ದೇಶದಲ್ಲಿ ಶೇ. 48.5ರಷ್ಟು ಮಹಿಳೆಯರೇ ಇದ್ದು, ಪ್ರಧಾನಿ ಮೋದಿ ಅವರು ಮಹಿಳೆಯರಿಗೂ ರಾಜಕಾರಣದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ನಾರಿಶಕ್ತಿ ವಂದನಾ ಮಸೂದೆ ಅನುಷ್ಠಾನಗೊಳಿಸುತ್ತಿದ್ದಾರೆ
ಹಾವೇರಿ: ಕೇಂದ್ರ ಸರ್ಕಾರವು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲು ನೀಡುವ ನಾರಿಶಕ್ತಿ ವಂದನಾ ತಿದ್ದುಪಡಿ (ಮಹಿಳಾ ಮೀಸಲಾತಿ) ಮಸೂದೆ ಅನುಷ್ಠಾನಗೊಳ್ಳುತ್ತಿರುವ ಹಿನ್ನೆಲೆ ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನಮಾನವಿದೆ. ದೇಶದಲ್ಲಿ ಶೇ. 48.5ರಷ್ಟು ಮಹಿಳೆಯರೇ ಇದ್ದು, ಪ್ರಧಾನಿ ಮೋದಿ ಅವರು ಮಹಿಳೆಯರಿಗೂ ರಾಜಕಾರಣದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ನಾರಿಶಕ್ತಿ ವಂದನಾ ಮಸೂದೆ ಅನುಷ್ಠಾನಗೊಳಿಸುತ್ತಿದ್ದಾರೆ.ತೊಟ್ಟಿಲು ತೂಗುವ ಕೈ ದೇಶದ ಚುಕ್ಕಾಣಿ ಹಿಡಿಯುವ ಕೈ ಆಗಿ ಪರಿವರ್ತನೆಯಾಗುತ್ತಿದೆ. ಮಹಿಳಾ ಮೀಸಲು ಜಾರಿ ಸಂಬಂಧ ಏ. 16ರಿಂದ 18ರ ವರೆಗೆ ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಲೋಕಸಭೆ, ವಿಧಾನಸಭೆಯಲ್ಲಿ ಮಹಿಳಾ ಮೀಸಲು ಕಲ್ಪಿಸಬೇಕು ಎಂಬುದು ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಒಂದು ಕೂಗಾಗಿತ್ತು. ಕಳೆದ 30 ವರ್ಷಗಳ ಹಿಂದೆಯೇ ಇದು ಚರ್ಚೆಗೆ ಬಂದಾಗ ಕೆಲ ರಾಜಕೀಯ ಪಕ್ಷದವರು ಮಸೂದೆಯ ಪ್ರತಿಗಳನ್ನು ಹರಿದು ಹಾಕಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಈ ಮಸೂದೆ ನನೆಗುದಿಗೆ ಬಿದ್ದಿತ್ತು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಶೌಚಾಲಯ ನಿರ್ಮಾಣ, ಭೇಟಿ ಬಚಾವ್ ಭೇಟಿ ಪಡಾವ, ಮುದ್ರಾ ಯೋಜನೆ ಹೀಗೆ ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.ಸಹಿ ಸಂಗ್ರಹ, ಮಿಸ್ಡ್ ಕಾಲ್ ಅಭಿಯಾನ: ನಾರಿಶಕ್ತಿ ವಂದನಾ ತಿದ್ದುಪಡಿ ವಿಧೇಯಕ ಮಂಡನೆಗೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲು ಎಲ್ಲ ಜಿಲ್ಲೆಗಳಲ್ಲಿ ಏ. 13ರಿಂದ 18ರ ವರೆಗೆ ಮಹಿಳಾ ಮೋರ್ಚಾದಿಂದ ಮಹಿಳಾ ಜಾಗೃತಿ ಸಮಾವೇಶ ನಡೆಸಲಾಗುತ್ತದೆ. ಜಿಲ್ಲೆಯಲ್ಲಿಯೂ ವಕೀಲರು, ಡಾಕ್ಟರ್‌ಗಳು, ಎಂಜಿನಿಯರ್ಸ್ ಹೀಗೆ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಬುದ್ಧ ಮಹಿಳಾ ತಜ್ಞರನ್ನು ಗುರುತಿಸಿ ಪ್ರಬುದ್ಧರ ಮಹಿಳಾ ಸಮಾವೇಶ ಆಯೋಜಿಸಲಾಗುವುದು. ಜತೆಗೆ ಸಹಿ ಸಂಗ್ರಹ ಅಭಿಯಾನ, ವಾಕ್‌ಥಾನ್, ಮಿಸ್ಡ್ ಕಾಲ್ ಅಭಿಯಾನ, ಬೈಕ್ ರ‍್ಯಾಲಿ ಮೂಲಕ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ಶೋಭಾ ನಿಸ್ಸೀಮಗೌಡ್ರ ವಿವರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲತಾ ಬಡ್ನಿಮಠ, ವಕ್ತಾರ ನಿರಂಜನ ಹೇರೂರು ಇತರರು ಇದ್ದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಹಿಳೆಯರಿಗೂ ತನ್ನದೇ ಆದ ನಿರ್ಣಯಗಳನ್ನು ತೆಗೆದುಕೊಳ್ಳಲು, ಚಿಂತನೆ ಮಾಡಲು ನಾರಿಶಕ್ತಿ ವಂದನಾ ತಿದ್ದುಪಡಿ ಮಸೂದೆ ಅನುಕೂಲವಾಗಲಿದೆ. ಇಷ್ಟು ದಿನ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ನಡೆಸಿದ ಮಹಿಳೆಯರು ಸಮರ್ಥವಾಗಿ ಆಡಳಿತ ನಡೆಸಬಲ್ಲರು ಎಂದು ಭಾವಿಸಿ ಮಸೂದೆ ಅಂಗೀಕಾರಗೊಳಿಸಲಾಗುತ್ತಿದೆ. ಪ್ರಬುದ್ಧ ರಾಷ್ಟ್ರ ನಿರ್ಮಾಣಕ್ಕೆ ಮಹಿಳೆಯರ ಕೊಡುಗೆಯೂ ಇನ್ನುಮುಂದೆ ಮಹತ್ವದ್ದಾಗಿರುತ್ತದೆ. ಜಿಲ್ಲೆಯಲ್ಲೂ ಮಹಿಳಾ ಸಮಾವೇಶವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹಾವೇರಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಬಸಮ್ಮ ಅಬಲೂರ ತಿಳಿಸಿದ್ದಾರೆ.