ರಸಗೊಬ್ಬರ ಹಾಗೂ ₹4.98 ಲಕ್ಷ ಸಿಮೆಂಟ್ ಖರೀದಿಸಿ ಸದಸ್ಯರಿಗೆ ಪೂರೈಸಲಾಗಿದೆ. ಈ ವ್ಯವಹಾರಗಳ ಮೂಲಕ ಸಂಘವು ₹1.79 ಲಕ್ಷ ವ್ಯಾಪಾರ ಲಾಭ ಗಳಿಸಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಂಘದ ಮುಂದಿನ ಚಟುವಟಿಕೆಗಳು, ಸಾಲ ಮರುಪಾವತಿ, ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಯಿತು.
ಅಧ್ಯಕ್ಷ ತಾಳೂರು ವೆಂಕಟರಮಣ ಮಾತನಾಡಿ, ಸಂಘವು ರೈತರ ಸಹಾಯಕ್ಕಾಗಿ ಸದಾ ಬದ್ಧವಾಗಿದೆ. ಸರಿಯಾದ ಸಮಯದಲ್ಲಿ ಸಾಲ ವಿತರಣೆಯ ಜೊತೆಗೆ ರಸಗೊಬ್ಬರ, ಸಿಮೆಂಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರ ಹಿತಾಸಕ್ತಿಗೆ ತಕ್ಕಂತೆ ಇನ್ನಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭ ಸಂಘದ ಉಪಾಧ್ಯಕ್ಷ ಬಿ.ಯಲ್ಲಪ್ಪ, ನಿರ್ದೇಶಕರಾದ ಮೋದಿಪಳ್ಳಿ ರಾಮಚಂದ್ರ, ಬೋಯಪಾಟಿ ಚಿನ್ನಹನುಮಂತ, ಪಿ.ಚಂದ್ರಕಲಾ, ದಬ್ಬರ ವೆಂಕಟನಾರಾಯಣ, ತಾಳೂರು ಅಂಗಡಿ ಶ್ರೀನಿವಾಸುಲು, ಪಿ. ರಾಜಾಸಾಬ್, ಮೋದಿಪಳ್ಳಿ ಗೋಪಾಲ, ವಿ.ಗೋವಿಂದ, ಬಿ.ನಾರಾಯಣಸ್ವಾಮಿ, ಪಿ.ವಿಜಯಲಕ್ಷ್ಮಿ, ಮೋದಿಪಳ್ಳಿ ಮಾರುತಿ, ಪ್ರಸಾದ ಸೇರಿದಂತೆ ಇತರರಿದ್ದರು.