ಅಂಬೇಡ್ಕರ್ ಕಂಡ ಕನಸು ಇಂದಿಗೂ ನನಸಾಗಿಲ್ಲ: ಸಂಸದ ಸುನೀಲ್‌ ಬೋಸ್‌

| Published : Apr 28 2025, 11:46 PM IST

ಅಂಬೇಡ್ಕರ್ ಕಂಡ ಕನಸು ಇಂದಿಗೂ ನನಸಾಗಿಲ್ಲ: ಸಂಸದ ಸುನೀಲ್‌ ಬೋಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅಂಬೇಡ್ಕರ್ ಕಂಡಂತ ಕನಸು ನನಸಾಗಿಲ್ಲ, ಎಷ್ಟೋ ಕಡೆ ಇನ್ನು ಅಸ್ಪೃಶ್ಯತೆ ಜೀವಂತವಾಗಿರುವುದು ದುರಂತ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

ಎಷ್ಟೋ ಕಡೆ ಇನ್ನು ಅಸ್ಪೃಶ್ಯತೆ ಜೀವಂತವಾಗಿರುವುದು ದುರಂತ । ಗುಂಡ್ಲುಪೇಟೆಯಲ್ಲಿ ಅಂಬೇಡ್ಕರ್‌ ಹಬ್ಬ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅಂಬೇಡ್ಕರ್ ಕಂಡಂತ ಕನಸು ನನಸಾಗಿಲ್ಲ, ಎಷ್ಟೋ ಕಡೆ ಇನ್ನು ಅಸ್ಪೃಶ್ಯತೆ ಜೀವಂತವಾಗಿರುವುದು ದುರಂತ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಗುಂಡ್ಲುಪೇಟೆ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬ ಉದ್ಘಾಟಿಸಿ ಮಾತನಾಡಿ, ಯಾರಾದರೂ ದಲಿತರು ದೇವಾಲಯಕ್ಕೆ ಹೋದರೆ ಸಗಣಿ ಸಾರಿಸಿ ನೀರನ್ನು ಹಾಕುತ್ತಾರೆ ಎಂದು ವಿಷಾದಿಸಿದರು.

ಮೇಲ್ವರ್ಗದವರು ಬಿಡಿ ನಮ್ಮ ದಲಿತರಲ್ಲೇ ಇನ್ನು ಜಾತೀಯತೆ ಹೋಗಿಲ್ಲ, ಮೀಸಲಾತಿ ಹಾಗೂ ಆರ್ಥಿಕವಾಗಿ ಮುಂದುವರಿದವರಲ್ಲೇ ಅಸ್ಪೃಶ್ಯತೆ ಕಾಣಬಹುದು ಎಂದರು.

