ಸಾರಾಂಶ
ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಂಗಾಮತಸ್ಥ ಸಮಾಜದ ಬಾಂಧವರು ಜಾತಿ ಕಾಲಂನಲ್ಲಿ ಬೆಸ್ತರ್ ಎಂದು ನಮೂದಿಸುವಂತೆ ರಾಜ್ಯ ಗಂಗಾಮತಸ್ಥರ ಸಂಘದ ಜಿಲ್ಲಾ ನಿರ್ದೇಶಕ ಶರಣಪ್ಪ ಕಾಯಿಗಡ್ಡಿ ಮನವಿ ಮಾಡಿದರು.
ಕಾರಟಗಿ: ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಂಗಾಮತಸ್ಥ ಸಮಾಜದ ಬಾಂಧವರು ಜಾತಿ ಕಾಲಂನಲ್ಲಿ ಬೆಸ್ತರ್ ಎಂದು ನಮೂದಿಸುವಂತೆ ರಾಜ್ಯ ಗಂಗಾಮತಸ್ಥರ ಸಂಘದ ಜಿಲ್ಲಾ ನಿರ್ದೇಶಕ ಶರಣಪ್ಪ ಕಾಯಿಗಡ್ಡಿ ಮನವಿ ಮಾಡಿದರು.
ಶನಿವಾರ ಸಮಾಜದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿರುವ ೪೦ ಲಕ್ಷ ಗಂಗಾಮತಸ್ಥರನ್ನು ವಿವಿಧ ಜಿಲ್ಲೆಗಳಲ್ಲಿ ೩೭ ಪರ್ಯಾಯ ಪದಗಳಿಂದ ಕರೆಯಲಾಗುತ್ತಿದೆ. ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬಲಿಷ್ಠಗೊಳಿಸುವ ಉದ್ದೇಶದಿಂದ ಸಮಾಜವನ್ನು ಏಕರೂಪವಾಗಿ ಗುರುತಿಸಲು ಅನುಕೂಲವಾಗುವಂತೆ ರಾಜ್ಯ ಗಂಗಾಮತಸ್ಥರ ಸಂಘ ಕೈಗೊಂಡಿರುವ ನಿರ್ಧಾರದ ಹಿನ್ನೆಲೆಯಲ್ಲಿ ನಿಮ್ಮ ಮನೆಗೆ ಗಣತಿದಾರರು ಬಂದಾಗ ಕ್ರಮ ಸಂಖ್ಯೆ ೯ರ ಜಾತಿ ಕಲಂನಲ್ಲಿ ಬೆಸ್ತರ್ ಎಂದೇ ಬರೆಸಬೇಕು. ಕ್ರಮ ಸಂಖ್ಯೆ ೧೦ರಲ್ಲಿ ಉಪ ಜಾತಿ ಕಲಂನಲ್ಲಿ ನೀವು, ನಿಮ್ಮ ಕುಟುಂಬದ, ಮಕ್ಕಳ ಜಾತಿ ಪ್ರಮಾಣ ಪತ್ರದಲ್ಲಿನ ಜಾತಿಯ ಹೆಸರು (ಶಾಲಾ ದಾಖಲೆಯಲ್ಲಿ ಇರುವಂತೆ ಪರ್ಯಾಯ ೩೭ ಪದಗಳಲ್ಲಿ ಒಂದನ್ನು) ಬರೆಸಿ. ಕ್ರಮ ಸಂಖ್ಯೆ ೧೧ರಲ್ಲಿ ಜಾತಿಗೆ ಇರುವ ಇನ್ನಿತರ ಪರ್ಯಾಯ ಹೆಸರುಗಳ ಮುಂದೆ, ಕುಲ ಕಸುಬು ಎನ್ನುವ ಕಾಲಂನಲ್ಲಿ ಕಬ್ಬೇರ್, ಅಂಬಿಗ, ಬಾರೀಕ, ಸುಣಗಾರ, ಗಂಗಾಮತ ಎನ್ನುವ ಪದಗಳನ್ನು ಬರೆಯಿಸಬೇಕು. ಕೊನೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು ಎಂದರು.ಅನಕ್ಷರಸ್ಥರೇ ಹೆಚ್ಚು ಇರುವ, ಕೃಷಿ, ಕೂಲಿ ಕಾರ್ಮಿಕರಾಗಿ ಗ್ರಾಮೀಣ ಭಾಗದಲ್ಲಿ ದುಡಿಯುತ್ತಿರುವ ಜನತೆಗೆ ಗಣತಿ ವೇಳೆ ಸಮರ್ಪಕ ಮಾಹಿತಿ ನೀಡಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಕರಪತ್ರಗಳನ್ನು, ಮನೆ ಗೋಡೆಗಳಿಗೆ ಸ್ಟಿಕ್ಕರ್‌ಗಳನ್ನು ಮಾಡಿಸಲಾಗಿದೆ. ಹಳ್ಳಿ, ಗ್ರಾಮಗಳಿಗೆ ತೆರಳಿ ಸಮಾಜ ಬಾಂಧವರ ಮನೆಯ ಗೋಡೆಗಳಿಗೆ ಅಂಟಿಸುವ ಕೆಲಸ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಆಯಾಯ ಗ್ರಾಮಗಳ ಮುಖಂಡರು ಹಾಗೂ ಯುವಕರು ಕೂಡಾ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಮಾಜದ ಅಯ್ಯಪ್ಪ ಸಂಗಟಿ, ಹನುಮಂತಪ್ಪ ಸಿಂಗಾಪುರ, ಸಿದ್ದಪ್ಪ ಬೇವಿನಾಳ, ತಿಪ್ಪಣ್ಣ ಮೂಲಿಮನಿ, ಯಮನಪ್ಪ ಮೂಲಿಮನಿ, ವೀರೇಶ ಮೂಲಿಮನಿ, ಕಾಶೀನಾಥ ಕಂಪ್ಲಿ, ಧನಂಜಯ ಕಬ್ಬೇರ, ದೊಡ್ಡ ತಾಯಪ್ಪ, ಆನಂದ ಬಂದೂಕು, ಯಂಕೋಬ ಮೂಲಿಮನಿ, ಸಣ್ಣ ಹನುಮಂತಪ್ಪ ಮೂಲಿಮನಿ, ಪಂಪಾಪತಿ ಕುದುರೆಮನಿ, ವೀರೇಶ್ ಸಿರುಗುಂಪ, ಯಮನೂರಪ್ಪ ಬೇವಿನಾಳ, ಅಯ್ಯಪ್ಪ ನಡುವಿ, ವೀರೇಶ್ ಕೋಟ್ಯಾಳ, ಪ್ರದೀಪ್ ಪರಾಶಿ ಇನ್ನಿತರರು ಇದ್ದರು.