ಸಾರಾಂಶ
ಕೊಪ್ಪಳ: ಗೇಟ್ ನಂ. 63 ರೈಲ್ವೆ ಸೇತುವೆ ಲಿಂಕ್ ರಸ್ತೆ ನಿರ್ಮಾಣ ಮಾಡದೆ ಇರುವುದಕ್ಕೆ ಮಹಿಳೆಯರು ಸಿಡಿದೆದ್ದಿದ್ದಾರೆ.
ಗೇಟ್ ನಂ. 63 ಕೆಳಸೇತುವ ಹೋರಾಟ ಸಮಿತಿ ಸಭೆ ನಡೆಸಿ, ಹೋರಾಟಕ್ಕೆ ನಿರ್ಧಾರ ಮಾಡಿದ ಬೆನ್ನಲ್ಲೇ ಆಂಜನೇಯ ದೇವಸ್ಥಾನ ಬಡಾವಣೆಯ ಮಹಿಳೆಯರೆಲ್ಲರೂ ಸಭೆ ಸೇರಿ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಿವಾಸದ ಮುಂದೆ ಹಮ್ಮಿಕೊಂಡಿರುವ ಹೋರಾಟದಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.ಆಂಜನೇಯ ದೇವಸ್ಥಾನದಲ್ಲಿ ಮಹಿಳೆಯರು ಸಭೆ ಸೇರಿ ಈ ನಿರ್ಧಾರ ಮಾಡಿದ್ದು, ಪುರುಷರು ಅಷ್ಟೇ ಅಲ್ಲ, ನಾವು ಸಹ ಹೋರಾಟದಲ್ಲಿ ಪಾಲ್ಗೊಳ್ಳೋಣ ಎಂದು ಹೇಳಿದ್ದಾರೆ.
ಪುರುಷರಿಗೆ ಬೈಕ್, ಕಾರ್ ಇರುತ್ತವೆ, ಅದರಲ್ಲಿ ಅವರು ಓಡಾಡುತ್ತಾರೆ. ಆದರೆ, ನಮ್ಮ ಮಕ್ಕಳು ಶಾಲೆಗೆ ಹೋಗಲು, ಅವರಿಗೆ ಬುತ್ತಿ ಕೊಡಲು ನಾವು ಹೋಗಬೇಕು. ಇದೇ ಮಾರ್ಗದಲ್ಲಿ ರೈಲ್ವೆ ಹಳಿ ದಾಟಿಕೊಂಡು ನಿತ್ಯ ಸುತ್ತಾಡುವವರು ನಾವು. ಹೀಗಾಗಿ, ಈ ಹೋರಾಟದಲ್ಲಿ ನಾವು ಭಾಗವಹಿಸೋಣ ಎಂದು ಹೇಳಿದರು.ಕೊಪ್ಪಳ ಭಾಗ್ಯನಗರ ರೈಲ್ವೆ ಗೇಟ್ 63 ಕೆಳಸೇತುವೆ ನಿರ್ಮಾಣ ಮಾಡಿದ್ದರೂ ಅದಕ್ಕೆ ಲಿಂಕ್ ರಸ್ತೆ ಇರದೆ ಇರುವುದರಿಂದ ನಿರ್ಮಾಣ ಮಾಡಿರುವ ಸೇತುವೆ ಬಂದ್ ಮಾಡಿದ್ದಾರೆ. ಹೀಗಾಗಿ, ಸೇತುವೆ ನಿರ್ಮಾಣ ಮಾಡಿದರೂ ಇಲ್ಲದಂತೆ ಆಗಿದ್ದು, ರೈಲ್ವೆ ಹಳಿ ದಾಟಿ ಹೋಗುವುದು ತಪ್ಪಿಲ್ಲ. ಪಕ್ಕದಲ್ಲಿಯೇ ಶಾಲೆ ಇದೆ. ನಿತ್ಯವೂ ನೂರಾರು ಮಕ್ಕಳು ಶಾಲೆಗೆ ರೈಲ್ವೆ ಹಳಿ ದಾಟಿಯೇ ಹೋಗುತ್ತಾರೆ. ಇಷ್ಟಾದರೂ ಪೂರ್ಣಗೊಂಡಿರುವ ರೈಲ್ವೆ ಸೇತುವೆ ಲಿಂಕ್ ರಸ್ತೆ ಮಾಡದೆ ಇದ್ದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಗೇಟ್ ನಂಬರ್ 63 ಹೋರಾಟ ಸಮಿತಿಯು ಸೆ. 25ರಂದು ಹೋರಾಟ ಹಮ್ಮಿಕೊಂಡಿದ್ದು, ಹೋರಾಟ ಬೆಂಬಲಿಸಿ ಮಹಿಳೆಯರು ಸಹ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.ಗೇಟ್ ನಂಬರ್ 63 ಇದರ ಕೆಳಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತು ಇಂದಿಗೆ ಸುಮಾರು 8 ವರ್ಷಗಳಾಗಿವೆ. ಇದನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಕೊಪ್ಪಳದ ಶಾಸಕರು, ಸಂಸದರು ಹಾಗೂ ಜಿಲ್ಲಾಡಳಿತಕ್ಕೆ ಹೋರಾಟ ಸಮಿತಿ ಹಲವಾರು ಬಾರಿ ಮನವಿ ಸಲ್ಲಿಸಿದರೂ, ಯಾರೂ ನಮ್ಮ ಮನವಿಗೆ ಇದುವರೆಗೂ ಸ್ಪಂದಿಸದಿರುವುದರಿಂದ ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, ಎಲ್ಲರೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸೋಣ ಎಂದು ಸೇರಿದ್ದ ಮಹಿಳೆಯರು ಒಕ್ಕೊರಲಿನಿಂದ ಹೇಳಿದ್ದಾರೆ.
ಬೆಳಗ್ಗೆ 11ಕ್ಕೆ ಸ್ವಾಮಿ ವಿವೇಕಾನಂದ ಶಾಲೆಯ ಹತ್ತಿರದಿಂದ ಪ್ರತಿಭಟನೆ ಮೆರವಣಿಗೆ ಹೊರಟು ಬಿ.ಟಿ. ಪಾಟೀಲ ನಗರದಲ್ಲಿರುವ ಶಾಸಕರ ಮನೆಯ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿ, ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.ಮಹಿಳಾ ಸಂಘಟನೆಯ ಮುಖಂಡರಾದ ಗೀತಾ ಪಾಟೀಲ, ಸವಿತಾ ಬನ್ನಿಕೊಪ್ಪ, ಪಾರ್ವತಿ ಹಿರೇಮಠ, ಗಂಗು ಮೇಳಿ, ಗೀತಾ ಹೊಸಬಾವಿ, ಜ್ಯೋತಿ ಪುರೋಹಿತ, ನಾಗಮ್ಮ ತೋಟದ, ರೇಖಾ ದೇಸಾಯಿ, ಪುಷ್ಪಾ, ಶೋಭಾ ಇದ್ದರು.