ಸಂವಿಧಾನವನ್ನು ಕೊಟ್ಟಿರುವವರನ್ನೇ ಕೇವಲ ಒಂದು ಜಾತಿಗೆ, ಒಂದು ವರ್ಗಕ್ಕೆ ಮೀಸಲಾಗಿಟ್ಟಿರುವುದು ಎಷ್ಟು ಸರಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮ ದಿನವನ್ನು ಮೂರ್ನಾಲ್ಕು ದೇಶದಲ್ಲಿ ವಿಭಿನ್ನ ಹೆಸರಲ್ಲಿ ಆಚರಿಸುತ್ತಾರೆ. ಸಂವಿಧಾನ ಇರುವ ಕಾರಣ ಸಮಾನತೆ ಇದೆ. ಅಂಬೇಡ್ಕರ್ ರವರು ಒಂದು ಮಾತನ್ನು ಹೇಳುತ್ತಾರೆ. ನಾನು ಹಿಂದುವಾಗಿ ಹುಟ್ಟಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಹಿಂದುವಾಗಿ ಸಾಯಲಾರೆ ಎಂದರು. ಯಾವ ಧರ್ಮದಲ್ಲಿ ಸಮಾನತೆ ಇಲ್ಲವೋ ಅದು ಧರ್ಮವೇ ಅಲ್ಲ ಎಂದರು. ಅಂಬೇಡ್ಕರ್ ಅವರ ಜ್ಞಾನದ ಕಂಡು ವಿಶ್ವಸಂಸ್ಥೆಯಲ್ಲಿ ಜ್ಞಾನದ ದಿನ ಆಚರಣೆ ಮಾಡುತ್ತಿದ್ದಾರೆ. ಸಂವಿಧಾನ ತಂದವರನ್ನು ಜಾತಿಗೆ ಸೀಮಿತ ಮಾಡುತ್ತಿದ್ದಾರೆ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ಅಧ್ಯಕ್ಷರೂ ಆದ ಸಮಾಜದ ಸ್ನೇಹಜೀವಿ ಗೋಪಾಲ್ ಹೊರೆಯಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಮಾಜಿ ಸಂಸದ ಎ. ಸಿದ್ದರಾಜು ಸೇರಿದಂತೆ ಆಚರಣಾ ಸಮಿತಿ ನಿರ್ಧಾರದಂತೆ ಅಂಬೇಡ್ಕರ್ ಮೆರವಣಿಗೆ ಹಾಗೂ ಹಬ್ಬ ನಿರೀಕ್ಷೆಗೂ ಮೀರಿ ನಡೆದಿದ್ದು, ಅಂಬೇಡ್ಕರ್ ಹೇಳಿದಂತೆ ಹುಲಿ ಸಿಂಹಗಳಂತೆ ಬದುಕಬೇಕು, ಕುರಿ, ಕೋಳಿಗಳಂತೆ ಬದುಕಿದರೆ ಸಾಯಿಸುತ್ತಾರೆ ಎಂಬ ಅವರ ಆಶಯದಂತೆ ಸ್ವಾಭಿಮಾನ ಜೀವನ ನಡೆಸಿ ಎಂದರು.

ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರು ಅಂಬೇಡ್ಕರ್ ಹಬ್ಬಕ್ಕೆ ಬಂದ ಜನರಿಗೆ ಊಟೋಪಚಾರ ಮಾಡಿಸಿಕೊಟ್ಟಿದ್ದಾರೆ. ಅಲ್ಲದೆ ಸಂಸದರು ನಿಂತ ಅಂಬೇಡ್ಕರ್ ಪ್ರತಿಮೆ ಕೊಡಬೇಕು ಎಂದು ಮನವಿ ಮಾಡಿದರು.

ಡಾ.ಎಚ್.ಸಿ.ಮಹದೇವಪ್ಪ ಸಂದೇಶ:

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಂಬೇಡ್ಕರ್ ಹಬ್ಬಕ್ಕೆ ಒಂದು ನಿಮಿಷದ ಸಂದೇಶ ಕಳುಹಿಸಿದ್ದರು.

ಮೈಸೂರು ಉರಿಲಿಂಗ ಪೆದ್ದಿ ಮಠಾಧೀಶ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಜನರ ಮನಸ್ಸು ಗೆದ್ದವರು ಬುದ್ಧ, ಬಸವ, ಅಂಬೇಡ್ಕರ್ ಎಂದರು.

ಗುಂಡ್ಲುಪೇಟೆ ಎಸ್ ಸಿ.ಎಸ್ ಟಿ ಗಳು ಶಿಕ್ಷಣ ಕ್ರಾಂತಿ ನಡೆಸಬೇಕು. ಎಸ್ ಸಿ.ಎಸ್ ಟಿ ಯುವಕರು ಡಿಸಿ, ಎಸ್ಪಿ ಆದರೆ ಅಂಬೇಡ್ಕರ್ ಕಂಡಂತಾಗಲಿದೆ ಎಂದು ಸಲಹೆ ನೀಡಿದರು. ಅಂಬೇಡ್ಕರ್ ಮತದಾನದ ಹಕ್ಕು ಕೊಟ್ಟರು, ಮಹಿಳೆಯರಿಗೆ ಸಮಾನ ಹಕ್ಕು ಕೊಟ್ಟರು, ಶ್ರೀಮಂತರಿಗೂ ಬಡವರಿಗೂ ಒಂದೇ ಮತ ಕೊಟ್ಟರು ಎಂದರು.

