ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ನವಭಾರತದ ಆಶಾಕಿರಣ, ಧಮನಿತರ ಧ್ವನಿ, ಸಂವಿಧಾನ ಶಿಲ್ಪಿ, ಭಾರತ ರತ್ನ, ಬಿರುದಾಂಕಿತರು ನಮ್ಮೆಲ್ಲರಿಗೂ ಆದರ್ಶನಿಯ ವ್ಯಕ್ತಿತ್ವದವರು
ಕುಷ್ಟಗಿ: ಪಟ್ಟಣದ ಕ್ರೈಸ್ತ ದಿ ಕಿಂಗ್ ಶಾಲೆಯಲ್ಲಿ ತಾಲೂಕಾಡಳಿತ, ಪೊಲೀಸ್ ಇಲಾಖೆ, ದಲಿತಪರ ಸಂಘಟನೆಗಳ ಒಕ್ಕೂಟ, ಕನ್ನಡ ಪರ ಸಂಘಟನೆಗಳ ಒಕ್ಕೂಟ, ಇತರೆ ಸಂಘಟನೆಗೆ ಸಹಯೋಗದಲ್ಲಿ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ಡಾ. ಬಿ.ಆರ್.ಅಂಬೇಡ್ಕರ್ ಬದುಕು,ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ಶಾಸಕ ದೊಡ್ಡನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ನವಭಾರತದ ಆಶಾಕಿರಣ, ಧಮನಿತರ ಧ್ವನಿ, ಸಂವಿಧಾನ ಶಿಲ್ಪಿ, ಭಾರತ ರತ್ನ, ಬಿರುದಾಂಕಿತರು ನಮ್ಮೆಲ್ಲರಿಗೂ ಆದರ್ಶನಿಯ ವ್ಯಕ್ತಿತ್ವದವರು. ಈ ಜಗತ್ತಿನಲ್ಲಿ ಅಪಾರ ನೋವುಂಡು ಜನರ ಬದುಕಿಗೆ ನಲಿವನ್ನು ಹಂಚಿದವರು ಎಂದು ತಿಳಿಸಿದ ಅವರು ಅಂಬೇಡ್ಕರ್ ಜಯಂತಿ ಅಂಗವಾಗಿ ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದರು.ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿ, ಇಂದಿನ ಯುವಜನತೆ ಡಾ. ಬಿ.ಆರ್. ಅಂಬೇಡ್ಕರ್ ಆದರ್ಶ ಮೈಗೂಡಿಸಿಕೊಂಡು ಅವರ ಹಾಕಿಕೊಟ್ಟ ದಾರಿಯಲ್ಲಿ ನಾವು ಮುನ್ನಡೆದು ಭವ್ಯ ಭಾರತ ಕಟ್ಟಬೇಕಾಗಿದೆ, ಜಾತಿ ಧರ್ಮ ಮತ ಪಂಥ ಮೀರಿದ ಸಾಮರಸ್ಯ, ಭಾವೈಕ್ಯತೆಯ ಭವ್ಯ ಭಾರತದಲ್ಲ ನಿರ್ಮಿಸುವಲ್ಲಿ ಬಾಬಾ ಸಾಹೇಬರ ತತ್ವ ಆದರ್ಶಗಳು ನಮಗೆ ದೊಡ್ಡ ಶಕ್ತಿ ಆಗಬೇಕು ಎಂದರು.
ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಮಾತನಾಡಿ, ಇದೊಂದು ಆದರ್ಶನೀಯ ಕಾರ್ಯಕ್ರಮ ವಿದ್ಯಾರ್ಥಿಗಳನ್ನು ಓದುವಿಗೆ ಹೆಚ್ಚಿಸುವ ವಿನೂತನ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು.ಕಾಂಗ್ರೆಸ್ ಯುವ ಮುಖಂಡ ದೊಡ್ಡ ಬಸವನಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಮೊಬೈಲ್ ಗಿಳಿನಲ್ಲಿರುವ ಯುವ ಜನತೆ ಪುಸ್ತಕಗಳ ಓದಿನ ಕಡೆಗೆ ಹೊರಳಿಸುವ ಇಂಥ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಿದಾಗ ಮಾತ್ರ ಬಾಬಾ ಸಾಹೇಬರ ಚಿಂತನೆಗಳು ಆದರ್ಶಗಳು ಜಮಾನಸದಲ್ಲಿ ಉಳಿಯುತ್ತವೆ ಎಂದರು.
ಸಿಪಿಐ ವಿಶ್ವನಾಥ್ ಹಿರೇಗೌಡರ ಮಾತನಾಡಿ, ಕಡು ಬಡತನದಲ್ಲಿ ಬೆಳೆದ ಅಂಬೇಡ್ಕರ್ ಬಡವರ ಪಾಲಿಗೆ ದೇವರಾದರು, ಧ್ವನಿಯಾದರು ಇಂದು ಅನೇಕ ಶೋಷಿತ ವರ್ಗಗಳು ಘನತೆಯಿಂದ ಬದುಕಲು ಬಾಬಾ ಸಾಹೇಬರ ಬದುಕೆ ನಮಗೆ ಆದರ್ಶ ಇಂಥ ಮಹಾನ್ ವ್ಯಕ್ತಿಯ ಆದರ್ಶ ಗುಣ ಯುವ ಜನರಿಗೆ ತಲುಪಿಸುವಲ್ಲಿ ಓದುವಿನ ಅಭಿಯಾನ ಆರಂಭಿಸುವ ಭಾಗ ಇದಾಗಿದೆ ಎಂದರು.ಇದೇ ವೇಳೆ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತಹಸೀಲ್ದಾರ್ ಅಶೋಕ್ ಶಿಗ್ಗಾಂವಿ ಸೇರಿದಂತೆ ಹಲವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಡಾಣಿ, ಕೊಪ್ಪಳ ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಹೇಮಂತ ಕುಮಾರ್, ಪಿಎಸ್ಐ ಹನುಮಂತಪ್ಪ ತಳವಾರ, ಧನಂಜಯ, ಚಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಡಾ. ಜೀವನಸಾಬ್ ವಾಲಿಕಾರ ಹಾಗೂ ಶಿಕ್ಷಕ ನಟರಾಜ್ ಸೋನಾರ್ ನಿರ್ವಹಿಸಿದರು.ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅನೇಕರು ಭಾಗವಹಿಸಿದ್ದರು.
ಗೂಗ್ಲಿ ಬಸವರಾಜ್ ಮತ್ತು ಸಂಜನಾ ಒಳಗೊಂಡ ವಿಶ್ವಜ್ಞಾನಿ ತಂಡ ಪ್ರಥಮ ಸ್ಥಾನ ಗಳಿಸಿತು, ದೇವು ಎಸ್ ಪಿ, ಅಶೋಕ್ ಕುರ್ನಾಳ್ ಒಳಗೊಂಡ ಸಂವಿಧಾನ ಶಿಲ್ಪಿ ತಂಡ ದ್ವಿತೀಯ ಸ್ಥಾನ ಗಳಿಸಿತು, ಕುರಹಟ್ಟಿ ನರಸಿಂಹ ಯಾದಗಿರಿ ಒಳಗೊಂಡ ಬೋಧಿ ಸತ್ವ ತಂಡ ತೃತೀಯ ಸ್ಥಾನ ಪಡೆದುಕೊಂಡರು.ಉಳಿದ ಮೂರು ತಂಡಗಳಿಗೆ ಐದು ಸಾವಿರ ಸಮಾಧಾನಕರ ಬಹುಮಾನ ನೀಡಲಾಯಿತು.