ಟಿ.ನರಸೀಪುರ ನಳಂದ ಬುದ್ಧ ವಿಹಾರದ ಭಂತೆ ಬೋದಿರತ್ನ ಸಾನ್ನಿಧ್ಯ ವಹಿಸಿ ಮಾತನಾಡಿ, ಅಂಬೇಡ್ಕರ್ ಅಪ್ರತಿಮ ರಾಷ್ಟ್ರ ಪ್ರೇಮಿಯಾಗಿದ್ದರು ಎಂದರು. ಸಮಾಜದ ಜನರ ಮೇಲೆತ್ತಲು ಬುದ್ಧನ ಚಿಂತನೆ ಬಿಟ್ಟು ಹೋಗಿದ್ದಾರೆ. ಸಂಸ್ಕಾರವಂತರಾಗಲು ಅಂಬೇಡ್ಕರ್ ಆಲೋಚನೆ ಅನುಸರಿಸಬೇಕು ಎಂದರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಮಹಿಳೆಯರು ಗುಡಿಗಳಿಗೆ ಹೋಗುತ್ತಾರೆ, ಮಕ್ಕಳು ಮೊಬೈಲ್ ನಲ್ಲಿ ತಲ್ಲೀನ, ಪುರುಷರು ಮತ್ತಿನಲ್ಲಿದ್ದರೆ ಸಮಾಜ ಪ್ರಗತಿ ಸಾಧಿಸಲು ಆಗುವುದಿಲ್ಲ ಎಂದರು.

ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಚಾಮುಲ್ ಮಾಜಿ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ಮುನಿರಾಜು, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್. ನಂದಕುಮಾರ್, ಮುಖಂಡ ಇಂಧನ್ ಬಾಬು, ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಪುರಸಭೆ ಸದಸ್ಯ ರಾಜಗೋಪಾಲ್, ಜಿಪಂ ಮಾಜಿ ಸದಸ್ಯರಾದ ಹಂಗಳ ನಾಗರಾಜು, ಕೆ.ಶಿವಸ್ವಾಮಿ, ತಾಪಂ ಮಾಜಿ ಸದಸ್ಯರಾದ ಮುಕ್ಕಡಹಳ್ಳಿ ರವಿಕುಮಾರ್, ಮಲ್ಲಿದಾಸ್, ಪುರಸಭೆ ಮಾಜಿ ಸದಸ್ಯರಾದ ಮಲ್ಲರಾಜು, ಮೋಹನ್ ಕುಮಾರ್, ಮುಖಂಡರಾದ ಕಬ್ಬಹಳ್ಳಿ ನಂಜುಂಡಪ್ರಸಾದ್, ನಂಜುಂಡಸ್ವಾಮಿ, ಮುತ್ತಣ್ಣ, ಜಯಂತಿ, ರಾಘವಾಪುರ ಮಹೇಶ್, ಹಿರೀಕಾಟಿ ಶಿವು ಸೇರಿದಂತೆ ಸಾವಿರಾರು ಮಂದಿ ಉಪಸ್ಥಿತರಿದ್ದರು.

ಅಂಬೇಡ್ಕರ್ ರನ್ನು ದಲಿತ ನಾಯಕ ಎನ್ನುವುದು ತಪ್ಪು: ಡಾ. ಚಮರಂ

ಗುಂಡ್ಲುಪೇಟೆ: ಭಾರತೀಯರು ಮುಂದುವರಿದರೂ ಇನ್ನೂ ಅಂಬೇಡ್ಕರ್ ರನ್ನು ದಲಿತ ನಾಯಕ ಎನ್ನುತ್ತಿದ್ದಾರೆ. ಇದು ತಪ್ಪು ಕಲ್ಪನೆ ಎಂದು ವಿಚಾರವಾದಿ ಡಾ.ಕೃಷ್ಣಮೂರ್ತಿ ಚಮರಂ ಹೇಳಿದರು.

ಅಂಬೇಡ್ಕರ್ ಹಬ್ಬದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಜನರು ಹೋರಾಟ ನಡೆಸದೆ ದೇಶದ ಜನರಿಗೆ ಮತದಾನ ಕೊಟ್ಟವರು ಅಂಬೇಡ್ಕರ್. ಆದರೆ ದಲಿತರಿಗೆ ಓಟು ಕೊಡಿಸಲಿಲ್ಲ ಎಂದರು. ಎಲ್ಲಾ ಜಾತಿ ಮತ್ತು ಧರ್ಮದ ಮಹಿಳೆಯರಿಗೆ ಸಮಾನ ಹಕ್ಕು ಕೊಟ್ಟರು, ಇಲ್ಲೂ ದಲಿತ ಮಹಿಳೆಯರಿಗೆ ಮಾತ್ರ ಕೊಡಲಿಲ್ಲ. ಎಲ್ಲ ಮಹಿಳೆಯರಿಗೆ ಹಕ್ಕು ಕೊಟ್ಟರು ಎಂದರು. ಅಂಬೇಡ್ಕರ್ ದಲಿತ ನಾಯಕರು ಹಾಗೂ ಸರ್ವರ ನಾಯಕ. ಆದರೂ ಕೆಲವರು ಇನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಅಂಬೇಡ್ಕರ್ ಜ್ಞಾನ ಜನರ ಹೃದಯದಲ್ಲಿ ಇರಲಿ ಎಂದರು.

ಅಂಬೇಡ್ಕರ್ ರನ್ನು ಎಲ್ಲರೂ ಅಪ್ಪಿಕೊಳ್ಳಬೇಕು: ಗಣೇಶ್‌ ಪ್ರಸಾದ್‌

ಗುಂಡ್ಲುಪೇಟೆ: ಅಂಬೇಡ್ಕರ್‌ರನ್ನು ಎಲ್ಲರೂ ಅಪ್ಪಿಕೊಳ್ಳಬೇಕು, ಜಾತಿಗೆ ಸೀಮಿತ ಮಾಡುವ ಕೆಲಸ ಸೃಷ್ಟಿಯಾಗುತ್ತಿದೆ. ಇದು ಅಂತ್ಯವಾಗಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ಪಟ್ಟಣದಲ್ಲಿ ಅಂಬೇಡ್ಕರ್ ಹಬ್ಬದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಸಮಾನತೆಗೆ ಒತ್ತು ಕೊಟ್ಟ ಅಂಬೇಡ್ಕರ್ ಆಶಯ ಮೈಗೂಡಿಸಿಕೊಳ್ಳಬೇಕು ಎಂದರು.

ಮೀಸಲಾತಿಯಿಂದ ಸೀಟು ಸಿಗುತ್ತದೆ ಎಂಬ ಮನೋಭಾವನೆಯಿಂದ ಹೆಚ್ಚು ಓದುತ್ತಿಲ್ಲ, ಅದು ಆಗಬಾರದು. ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು‌ ಓದಬೇಕಿದೆ ಎಂದರು. ಹಿಂದುಳಿದ ವರ್ಗ, ದಲಿತ ಸಮಾಜದ ಮಕ್ಕಳು ಓದುವತ್ತ ಮುಖ ಮಾಡಬೇಕು. ಜೊತೆಗೆ ಪೋಷಕರು ಕೂಡ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ಅಂಬೇಡ್ಕರ್ ಅವರು ಸಂವಿಧಾನ ಬರೆದಾಗ ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತದೆ ಎಂದು ಸ್ವತಃ ಅಂಬೇಡ್ಕರ್‌ ಅವರಿಗೆ ಗೊತ್ತಿರಲಿಲ್ಲವೇನೋ ಎಂದರು.

ಅಂಬೇಡ್ಕರ್ ಸಂವಿಧಾನ ಬರೆದರು. ಸಂವಿಧಾನ ಆಶಯಗಳಂತೆ ನಡೆಯಬೇಕು ಆಗ ಮಾತ್ರ ಅಂಬೇಡ್ಕರ್ ಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.